ಗಾನವಿ ಕುಟುಂಬಸ್ಥರಿಗೆ ಶಾಕ್: ಸೂರಜ್ ಸಾವಿನ ಸಂಬಂಧ 9 ಮಂದಿ ಮೇಲೆ FIR
ನವವಿವಾಹಿತರಾದ ಗಾನವಿ-ಸೂರಜ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೂರಜ್ ಆತ್ಮಹತ್ಯೆಗೆ ಗಾನವಿ ಕುಟುಂಬಸ್ಥರೇ ಕಾರಣ ಎಂದು ಅವರ ಅತ್ತಿಗೆ ದೂರು ನೀಡಿದ್ದು, ಗಾನವಿ ಕುಟುಂಬದ 9 ಜನರ ಮೇಲೆ FIR ದಾಖಲಾಗಿದೆ. ಶ್ರೀಲಂಕಾ ಹನಿಮೂನ್‌ನಲ್ಲಿ ಗಾನವಿ ತನ್ನ ಹಳೆಯ ಪ್ರೇಮ ವಿಚಾರ ಹೇಳಿದ್ದು, ಸುಳ್ಳು ಆರೋಪಗಳಿಂದ ಮನನೊಂದು ಸೂರಜ್ ಸಾವಿಗೀಡಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಸುದ್ದಿಯಾಗಿದ್ದ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ಆಕೆಯ ಕುಟುಂಬಸ್ಥರ ವಿರುದ್ಧವೇ ಈಗ ಎಫ್ಐಆರ್ ದಾಖಲಾಗಿದೆ. ಸೂರಜ್ ಅತ್ತಿಗೆ ನೀಡಿದ ದೂರಿನ ಮೇರೆಗೆ 9 ಮಂದಿ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪತ್ನಿ ಗಾನವಿ ಕುಟುಂಬಸ್ಥರ ಆರೋಪಗಳ ಹಿನ್ನೆಲೆ ಪತಿ ಸೂರಜ್ ಕೂಡ ಸೂಸೈಡ್ ಮಾಡಿಕೊಂಡಿದ್ದ. ಹೀಗಾಗಿ ಆತನ ಸಾವಿಗೆ ಗಾನವಿ ಕುಟುಂಬಸ್ಥರೇ ಕಾರಣ ಎಂದು ದೂರು ನೀಡಲಾಗಿದೆ.
ಸೂರಜ್ ತಾಯಿ ಜಯಂತಿ ಮೇಲೆ ವರದಕ್ಷಿಣೆ ಕಿರುಕುಳ ಆರೋಪದ ಜೊತೆಗೆ ಹನಿಮೂನ್ಗೆ ತೆರಳಿದ್ದ ಸೂರಜ್ ಮತ್ತು ಗಾನವಿ ದಂಪತಿ ಶ್ರೀಲಂಕಾದಿಂದ ಅರ್ಧಕ್ಕೆ ಹಿಂತಿರುಗಿದ್ದ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಮಾನಹಾನಿಕಾರ ಆರೋಪಗಳಿಂದ ಮನನೊಂದು ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೂರಜ್ ಸಹೋದರ ಸಂಜಯ್ ಪತ್ನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಗಾನವಿ ಕುಟುಂಬಸ್ಥರಾದ ರಾಧಾ, ಬಾಬುಗೌಡ, ಕಾರ್ತಿಕ್, ಮಹದೇವ, ಗಗನ್, ಶಶಿಕುಮಾರ್, ರುಕ್ಮಿಣಿ, ಅಭಿಲಾಷ್, ಅಭಿಷೇಕ್ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು
ಹನಿಮೂನ್ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಗಾನವಿ ಲವ್ ವಿಚಾರ ಸೂರಜ್ಗೆ ಗೊತ್ತಾಗಿದೆ. ಹರ್ಷ ಎಂಬಾತನನ್ನ ಪ್ರೀತಿಸುತ್ತಿದ್ದು, ಅವನನ್ನೆ ಮದುವೆಯಾಗುತ್ತೇನೆ ಎಂದು ಗಾನವಿ ಹೇಳಿದ್ದಳಂತೆ. ಈ ವಿಚಾರ ಕೇಳಿ ಸೂರಜ್ ದಿಗ್ಭ್ರಾಂತನಾಗಿದ್ದ. ಆದ್ರೆ ಆ ವಿಷಯ ಮುಚ್ಚಿಟ್ಟು ಸೂರಜ್ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಗಾನವಿ ಸಹೋದರರು ಸೂರಜ್ಗೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು. ಈ ಎಲ್ಲಾ ವಿಚಾರಗಳಿಂದ ಮನನೊಂದು ಸೂರಜ್ ಪ್ರಾಣ ಕಳೆದುಕೊಂಡಿದ್ದರೆ, ಅವರ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಲಾದ ದೂರಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 29ರಂದು ಗಾನವಿ ಮತ್ತು ಸೂರಜ್ ಮದುವೆ ನಡೆದಿದ್ದು, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡ ಹಮ್ಮಿಕೊಳ್ಳಲಾಗಿತ್ತು. ಬಳಿಕ ಹನಿಮೂನ್ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ಇವರು ಅರ್ಧದಲ್ಲೇ ಹಿಂದಿರುಗಿದ್ದರು. ಆ ಬೆನ್ನಲ್ಲೇ 26 ವರ್ಷದ ಗಾನವಿ ಆತ್ಮಹತ್ಯೆ ಯತ್ನ ನಡೆಸಿದ್ದಳು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಮಗಳ ಸಾವಿಗೆ ಸೂರಜ್ ಕುಟುಂಬಸ್ಥರೇ ಕಾರಣ. ಆತ ಗಂಡಸೇ ಅಲ್ಲ ಎಂಬಿತ್ಯಾದಿ ಆರೋಪ ಗಾನವಿ ಕುಟುಂಬಸ್ಥರಿಂದ ಕೇಳಿಬಂದಿತ್ತು. ಈ ನಡುವೆ ಸೂರಜ್ ಕೂಡ ಆತ್ಮಹತ್ಯೆ ಶರಣಾಗಿರೋದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:43 am, Thu, 1 January 26



