
ಹಾವೇರಿ, ಮೇ 30: ಬಡವರಿಗೆ ಮತ್ತು ಮಹಿಳೆಯರಿಗೆ ಆಸರೆಯಾಗಲಿ ಎಂದು ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹಾಗೂ ವಿಧವಾ ವೇತನದ ಹಣಕ್ಕೆ ಬ್ಯಾಂಕೊಂದು ಕೈ ಹಾಕಿದೆ. ಹಾವೇರಿಯಲ್ಲಿ (haveri) ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ದರ್ಪಕ್ಕೆ ತಾಯಿ ಮತ್ತು ಮಗ ಬೀದಿಗೆ ಬೀಳುವಂತಾಗಿದೆ. ನಿಯಮಗಳನ್ನು ಗಾಳಿಗೆ ತೂರಿ, ಮಹಿಳೆಯ ಖಾತೆಯಲ್ಲಿದ್ದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಂಡಿರುವ ಕೆವಿಜಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಈ ಅವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂ ಹಣ ಕೋಟ್ಯಂತರ ಮಹಿಳೆಯರಿಗೆ ಆಸರೆಯಾಗಿದೆ. ಆದರೆ, ಹಾವೇರಿಯ ನಾಗೇಂದ್ರಮಟ್ಟಿಯಲ್ಲಿರುವ ಕೆವಿಜಿ ಬ್ಯಾಂಕ್ ಮಾತ್ರ ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿದೆ. ಬಡ ಮಹಿಳೆಯೊಬ್ಬರ ಗೃಹಲಕ್ಷ್ಮಿ ಯೋಜನೆ ಮತ್ತು ವಿಧವಾ ವೇತನದ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಹಣವನ್ನು ಬ್ಯಾಂಕ್ ಸಿಬ್ಬಂದಿ ಸಾಲದ ಖಾತೆಗೆ ಕಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಕ್ಯಾಶಿಯರ್ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್ ತೆಗೆದುಕೊಂಡ ಮಹಿಳಾ ಸಿಬ್ಬಂದಿ
ನಾಗೇಂದ್ರಮಟ್ಟಿ ನಿವಾಸಿ ಜುಲೇಕಾಬಿ ಸೋಮನಕಟ್ಟಿ ಎಂಬುವವರ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಮತ್ತು ವಿಧವಾ ವೇತನ ಸೇರಿ 2,800 ರೂ ಜಮೆಯಾಗುತ್ತಿತ್ತು. ತಮಗೆ ವಯಸ್ಸಾಗಿದ್ದರಿಂದ, ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆ ಖರ್ಚಿಗೆ ನೆರವಾಗಲಿ ಎಂದು ಜುಲೇಕಾಬಿ ಆ ಹಣವನ್ನು ಖಾತೆಯಲ್ಲೇ ಬಿಟ್ಟಿದ್ದಾರೆ. ಆದರೆ, ಈ ಹಿಂದೆ ಜುಲೇಕಾಬಿ ಅವರು ಐದು ಜನ ಮಹಿಳೆಯರ ಜೊತೆ ಸೇರಿ ಬ್ಯಾಂಕ್‌ನಲ್ಲಿ ಗ್ರೂಪ್ ಲೋನ್ ಪಡೆದಿದ್ದರು. ಅದರಲ್ಲಿ ತಮ್ಮ ಪಾಲಿನ ಸಾಲದ ಹಣವನ್ನು ಇವರು ಸಂಪೂರ್ಣವಾಗಿ ಮರುಪಾವತಿಸಿದ್ದರು. ಆದರೆ, ಗುಂಪಿನ ಉಳಿದ ಮಹಿಳೆಯರು ಸಾಲದ ಕಂತು ಕಟ್ಟದ ಕಾರಣ, ಬ್ಯಾಂಕ್ ಸಿಬ್ಬಂದಿ ಜುಲೇಕಾಬಿ ಅವರ ವೈಯಕ್ತಿಕ ಖಾತೆಯಲ್ಲಿದ್ದ ಗೃಹಲಕ್ಷ್ಮಿ ಮತ್ತು ವಿಧವಾ ವೇತನದ ಎರಡು ತಿಂಗಳ ಹಣಕ್ಕೆ ಕತ್ತರಿ ಹಾಕಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ಎಡವಟ್ಟು ಇಷ್ಟಕ್ಕೇ ನಿಂತಿಲ್ಲ. ಜುಲೇಕಾಬಿ ಅವರ ಮಗ ಇಮಾಮ್ ಹುಸೇನ್ ತನ್ನ ಗೆಳೆಯನೊಬ್ಬ ಬ್ಯಾಂಕ್‌ನಲ್ಲಿ ಪಡೆದಿದ್ದ 50 ಸಾವಿರ ರೂ ಸಾಲಕ್ಕೆ ಶೂರಿಟಿ ಆಗಿದ್ದ. ಆ ಗೆಳೆಯ ಕೂಡ ಸರಿಯಾಗಿ ಸಾಲದ ಕಂತು ಪಾವತಿಸಿರಲಿಲ್ಲ. ಇದನ್ನೇ ನೆಪವಾಗಿಸಿಕೊಂಡ ಬ್ಯಾಂಕ್ ಸಿಬ್ಬಂದಿ, ಮಗ ಶೂರಿಟಿಯಾಗಿದ್ದಕ್ಕೆ ತಾಯಿಯ ಖಾತೆಯಿಂದಲೇ ಹಂತ ಹಂತವಾಗಿ 5ರಿಂದ 6 ಸಾವಿರ ರೂ ಹಣ (ಎರಡು ತಿಂಗಳ) ಕಟ್ ಮಾಡಿದ್ದಾರೆ.
ಸರ್ಕಾರ ಬಡವರ ಹೊಟ್ಟೆ ತುಂಬಿಸಲು ನೀಡಿದ ಹಣವನ್ನು ಈ ರೀತಿ ಕಟ್ ಮಾಡಿಕೊಂಡಿದ್ದರ ಬಗ್ಗೆ ಪ್ರಶ್ನಿಸಲು ಹೋದರೆ, ಬ್ಯಾಂಕ್ ಮ್ಯಾನೇಜರ್ ದರ್ಪ ಪ್ರದರ್ಶಿಸಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ಬಾಕಿ ಇಟ್ಟುಕೊಂಡಿದ್ದಕ್ಕೆ ಕಟ್ ಮಾಡಿದ್ದೇವೆ. ಸರ್ಕಾರದ ಆದೇಶ ನಮಗೂ ಗೊತ್ತು, ಹಾಗಿದ್ದರೆ ಸಾಲ ಏಕೆ ಮಾಡಬೇಕಿತ್ತು? ಎಂದು ತಾಯಿ-ಮಗನಿಗೆ ದರ್ಪದಲ್ಲಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಒಟ್ಟಿನಲ್ಲಿ ಸರ್ಕಾರ ನೀಡುವ ಗೃಹಲಕ್ಷ್ಮಿ ಮತ್ತು ವಿಧವಾ ವೇತನ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿದ್ದು, ಸ್ಥಳೀಯರ ಆಕ್ರೋಶ ಕಾರಣವಾಗಿದೆ. ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ತಾಯಿ-ಮಗ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.