ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಹೆಚ್​ಡಿ ದೇವೇಗೌಡ ಮಹತ್ವದ ಸುಳಿವು

| Updated By: Ganapathi Sharma

Updated on: Dec 07, 2024 | 1:13 PM

ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿರುವ ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ಬಲುದೊಡ್ಡ ಜವಾಬ್ದಾರಿ ವಹಿಸಲು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಮುಂದಾಗಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ, ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಹೆಚ್​ಡಿ ದೇವೇಗೌಡ ಮಹತ್ವದ ಸುಳಿವು
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ
Follow us on

ನವದೆಹಲಿ, ಡಿಸೆಂಬರ್ 7: ಚನ್ನಪಟ್ಟಣ ಉಪಚುನಾವಣೆ ಸೋಲಿನ ಆಘಾತದಲ್ಲಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಬಗ್ಗೆ ಜಾತ್ಯತೀತ ಜನತಾದಳ ವರಿಷ್ಠ ಹೆಚ್​ಡಿ ದೇವೇಗೌಡ ಸುಳಿವು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಅವರು ಮಾತನಾಡಿದ್ದಾರೆ. ನವದೆಹಲಿಯಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ನಾನೇ ಹೇಳುತ್ತಿದ್ದೇನೆ, ನಿಖಿಲ್ ಮುಂದೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಶಾಸಕರಾಗುವುದು ಒಂದೇ ಪ್ರಶ್ನೆಯಲ್ಲ. ಆತ ಯುವಕನಿದ್ದಾನೆ. ರಾಜ್ಯದ ಜವಾಬ್ದಾರಿ, ಪಕ್ಷವನ್ನು ಬೆಳೆಸುವುದಕ್ಕೆ ಅನುಭವ ಇದೆ, ಕುಟುಂಬದ ಹಿನ್ನೆಲೆ ಇದೆ, ಆತನಿಗೆ ಹೆಚ್ಚು ಹೊಣೆಗಾರಿಕೆ ಕೊಟ್ಟು ಪಕ್ಷವನ್ನು ಉಳಿಸಿ ಬೆಳೆಸುತ್ತೇವೆ ಎಂದು ದೇವೇಗೌಡ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರಂತೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವು ಈಗಾಗಲೇ ಕಾಂಗ್ರೆಸ್​​ನಿಂದ ದೂರ ಸರಿದಿದ್ದೇವೆ. ಅಮಿತ್ ಶಾ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆಗೇ ಮಾತುಕತೆ ನಡೆಸಲಿದ್ದೇವೆ. ಕೊನೆಯ ವರೆಗೂ ಎನ್​ಡಿಎ ಜತೆಗೇ ಇರಲಿದ್ದೇವೆ ಎಂದರು.

ಕುಟುಂಬ ಮುಗಿಸುವುದು ಜನರಿಗೆ ಸೇರಿದ್ದು: ಕಾಂಗ್ರೆಸ್​ಗೆ ತಿರುಗೇಟು

ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಅವರು (ಕಾಂಗ್ರೆಸ್ ನಾಯಕರು) ಏನೇನು ಮಾತನಾಡಿದ್ದರು? ಎಷ್ಟು ಜನ ಸೇರಿದ್ದರು? ಯಾವ್ಯಾವ ಜಿಲ್ಲೆಯಿಂದ ಜನ ಬಂದಿದ್ದರು ಎಂಬ ಎಲ್ಲ ಮಾಹಿತಿ ಸಂಗ್ರಹಿಸಿದ್ದೇನೆ. ಅದಕ್ಕೆಲ್ಲ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷ ಉತ್ತರ ಕೊಡಲಿದೆ. ನನಗೆ ವಯಸ್ಸಾಯಿತು ಎಂದು ದೇವೇಗೌಡ ಹೇಳಿದರು. ಹಾಸನದಲ್ಲೇ ಸಮಾವೇಶ ಮಾಡಿದ್ದಕ್ಕೆ ನನಗೇನೂ ಬೇಸರವಿಲ್ಲ. ಅವರು ದೇವೇಗೌಡರ ಕುಟುಂಬವನ್ನೇ ಮುಗಿಸುತ್ತೇವೆ ಎಂದರು. ಮುಗಿಸುವುದು ಬಿಡುವುದು ಭಗವಂತನ ಇಚ್ಛೆ ಹಾಗೂ ಜನರ ಇಚ್ಛೆ. ಅದು ಯಾರೋ ಒಬ್ಬರ ಕೈಯಲ್ಲಿಲ್ಲ ಎಂದು ದೇವೇಗೌಡ ಹೇಳಿದರು.

ಇದನ್ನೂ ಓದಿ: ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿರುವ ರೋಗಗ್ರಸ್ತ ಸರ್ಕಾರ: ಬಾಣಂತಿಯರ ಸಾವಿಗೆ ಕುಮಾರಸ್ವಾಮಿ ಆಕ್ರೋಶ

ರಾಮನಗರ ಖಾಲಿ ಮಾಡಿಸಿದ್ದೇವೆ, ಹಾಸನ ಖಾಲಿ ಮಾಡಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಆ ಹೇಳಿಕೆಗಳಿಗೆ ಬೆಲಯಿಲ್ಲ. ಯಾರನ್ನೂ ಯಾರು ಖಾಲಿ ಮಾಡಿಸಲಾಗದು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:27 pm, Sat, 7 December 24