ನನ್ನ ಗುರಿ ಇರುವುದು ಏನಿದ್ದರೂ 2023ರ ಚುನಾವಣೆಗೆ; ಐದು ವರ್ಷ ಅಧಿಕಾರ ಮಾಡಲು ಅವಕಾಶ ನೀಡಿ: ಹೆಚ್ಡಿ ಕುಮಾರಸ್ವಾಮಿ
HD Kumaraswamy: ಚಾಮರಾಜಪೇಟೆಯಲ್ಲಿ ಬಸ್ ಓಡಿಸ್ತಿದ್ದ ಮುಸ್ಲಿಂ ಯುವಕನಿಗೆ ನಾನು ಜೆಡಿಎಸ್ ಟಿಕೆಟ್ ನೀಡಿದ್ದೆ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಹಾವೇರಿ: ನನ್ನ ಗುರಿ ಇರುವುದು ಏನಿದ್ದರೂ 2023ರ ಚುನಾವಣೆಗೆ. ನನಗೆ ಐದು ವರ್ಷ ಅಧಿಕಾರ ಮಾಡಲು ಅವಕಾಶ ನೀಡಿ. ಜೆಡಿಎಸ್ ವತಿಯಿಂದ ಪಂಚರತ್ನ ಯೋಜನೆ ಮಾಡಿದ್ದೇನೆ. ರೈತರು ಸಾಲಗಾರ ಆಗಲೇ ಬಾರದು ಎಂಬ ಯೋಜನೆ ಇದೆ. ಸ್ಥಳೀಯ ಮಟ್ಟದಲ್ಲಿ ಉಚಿತವಾಗಿ ಆರೋಗ್ಯ ಸೇವೆ, 6000 ಪಂಚಾಯತ್ ಮಟ್ಟದಲ್ಲಿ ಇಂಗ್ಲಿಷ್, ಕನ್ನಡ ಶಾಲೆ,1-12ನೇ ತರಗತಿವರೆಗೆ ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡಲಿವೆ ಎಂದು ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ಜೊತೆ ಸೇರಿ ನಾವು ಒಳಸಂಚು ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪ ಜೊತೆ ಹೆಲಿಕಾಪ್ಟರ್ನಲ್ಲಿ ಹೋಗಿ ಸಿದ್ದರಾಮಯ್ಯ ಒಳಸಂಚು ಮಾಡಿದ್ದಾರೆ. ಗುತ್ತಿಗೆದಾರರು, ಬ್ಯಾಗ್ ಹಿಡಿದುಕೊಂಡು ಬರುವರನ್ನ ನೋಡಬೇಡಿ. ಬಡವರನ್ನ ನೋಡಿ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜಪೇಟೆಯಲ್ಲಿ ಬಸ್ ಓಡಿಸ್ತಿದ್ದ ಮುಸ್ಲಿಂ ಯುವಕನಿಗೆ ನಾನು ಜೆಡಿಎಸ್ ಟಿಕೆಟ್ ನೀಡಿದ್ದೆ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಸಿದ್ದರಾಮಯ್ಯ ನಾನು ಸಾಲಮನ್ನಾ ಮಾಡಿದ ಬಗ್ಗೆ ಮಾತಾಡ್ತಾರೆ. 5 ವರ್ಷ ರಾಜ್ಯವಾಳಿದ ಸಿದ್ದರಾಮಯ್ಯ ಯಾಕೆ ರೈತರ ಸಾಲ ಮನ್ನಾ ಮಾಡಲಿಲ್ಲ. ಸಾಲಮನ್ನಾ ನಿರ್ಧಾರ ಮಾಡಿದಾಗ ನೀವು ಹೇಗೆ ಸಹಕರಿಸಿದ್ರಿ? ಹೇಗೆ ಸಹಕಾರ ನೀಡಿದ್ರಿ ಸಿದ್ದರಾಮಯ್ಯನವರು ನೆನಪಿಸಿಕೊಳ್ಳಿ ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಜೆಡಿಎಸ್ ಪಕ್ಷದ ಬೇರುಗಳು ಗಟ್ಟಿಯಾಗಿವೆ: ಹೆಚ್.