ಹಾವೇರಿ, ಅಕ್ಟೋಬರ್ 31: ಶಿಗ್ಗಾಂವಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರ ಪ್ರಾರಂಭಿಸಿವೆ. ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ್ ಆಗುತ್ತಿದ್ದಂತೆಯೇ ಬಂಡಾಯ ಅಭ್ಯರ್ಥಿಯಾಗಿ ಖಾದ್ರಿ ನಾಮಪತ್ರ ಸಲ್ಲಿಸಿದ್ದರು. ಅದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ನೇತ್ರತ್ವದಲ್ಲಿ ಸಂಧಾನ ಕಾರ್ಯ ಯಶಸ್ವಿಯಾಗಿದೆ. ಸಚಿವ ಜಮೀರ್ ಅಹ್ಮದ್ ನೇತ್ರತ್ವದಲ್ಲಿ ಪೊಲೀಸ್ ಮತ್ತು ಬಿಎಸ್ಏಫ್ ಯೋಧರ ಬಿಗಿ ಭದ್ರತೆಯಲ್ಲಿ ಖಾದ್ರಿ ತಹಶಿಲ್ದಾರ ಕಚೇರಿಗೆ ಕರೆದುಕೊಂಡು ಬಂದು ನಾಮಪತ್ರ ವಾಪಸು ಪಡೆದುಕೊಂಡರು. ಅದರೂ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದು, ಗೆಲ್ಲುವ ವ್ಯಕ್ತಿಗೆ ಟಿಕೆಟ್ ಕೊಡುವುದು ಬಿಟ್ಟು ಬೇರೆ ವ್ಯಕ್ತಿ ಟಿಕೆಟ್ ನೀಡಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಖಾದ್ರಿ ಸೂಕ್ತವಾದ ಸ್ಥಾನಮಾನ ಕೊಡುವಂತೆ ಆಗ್ರಹಿಸಿದ್ದರು. ಜೊತೆಗೆ ಸಿದ್ದರಾಮಯ್ಯ, ಡಿಕೆಶಿ ಮತ್ತು ಜಮೀರ ಅಹ್ಮದ್ ಮತ್ತು ಮುಖಂಡರ ಮಾತಿಗೆ ಬೆಲೆಕೊಟ್ಟು ವಾಪಸು ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಈ ಸಲ ಗೆಲ್ಲಬೇಕು. ಯಾವುದೇ ಷರತ್ತು ಇಲ್ಲದೆ ನಾಮಪತ್ರ ವಾಪಸು ಪಡೆದುಕೊಂಡಿದ್ದೇನೆ ಎಂದಿದ್ದಾರೆ.
ಬಂಡಾಯ ಶಮನವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಅಜ್ಜಂಪೀರ ಖಾದ್ರಿ ಮತ್ತು ಯಾಸೀರ ಖಾನ್ ಪಠಾಣ್, ಜಮೀರ್ ಅಹ್ಮದ್ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಇತ್ತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಸತತ ಗೆಲವು ಪಡೆದಿದ್ದ ಅನುಭವದ ಮೇಲೆ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ. ಭರತ್ ಬೊಮ್ಮಾಯಿ ತಾಯಿ ಚನ್ನಮ್ಮ ಕೂಡಾ ಮಹಿಳಾ ಮತದಾರನ್ನ ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ನಿಂದ ಸಚಿವ ಜಮೀರ್ ಅಹ್ಮದ್ ಕಳೆದ ಚುನಾವಣೆಯಲ್ಲಿ ಏನು ಮಾಡಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಅವರ ಗುರಿ ನನ್ನ ಮಗನನ್ನು ಸೋಲಿಸುವುದು ಅಷ್ಟೆ. ಆದರೆ ಜನತೆ ಗುರಿ ನನ್ನ ಮಗನನ್ನು ಗೆಲ್ಲಿಸುವುದು ಎಂದು ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿ ಬಂಡಾಯ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ, ನಿಟ್ಟುಸಿರುಬಿಟ್ಟ ಕಾಂಗ್ರೆಸ್
ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಬಂಡಾಯ ಶಮನವಾಗಿದ್ದು, ಖಾದ್ರಿ ನಾಮಪತ್ರ ವಾಪಸು ಪಡೆದುಕೊಂಡು ಪ್ರಚಾರ ಕಾರ್ಯದಲ್ಲಿ ತೋಡಗಿಕೊಂಡಿದ್ದಾರೆ. ಇತ್ತ ಬಿಜೆಪಿ ಕೂಡಾ ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಿ ಭದ್ರಕೋಟೆಯನ್ನ ಉಳಿಸಿಕೊಳ್ಳಲು ರಣತಂತ್ರವನ್ನು ರೂಪಿಸುತ್ತಿದೆ.
ವರದಿ: ಅಣ್ಣಪ್ಪ ಬಾರ್ಕಿ ‘ಟಿವಿ9’
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 31 October 24