
ಹಾವೇರಿ, ನವೆಂಬರ್ 23: ಪರೀಕ್ಷೆ ಮುಗಿದ 3 ಗಂಟೆಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೋಟಗೋಡಿ ಬಳಿ ಇರುವ ಜಾನಪದ ವಿಶ್ವವಿದ್ಯಾಲಯ ಹೊಸ ದಾಖಲೆ ಬರೆದಿದೆ. ಮೌಲ್ಯಮಾಪನ ಕುಲಸಚಿವ ಡಾ.ಕೆ.ಶಿವಶಂಕರ್ ನೇತೃತ್ವದಲ್ಲಿ ವಿಶಿಷ್ಟ ಸಾಧನೆ ಮಾಡಲಾಗಿದ್ದು, ಕೇವಲ 3 ಗಂಟೆಗಳ ಅವಧಿಯಲ್ಲಿ 6 ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟ ಮಾಡಲಾಗಿದೆ.
ಜಾನಪದ ಸಾಹಿತ್ಯ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕನ್ನಡ ಮತ್ತು ಜಾನಪದ ವಿಭಾಗ, ಎಂಬಿಎ ಆರ್‌ಟಿಎಂ ವಿಭಾಗ, ಎಂಬಿಎ ಪ್ರವಾಸೋದ್ಯಮ ವಿಭಾಗಗಳ ದ್ವಿತೀಯ ಸೆಮಿಸ್ಟರ್ ಫಲಿತಾಂಶ, ಎಂಎ ಜಾನಪದ ವಿಜ್ಞಾನ ವಿಭಾಗದ 2, 4ನೇ ಸೆಮಿಸ್ಟರ್ ಫಲಿತಾಂಶವನ್ನ ಪರೀಕ್ಷೆ ಮುಗಿದ 3 ಗಂಟೆಗಳಲ್ಲೇ ವಿಶ್ವವಿದ್ಯಾಲಯ ಪ್ರಕಟಿಸಿದೆ. ಪರೀಕ್ಷೆ ಮುಗಿದ ದಿನದಂದೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿರುವುದು ದಾಖಲೆ ಮತ್ತು ಹೆಮ್ಮೆ ಎಂದು ಜಾನಪದ ವಿವಿಯ ವಿಸಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಭಾರತದಲ್ಲಿ ಎಂಜಿನಿಯರಿಂಗ್ ವೃತ್ತಿಗೆ ಪರವಾನಗಿ ಕಡ್ಡಾಯ; AICTE ಹೊಸ ಮಸೂದೆ
ಡಾ. ಕೆ. ಶಿವಶಂಕರ್ ಅವರು ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದರು. 2024-25ನೇ ಸಾಲಿನ ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಬೇಕೆಂಬ ಇರಾದೆ ಹೊಂದಿದ್ದ ಅವರು, ಈ ಬಗ್ಗೆ ಕ್ರಿಯಾಯೋಜನೆಯನ್ನೂ ಸಿದ್ಧಪಡಿಸಿದ್ದರು. ಶಿವಶಂಕರ್ ಅವರ ಯೋಜನೆಗೆ ಮೌಲ್ಯಮಾಪನ ಸಿಬ್ಬಂದಿಯೂ ಸಾಥ್ ಕೊಟ್ಟಿದ್ದು, ಒಂದೇ ದಿನದಲ್ಲಿ ಮೌಲ್ಯಮಾಪನ ನಡೆಸುವ ಜೊತೆಗೆ ಅಂಕಗಳನ್ನು ಯಶಸ್ವಿಯಾಗಿ ಯುಯುಸಿಎಂಎಸ್ ತಂತ್ರಾಂಶದಲ್ಲಿ ದಾಖಲಿಸಿದ್ದಾರೆ.
ವಿಶ್ವವಿದ್ಯಾಲಯದ ಈ ಸಾಧನೆಗೆ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಭಾರಿ ಸಂತಸ ವ್ಯಕ್ತಪಡಿಸಿದ್ದು, ಮೌಲ್ಯಮಾಪನ ವಿಭಾಗದ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನೆರವಾಗಿರುವ ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಕೆ, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯನ್ನು ಅವರು ಅಭಿನಂದಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Sun, 23 November 25