ಡಿ. ದೇವೇಗೌಡ ಹೆಗಡೆವಾರು ಕಟ್ಟಿದ ಆರ್ಎಸ್ಎಸ್, ಗಾಂಧಿ ಕಟ್ಟಿದ ಕಾಂಗ್ರೆಸ್ ಈಗಿಲ್ಲ. ಜೆಡಿಎಸ್ ಪಕ್ಷ ಮುಗಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಜೆಡಿಎಸ್ ಪಕ್ಷದ ಬೇರುಗಳು ಗಟ್ಟಿಯಾಗಿವೆ. ಅಷ್ಟು ಸುಲಭವಾಗಿ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದ ಆಲಮೇಲ ಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಜಮೀರ್ ಅಹ್ಮದ್ ಖಾನ್ ಗೆಲ್ಲಿಸಿದ್ದು ನಾನು. ನಾನೇ ಗಲ್ಲಿಗಲ್ಲಿಯಲ್ಲಿ ಸುತ್ತಿ ಜಮೀರ್ ಪರ ಪ್ರಚಾರ ಮಾಡಿದ್ದೆ. ನಂತರ ಅವರು ನಮ್ಮ ಪಕ್ಷ ಬಿಟ್ಟು ಹೋದ್ರು ಎಂದು ದೇವೇಗೌಡ ತಿಳಿಸಿದ್ದಾರೆ.
130 ವರ್ಷ ಇತಿಹಾಸ ಹೊಂದಿರೋ ಕಾಂಗ್ರೆಸ್ ಸ್ಥಿತಿ ಇವತ್ತು ಏನಾಗಿದೆ. ಎಲ್ಲಾ ಕಡೆ ಕಾಂಗ್ರೆಸ್ ಸೋತಿದೆ. ಪ್ರಧಾನಿ ನರೇಂದ್ರ ಮೋದಿಗೆ ಇದೀಗ ಬುದ್ದಿ ಬಂದಿದೆ. ಇದೀಗ ಅವರು ಹಿಂದುಳಿದವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದ್ದಾರೆ. ಆದ್ರೆ ನಾನು ಪ್ರಧಾನಿಯಾಗಿದ್ದಾಗಲೇ ಎಲ್ಲರಿಗೂ ಅವಕಾಶ ನೀಡಿದ್ದೆ ಎಂದು ದೇವೇಗೌಡ ಹೇಳಿದ್ದಾರೆ. ನಾನು ಇಷ್ಟು ದಿನ ಇಲ್ಲೇ ಯಾಕೆ ಕ್ಯಾಂಪ್ ಮಾಡಿದ್ದೇನೆ. ಅನೇಕ ಉಪ ಚುನಾವಣೆ ನಡೆದ್ರು ನಾನು ಹೋಗಿರಲಿಲ್ಲ. ಆದ್ರೆ ಇಲ್ಲಿ ನಾನು ದುಡದಿದ್ದೇನೆ ಅದಕ್ಕಾಗಿ ಇಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಹೀಗಿರುವಾಗ ನಾವು ಯಾಕೆ ಬಿಜೆಪಿ ಗೆಲ್ಲಿಸಲು ಅಭ್ಯರ್ಥಿ ಹಾಕುತ್ತೇವೆ. ನಾವೇ ಗೆಲ್ಲಲು ಅಭ್ಯರ್ಥಿ ಹಾಕಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಪಕ್ಷವನ್ನು ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ: ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಇದನ್ನೂ ಓದಿ: ವೈಯಕ್ತಿಕ ಟೀಕೆಗಳಿಂದ ಲಾಭ ಸಿಗುತ್ತೆ ಎಂದು ತಿಳಿದಿದ್ದಾರೆ; ಅವರಿಗೆ ಬುದ್ಧಿ ಹೇಳುವ ಶಕ್ತಿ ಇಲ್ಲ: ಹೆಚ್ಡಿ ದೇವೇಗೌಡ
Published On - 3:25 pm, Sat, 23 October 21