ಹಾವೇರಿ: ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಎಸಿಬಿಗೆ ದೂರು ವಿಚಾರವಾಗಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ. ಇದೊಂದು ದುರುದ್ದೇಶದ ಆರೋಪ. ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಇಲಾಖೆ ಸಿದ್ಧವಾಗಿದೆ. ಇಲಾಖೆಯವರು ತನಿಖೆಗೆ ಎಲ್ಲ ರೀತಿ ಸಹಕಾರ ನೀಡುತ್ತಾರೆ. ಮಧ್ಯವರ್ತಿಗಳು, ಏಜೆಂಟರಿಗೆ ಅವಕಾಶ ಇಲ್ಲವಾದ ಹಿನ್ನೆಲೆಯಲ್ಲಿ ಕೆಲವರು ಇಂತಹ ಆರೋಪಗಳನ್ನು ಮಾಡಿರಬಹುದು ಎಂದು ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಅಮಿತ್ ಶಾ ಹೇಳಿಕೆಯ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸ್ವಾಗತಾರ್ಹವಾದುದು. ಅಮಿತ್ ಶಾ ಬಾಯಲ್ಲಿ ಇಂಥಾ ಮಾತುಗಳು ಬರ್ತವೆ ಅಂದ್ರೆ ಅದು ಪ್ರಧಾನಿ ನರೇಂದ್ರ ಮೋದಿ ತಲೆಯಲ್ಲಿ ಇದ್ದಂಥಾ ಮಾತು ಹೇಳಿರುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಚುನಾವಣೆ ಮಾಡ್ತೇವೆ ಎಂದು ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಕೃಷಿ ಇಲಾಖೆಯಲ್ಲಿ 210 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೃಷಿ ಖಾತೆ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಎಸಿಬಿಗೆ ದೂರು ಸಲ್ಲಿಸಲಾಗಿತ್ತು. ‘ಎಸಿಎಫ್ ಕರ್ನಾಟಕ’ ಸಂಘಟನೆಯ ಕೃಷ್ಣಮೂರ್ತಿ ಎಂಬುವವರು ಕೃಷಿ ಖಾತೆ ಸಚಿವ ಬಿ.ಸಿ. ಪಾಟೀಲ್ ಮತ್ತು ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ದಿವಾಕರ್ ವಿರುದ್ಧ ದೂರು ದಾಖಲಿಸಿದ್ದರು. ರೈತರಿಗೆ ನೀಡುವ ಯಂತ್ರಗಳ ಖರೀದಿ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ದೂರಿರುವ ಕೃಷ್ಣಮೂರ್ತಿ ದೂರಿನ ಜತೆ ಕೆಲವು ದಾಖಲೆಗಳನ್ನೂ ಆಧಾರವಾಗಿ ನೀಡಿದ್ದರು.
ಆದಿಜಾಂಬವ ಸಮಾಜದಿಂದ ಧರಣಿ: ಮನವಿ ಪತ್ರ ಸ್ವೀಕರಿಸಿದ ಬಿ.ಸಿ. ಪಾಟೀಲ್
ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯ ಮಾಡಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಪಂಚಾಯತ್ ಕಚೇರಿ ಎದುರು ಆದಿಜಾಂಬವ ಸಮಾಜದಿಂದ ಧರಣಿ ನಡೆಸಲಾಗಿದೆ. ಮುಂದಿನ ಅಧಿವೇಶನದಲ್ಲಿ ವರದಿ ಅನುಷ್ಠಾನದ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಚಿವರಿಗೆ ಆಗ್ರಹಿಸಲಾಗಿದೆ. ಈ ವೇಳೆ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಖಾತೆ ಸಚಿವ ಬಿ.ಎಸ್. ಪಾಟೀಲ್ ಮನವಿ ಪತ್ರ ಸ್ವೀಕರಿಸಿದ್ದಾರೆ. ಆದಿಜಾಂಬವ ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ. ಸಿಎಂಗೆ ಮನವಿ ತಲುಪಿಸುತ್ತೇನೆ ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್ ಗಡಿಭಾಗದ 14 ಹಳ್ಳಿಗಳಿಗೆ ಈಗಲೂ ರಸ್ತೆಯಿಲ್ಲ, ಬಸ್ಸಿಲ್ಲ; ಶಾಲಾಮಕ್ಕಳ ಬವಣೆ ವೀಕ್ಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ
ಇದನ್ನೂ ಓದಿ: ಖೇಲೋ ಇಂಡಿಯಾದಲ್ಲಿ ಮಿಂಚಲು ಬಡತನ ಅಡ್ಡಿ: ಬಾಲಕಿಗೆ ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ
Published On - 3:01 pm, Fri, 10 September 21