ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ: ಮತ್ತೆ ಮೂವರನ್ನು ವಶಕ್ಕೆ ಪಡೆದ ಪೊಲೀಸ್​

| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2022 | 11:02 AM

2022ರ ಏ.19ರಂದು ರಾಜಶ್ರೀ ಥಿಯೇಟರ್​ನಲ್ಲಿ ನಡೆದಿದ್ದ ಫೈರಿಂಗ್​ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮಂಜುನಾಥ ಅಲಿಯಾಸ್ ಸಂತೋಷ್ ಮಲ್ಲಿಕ್ ಪಾಟೀಲ್​ ಬಂಧನ ಬಳಿಕ, ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ: ಮತ್ತೆ ಮೂವರನ್ನು ವಶಕ್ಕೆ ಪಡೆದ ಪೊಲೀಸ್​
ಮೂವರನ್ನು ವಶಕ್ಕೆ ಪಡೆದ ಪೊಲೀಸರು.
Follow us on

ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ಫೈರಿಂಗ್​ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಸ್ತೂಲ್, ಗುಂಡುಗಳನ್ನು ತಯಾರಿಸಿ ಕೊಟ್ಟಿದ್ದ ಮೂವರನ್ನ ವಶಕ್ಕೆ ಪಡೆಯಲಾಗಿದ್ದು, ಬಿಹಾರದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾದಲ್ಲಿ ಬಂಧಿಸಿ, ಹಾವೇರಿಗೆ ಕರೆತರಲಾಗುತ್ತಿದೆ. ಮೊಹಮ್ಮದ್ ಸಮ್ಸದ್ ಅಲಾಮ, ಮೊಹಮ್ಮದ್ ಆಸೀಫ್ ಅಲಾಮ ಮತ್ತು ಮೊಹಮ್ಮದ್ ಸಾಹೀದ್ ಚಾಂದ್​ನನ್ನು ಬಂಧಿತ ಆರೋಪಿಗಳು. ಶಿಗ್ಗಾಂವಿ ಸಿಪಿಐ ಬಸವರಾಜ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. 2022ರ ಏ.19ರಂದು ರಾಜಶ್ರೀ ಥಿಯೇಟರ್​ನಲ್ಲಿ ಫೈರಿಂಗ್ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಅಲಿಯಾಸ್ ಸಂತೋಷ್​ ಮಲ್ಲಿಕ್ ಪಾಟೀಲ್​ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಶಿಗ್ಗಾಂವಿ ಠಾಣೆ ಪೊಲೀಸರ ಕಾರ್ಯಕ್ಕೆ ಡಿಜಿ ಮತ್ತು ಐಜಿಪಿ​ ಸೂದ್​ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ಒಂದು ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಏಪ್ರಿಲ್ 19,2022. ಸಮಯ ರಾತ್ರಿ ಹತ್ತು ಗಂಟೆ. ಸ್ಥಳ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರ. ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡ್ತಿದ್ರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಮಂದಿರದಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಎಂಬ ಯುವಕನ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೆ ಗಾಯಾಳುವಿಗೆ ಶಿಗ್ಗಾಂವಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ರು.

ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್​ನ ಮೃಗಾಲಯ

ಚಿತ್ರಮಂದಿರದಲ್ಲಿ ಕತ್ತಲು ಕಳೆದು ಬೆಳಕಾಗೋವಷ್ಟರಲ್ಲಿ ಗುಂಡು ಹಾರಿಸಿದ್ದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಹೀಗಾಗಿ ಆರೋಪಿಯನ್ನ ಗುರ್ತಿಸೋದು ಅಷ್ಟು ಸುಲಭದ ಕೆಲಸ ಆಗಿರ್ಲಿಲ್ಲ. ಆದ್ರೂ ತನಿಖೆಗೆ ಇಳಿದಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ ಅಲಿಯಾಸ್ ಸಂತೋಷ ಅಲಿಯಾಸ್ ಮಲ್ಲಿಕ್ ಪಾಟೀಲ ಅಂತಾ ಗುರುತು ಪತ್ತೆ ಮಾಡಿದ್ರು. ಆದ್ರೆ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದಂಗೆ ಗೋವಾ, ಮಹಾರಾಷ್ಟ್ರ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಆರೋಪಿಯ ಹೆಡೆಮುರಿ ಕಟ್ಟಲೇಬೇಕು ಅಂತಾ ಆತನ ಬೆನ್ನು ಬಿದ್ದಿದ್ದ ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.

ಮೇ 19 ಬೆಳ್ಳಂಬೆಳಿಗ್ಗೆ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಅಲ್ದೆ ಘಟನೆ ನಂತರ ಆರೋಪಿ ಮಂಜುನಾಥ ಪರಾರಿ ಆಗಲು ನೆರವು ನೀಡಿದ್ದ ಬಂಕಾಪುರ ಪಟ್ಟಣದ ನಿವಾಸಿ ಇಸ್ಮಾಯಿಲ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.