ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2024 | 9:53 PM

ಇಂದು ಕೇಂದ್ರ ಸಿಚಿವ ಹೆಚ್​ಡಿ ಕುಮಾರಸ್ವಾಮಿ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಮಾಡಿದ ಆರೋಪಕ್ಕೆ ಇದೀಗ ಪತ್ರದ ಮೂಲಕ ಟಾಂಗ್‌ ನೀಡಿದ್ದಾರೆ. ನನ್ನ ಮೇಲೆ ಹೆಚ್​ಡಿ ಕುಮಾರಸ್ವಾಮಿ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ ಎಂದು ಹೇಳಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್
ಹೆಚ್​ಡಿ ಕುಮಾರಸ್ವಾಮಿ ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ: ಎಡಿಜಿಪಿ ಚಂದ್ರಶೇಖರ್
Follow us on

ಬೆಂಗಳೂರು, ಸೆಪ್ಟೆಂಬರ್​ 28: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಇಂದು ವಿಡಿಯೋ ಬಾಂಬ್ ಸಿಡಿಸಿದ್ದಾರೆ. ರಾಜ್ಯಪಾಲರು ಪದೇ ಪದೇ ವರದಿ ಕೇಳುತ್ತಿರೋದಕ್ಕೆ ಮತ್ತು ಮುಡಾ ಕೇಸ್‌ನಲ್ಲಿ ಪ್ರಾಸಿಕ್ಯೂಷನ್ ಕೊಟ್ಟಾಗಿನಿಂದ ರಾಜ್ಯಪಾಲರ ನಿರ್ಧಾರವನ್ನ ಸಿಎಂ ಟೀಕಿಸಿದ್ದರು. ಹೀಗಾಗಿ 2011ರ ಹಳೇ ವಿಡಿಯೋವೊಂದನ್ನ ಬಹಿರಂಗಗೊಳಿಸಿದ್ದರು. ಇದೇ ವೇಳೆ ಎಸ್​ಐಟಿ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೂಡ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರವಾಗಿ ಚಂದ್ರಶೇಖರ್ ಟಾಂಗ್‌ ಕೊಟ್ಟಿದ್ದಾರೆ.

ಈ ಬಗ್ಗೆ ತಮ್ಮ ಸಿಬ್ಬಂದಿಗೆ ಪತ್ರದ ಮೂಲಕ ಎಡಿಜಿಪಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಪ್ರಕರವೊಂದರ ಆರೋಪಿ ಎಂದು ಪತ್ರ ಪ್ರಾರಂಭಿಸಿರುವ ಚಂದ್ರಶೇಖರ್​, ಇಂದು ಕುಮಾರಸ್ವಾಮಿ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ನನ್ನ ಮೇಲೆ ಹೆಚ್​ಡಿ ಕುಮಾರಸ್ವಾಮಿ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ಬಾಂಬ್!

ಎಸ್ಐಟಿ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿದೆ. ಆರೋಪಿ ಹೆಚ್‌.ಡಿ.ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ನಮ್ಮನ್ನ ಕುಗ್ಗಿಸುವ ಪ್ರಯತ್ನ, ನಮ್ಮಲ್ಲಿ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಅವನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಆತನೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ಎಸ್‌ಐಟಿ ಮುಖ್ಯಸ್ಥನಾಗಿ ನಾನು ಭಯವಿಲ್ಲದೆ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಎಂದು ಎಸ್ಐಟಿ ಅಧಿಕಾರಿ, ಸಿಬ್ಬಂದಿಗೆ ಚಂದ್ರಶೇಖರ್ ಭರವಸೆ ನೀಡಿದ್ದಾರೆ.

ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ವಾಕ್ಯದ ಉಲ್ಲೇಖಿಸಿದ್ದು, ‘ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ’ ಆದರೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​: ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ

ಅಪರಾಧಿಗಳು, ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ಸತ್ಯ, ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ. ಸತ್ಯಮೇವ ಜಯತೆ ಎಂದಿದ್ದಾರೆ. ಪತ್ರ ತಾವೇ ಬರೆದಿರೋದಾಗಿ ಟಿವಿ9 ಗೆ ಎಡಿಜಿಪಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.