ಹಾವೇರಿ, ಜ.11: ಹಾವೇರಿ ಜಿಲ್ಲೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ (Moral Police) ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಗಾಸಿ ಗೊಳಿಸಿ ಗ್ಯಾಂಗ್ ರೇಪ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮತ್ತೊಂದೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ವೈರಲ್ (Video Viral) ಆಗಿದೆ.
ಹಾವೇರಿಯಲ್ಲಿ ನೈತಕ ಪೊಲೀಸ್ ಗಿರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜ.08ರಂದು ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿರುತ್ತಾರೆ. ಇದನ್ನು ಕಂಡ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈಗಾ ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ.
ಈ ದುರುಳರು ಮುಸ್ಲಿಂ ಮಹಿಳೆಯರು, ಹುಡುಗಿಯರನ್ನ ಟಾರ್ಗೆಟ್ ಮಾಡಿಕೊಂಡಿದ್ದರು. ಹಿಂದೂ ಹುಡಗರ ಜೊತೆ ಕಾಣಿಸಿಕೊಂಡ ಮುಸ್ಲಿಂ ಹುಡುಗಿಯರು, ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದರು. ಜೋಡಿ ಹಕ್ಕಿಗಳ ಮೇಲೆ ಅಟ್ಯಾಕ್ ಮಾಡಿ ಹುಡುಗಿಯರನ್ನ ಎಳೆದೊಯ್ಯುತ್ತಿದ್ದರು. ಇದೀಗ ಎರಡನೇ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಜನರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಹೋಟೆಲ್ನಲ್ಲಿ ಹಲ್ಲೆ ಮಾಡಿದ ಬಳಿಕ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು 7 ಮುಸ್ಲಿಂ ಯುವಕರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಿಂದೂ ಪುರುಷನ ಜೊತೆ ಲಾಡ್ಜ್ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಹಿಳೆ ಮೇಲೆ ಗ್ಯಾಂಗ್ ರೇಪ್? ಮಾಡಲಾಗಿದೆ ಎನ್ನಲಾಗುತ್ತಿದೆ. ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಮತ್ತೊಂದೆಡೆ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆಯ ಪತಿ ಕೂಡ ಹೇಳಿಕೆ ನೀಡಿದ್ದಾರೆ. ಜಂಗಲ್ನಲ್ಲಿ ರೇಪ್ ಮಾಡಿದ್ದ ವಿಡಿಯೋ ಇದೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನ್ನ ತೋಳಿಗೆ ತಾನೇ ಗುಂಡು ಹಾರಿಸಿಕೊಂಡ ವ್ಯಕ್ತಿ
ಇನ್ನು ಈ ಹಿಂದೆ ಈ ಪ್ರಕರಣದ ಕುರಿತು ಸ್ವತಃ ಸಂತ್ರಸ್ತೆ ಮಾಧ್ಯಮಕ್ಕೆ ಸ್ಪಷ್ಟೀಕರಣ ನೀಡಿ ನನಗೆ ಐದಾರು ಅಪರಿಚಿತ ಯುವಕರು ನಾನು ತಂಗಿದ್ದ ಹೋಟೆಲ್ ಗೆ ನುಗ್ಗಿ ಹಲ್ಲೆ ಮಾಡಿ ನನ್ನ ಖಾಸಗಿ ಅಂಗಾಂಗಗಳನ್ನು ಘಾಸಿಗೊಳಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆಕೆ ಹೇಳಿರಲಿಲ್ಲ.
ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಡಿಜಿ & ಐಜಿಪಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ. ನೈತಿಕ ಪೊಲೀಸ್ಗಿರಿ ಯಾರೇ ನಡೆಸಿದ್ರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತೆ. ಇಂತಹ ಘಟನೆ ಎಲ್ಲೇ ನಡೆದ್ರೂ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದೇವೆ. ಸಮಾಜದಲ್ಲಿ ಎಲ್ಲರಿಗೂ ಕಾನೂನು ಒಂದೇ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:20 am, Thu, 11 January 24