ಶಿಕ್ಷಣದ ಪ್ರತೀ ಹಂತದ ಪಠ್ಯದಲ್ಲೂ ಭಗವದ್ಗೀತೆ ಸೇರ್ಪಡೆಗೆ ಕುಮಾರಸ್ವಾಮಿ ಮನವಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕೆ ಪುಟಿನ್ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ಪುಟಿನ್ ಅವರಿಗೆ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಸ್ವಾಗತಕೋರಿದ್ದಾರೆ. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಗೀತೆಯ ಬೋಧನೆಗಳು ಪ್ರಪಂಚದಲ್ಲಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ. ಇದರ ನಡುವೆ ಮತ್ತೊಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡಬೇಕೆಂದು ಪತ್ರ ಬರೆದಿದ್ದಾರೆ.

ಬೆಂಗಳೂರು, (ಡಿಸೆಂಬರ್ 05): ಕಾಲಾತೀತ, ಮೌಲ್ಯಾಧಾರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು (Bhagavad Gita) ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅಭಿಪ್ರಾಯಪಟ್ಟಿದ್ದು, ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ ಶಿಕ್ಷಣದ ಪ್ರತೀ ಹಂತದಲ್ಲಿಯೂ ಪಠ್ಯವಾಗಬೇಕು ಎಂಬುದು ಆಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ ಮಾಡಿರುವ ಬಗ್ಗೆ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೇಂದ್ರ ಸರ್ಕಾರದ ಗೌರವಾನ್ವಿತ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಪುಟಿನ್ಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ
ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಹೆಚ್ಚು ಉತ್ಕೃಷ್ಟಗೊಳಿಸುತ್ತದೆ ಮತ್ತು ನಮ್ಮ ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಜಾಗತಿಕವಾಗಿ ಶ್ರೇಷ್ಠರಾಗಲು ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಅತ್ಯಂತ ಶ್ರೇಷ್ಠ, ಮಾನವೀಯತೆಯ ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಅನುಗುಣವಾಗಿ ಭಗವದ್ಗೀತೆ ಬೋಧನೆ ಅಗತ್ಯವಿದೆ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೇಂದ್ರ ಸರ್ಕಾರದ ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ @dpradhanbjp ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.
ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು ರಾಷ್ಟ್ರೀಯ… pic.twitter.com/Iocy3XkK4d
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) December 5, 2025
ಕುಮಾರಸ್ವಾಮಿ ಪತ್ರದಲ್ಲೇನಿದೆ?
ಭಾರತವು ಬಹಳ ಹಿಂದಿನಿಂದಲೂ ಸಂತರು, ಜ್ಞಾನ ಮತ್ತು ಶಾಶ್ವತ ನಾಗರಿಕ ಮೌಲ್ಯಗಳ ನಾಡು. ಸನಾತನ ಧರ್ಮವು ವಸುದೈವ ಕುಟುಂಬ ಎಂಬ ಸಾರ್ವತ್ರಿಕ ಆದರ್ಶವನ್ನು ಎತ್ತಿಹಿಡಿಯುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಪರಮ ಜ್ಞಾನವಾಗಿದ್ದು, ಇದು ನಿಷ್ಕಾಮ ಕರ್ಮ ಮತ್ತು ಪ್ರಾಮಾಣಿಕತೆ ಹಾಗೂ ಸಮರ್ಪಣೆಯೊಂದಿಗೆ ಪ್ರತಿಯೊಬ್ಬರ ಕರ್ತವ್ಯವನ್ನು ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ. ಈ ಮೌಲ್ಯಗಳು ವಿಶೇಷವಾಗಿ ಪ್ರಸ್ತುತ ಜಾಗತಿಕ ಪರಿಸರದಲ್ಲಿ ಅಪಾರ ಪ್ರಸ್ತುತತೆಯನ್ನು ಹೊಂದಿವೆ ಎಂದು ಹೆಚ್‌ಡಿಕೆ ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಪ್ರಧಾನ ಮಂತ್ರಿಗಳು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಹಿಂದೂ ಧರ್ಮದ ಮೂಲ ತತ್ವಗಳನ್ನು ಎತ್ತಿಹಿಡಿದು ವಸುದೈವ ಕುಟುಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು. ಆ ಪವಿತ್ರ ಗ್ರಂಥ ಹೊಂದಿರುವ ಕಾಲಾತೀತ ಮೌಲ್ಯಗಳನ್ನು ಪುನರುಚ್ಚರಿಸಿದರು ಎಂಬುದನ್ನು ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಶಿವಮೊಗ್ಗದಲ್ಲಿ ನಡೆದ ಗೀತಾ ಪಠಣ ಕಾರ್ಯಕ್ರಮಕ್ಕೆ ಹಾಜರಾಗುವ ಸೌಭಾಗ್ಯ ನನಗೂ ಸಿಕ್ಕಿತ್ತು. ಅದೊಂದು ಸ್ಫೂರ್ತಿದಾಯಕ ಕಾರ್ಯಕ್ರಮವಾಗಿತ್ತು. ಗೀತೆಯನ್ನು ಪಠಿಸಲು ಮತ್ತು ಅದಕ್ಕೆ ಸಂಬಂಧಿಸಿದ ಆಳವಾದ ಶಕ್ತಿ ಮತ್ತು ಭಕ್ತಿಯನ್ನು ಅನುಭವಿಸಲು ಇದು ಅದ್ಭುತ ಅವಕಾಶವನ್ನು ನೀಡಿತು. ಹಲವಾರು ಸ್ಥಳೀಯ ನಾಯಕರು ಮತ್ತು ಪೋಷಕರು ಭಗವದ್ಗೀತೆಯ ಬೋಧನೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ವಿನಂತಿಸಿದರು ಎಂಬ ಅಂಶದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೌಲ್ಯಾಧರಿತ ಶಿಕ್ಷಣಕ್ಕೆ ಬಲವಾದ ಒತ್ತು ನೀಡುತ್ತದೆ. ಗೀತೆಯಿಂದ ಆಯ್ದ ಬೋಧನೆಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ಚಿಂತನೆಯ ಸ್ಪಷ್ಟತೆ ಮತ್ತು ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಮ್ಮ ಜನಸಂಖ್ಯಾ ಲಾಭಾಂಶವನ್ನು ಬಲಪಡಿಸುತ್ತದೆ. ನಮ್ಮ ಯುವಕರು ಜಾಗತಿಕವಾಗಿ ಶ್ರೇಷ್ಠರಾಗಲು ಪ್ರೇರಕವಾಗುತ್ತದೆ. ಆದ್ದರಿಂದ, ಭಗವದ್ಗೀತೆಯ ಕಾಲಾತೀತ ಮೌಲ್ಯಗಳನ್ನು ದೇಶಾದ್ಯಂತ ವಿದ್ಯಾರ್ಥಿಗಳ ಕಲಿಕೆಯ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಸಂಯೋಜಿಸಲು ಈ ಪ್ರಸ್ತಾವನೆಗೆ ಸರಿಯಾದ ಪರಿಗಣನೆಯನ್ನು ನೀಡಿ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಕುಮಾರಸ್ವಾಮಿ ಕೋರಿದ್ದಾರೆ.
ಪುಟಿನ್ಗೆ ಭಗವದ್ಗೀತೆ ಗಿಫ್ಟ್
ತಮ್ಮ ನಿವಾಸಕ್ಕೆ ಆಗಮಿಸಿದ್ದ ರಷ್ಯಾ ಅಧ್ಯಕ್ಷರನ್ನ ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ಮೋದಿ ಭಗವದ್ಗೀತೆ ಪುಸ್ತಕವನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಮೋ, ರಷ್ಯಾದ ಅಧ್ಯಕ್ಷರಿಗೆ ರಷ್ಯನ್ ಭಾಷೆಯಲ್ಲಿ ಭಾಷಾಂತರಗೊಂಡಿರುವ ಭಗವದ್ಗೀತೆಯನ್ನು ನೀಡಲಾಯಿತು. ಗೀತೆಯ ಬೋಧನೆಗಳು ಪ್ರಪಂಚದಲ್ಲಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Fri, 5 December 25




