ಉತ್ತರ ಕರ್ನಾಟಕ ಭಾಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು; ಸಂಕಷ್ಟದಲ್ಲಿರುವ ಜನರು

Uttara Karnataka: ಬೆಳಗಾವಿ, ಬಾಗಲಕೋಟೆ, ಹಾವೇರಿ, ದಾವಣಗೆರೆಯಲ್ಲಿ ಮಳೆ ಜೋರಾಗಿದ್ದು ನದಿಗಳು ಉಕ್ಕೇರಿ ಹರಿಯುತ್ತಿವೆ. ಕೆಲವೆಡೆ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು; ಸಂಕಷ್ಟದಲ್ಲಿರುವ ಜನರು
ತುಬಚಿ ರಸ್ತೆಯಲ್ಲಿ ಜಲಾವೃತಗೊಂಡಿರುವ ರಸ್ತೆಗೆ ಗುರುತು ಹಾಕಿ ಅದರ ಮೇಲೆಯೇ ಸಂಚರಿಸುತ್ತಿರುವ ಜನರು

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ-ಝಂಜರವಾಡ ರಸ್ತೆ ಮಾರ್ಗದ ಫೂಲ್ ಜಲಾವೃತಗೊಂಡಿದೆ. ಅಪಾಯದ ಮಧ್ಯೆಯೆ ಜನರ ಸಂಚಾರ ಮಾಡುತ್ತಿದ್ದು ಪೂಲ್ ಗೆ ಹೊಂದಿಕೊಂಡು ಬಡಿಗೆ(ಉದ್ದನೆಯ ಕೋಲು) ಹಾಕಿ ರಸ್ತೆ ಗುರುತು ಮಾಡಿಕೊಂಡಿದ್ದಾರೆ. ಅದರ ಆಧಾರದ ಮೇಲೆ ರಸ್ತೆ ಮೇಲೆ ಸಂಚಾರ ಮಾಡುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ೩೬ ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಈಗಾಗಲೇ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ಐತಿಹಾಸಿಕ ದೇವಸ್ಥಾನ ಜಲಾವೃತವಾಗಿದ್ದು, ಆವರಣದಲ್ಲಿ ನಾಲ್ಕು ಅಡಿಯಷ್ಟು ನೀರು ನಿಂತಿದೆ. ಇನ್ನು ನದಿ ದಡದ ಜಮೀನುಗಳಿಗೆ ನೀರು ನುಗ್ಗಿ, ಅಪಾರ ಪ್ರಮಾದ ಕಬ್ಬಿನ ಬೆಳೆ ನೀರಲ್ಲೇ ನಿಂತಿವೆ. ಅಪಾಯದ ಪ್ರಮಾಣ ಮೀರಿ ಹರಿಯುತ್ತಿರುವ ನದಿಯಿಂದಾಗಿ ರೈತರು ತಮ್ಮ ತಮ್ಮ ಪಂಪಸೆಟ್ಟ್ ಗಳನ್ನ ತೆಗೆದ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಲಿಬೇರ ಸೇತುವೆಯು ಭಾರೀ ಪ್ರವಾಹದಿಂದಾಗಿ ಜಲಾವೃತಗೊಂಡಿದೆ.

ಹಾವೇರಿ: ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಹರಿಯುತ್ತಿವೆ. ಜಿಲ್ಲೆಯ ವರದಾ, ಕುಮುದ್ವತಿ, ಧರ್ಮಾ ನದಿಗಳು ತುಂಬಿ ಹರಿಯುತ್ತಿದ್ದು ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ, ಕುಡುಪಲಿ, ಎಲಿವಾಳ, ಬಡಸಂಗಾಪುರ, ಯಡಗೋಡ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹತ್ತು ವರ್ಷಗಳ ಬಳಿಕ ಅಂಗರಗಟ್ಟಿ ಗ್ರಾಮದ ಕೆರೆ ತುಂಬಿದ್ದು, ನದಿ ಪಾತ್ರದ ಗ್ರಾಮಗಳ ರೈತರ ಜಮೀನುಗಳಲ್ಲಿನ ಬೆಳೆ ಹಾನಿಯಾಗಿದೆ.

Yadagoda Haveri

ತುಂಬಿದ ಕುಮದ್ವತಿ ನದಿಯಿಂದಾಗಿ ಹಾವೇರಿ ಜಿಲ್ಲೆಯ ಯಡಗೋಡ ಗ್ರಾಮ ದ್ವೀಪದಂತಾಗಿದೆ.

ಬೆಳಗಾವಿ, ಕೊಣ್ಣೂರು: ಮಹಾರಾಷ್ಟ್ರ, ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿಗೆ 1 ಲಕ್ಷ 10 ಸಾವಿರ ಕ್ಯೂಸೆಕ್ ಒಳಹರಿವು ಬಂದಿದೆ. ಗೋಕಾಕ್ ತಾಲೂಕಿನ ಕೊಣ್ಣೂರು ಮಾರುಕಟ್ಟೆಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಗೋಕಾಕ್​, ಮೂಡಲಗಿ ತಾಲೂಕಿನ ನದಿಪಾತ್ರದಲ್ಲಿ ನೆರೆ ಭೀತಿ ಉಂಟಾಗಿದ್ದು, ಗೋಕಾಕ್ ನಗರದ ಲೋಳಸೂರು ಸೇತುವೆ ಜಲಾವೃತಗೊಂಡಿದೆ. ಗೋಕಾಕ್‌ ಪಟ್ಟಣದಲ್ಲಿರುವ ಮಟನ್ ಮಾರ್ಕೆಟ್, ಭೋಜಗರ್ ಗಲ್ಲಿ, ಉಪ್ಪಾರ ಗಲ್ಲಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನರು ಸಂಕಷ್ಟದಲ್ಲಿದ್ದಾರೆ.

Konnur

ಬೆಳಗಾವಿಯ ಕೊಣ್ಣೂರಿನಲ್ಲಿ ಜಲಾವೃತವಾಗಿರುವ ನಗರ ಪ್ರದೇಶ

ಬೆಳಗಾವಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟದಿಂದಾಗಿ ವೇದಗಂಗಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿನ್ನೆಯಿಂದ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಟೋಲ್ ಬಳಿ 5 ಕಿಲೋ ಮೀಟರ್​ವರೆಗೂ ಸಾಲುಗಟ್ಟಿ ವಾಹನಗಳು ನಿಂತಿವೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿಯೂ ವಾಹನಗಳ ಕ್ಯೂ ನಿಂತಿದ್ದು ಊಟ, ಶೌಚಾಲಯಕ್ಕೆ ವ್ಯವಸ್ಥೆ ಇಲ್ಲದೆ ಚಾಲಕ, ಸಿಬ್ಬಂದಿ ಪರದಾಡುತ್ತಿದ್ದಾರೆ.

ರಾಯಚೂರು: ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ದೇವದುರ್ಗ-ಶಹಾಪುರ ನಡುವೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ರಾಯಚೂರು-ಕಲಬುರಗಿ ನಡುವೆಯೂ ಸಂಪರ್ಕ ಕಡಿತವಾಗಿದೆ.

ಹುಬ್ಬಳ್ಳಿ: ಭಾರಿ ಮಳೆಗೆ ಹುಬ್ಬಳ್ಳಿಯಲ್ಲಿ 16 ಮನೆಗಳಿಗೆ ಹಾನಿಯಾಗಿದೆ. ಹಳೇ ಹುಬ್ಬಳ್ಳಿ, ಕೇಶ್ವಾಪುರ, ಗದಗ ರಸ್ತೆಯ ಮನೆಗಳು ಮತ್ತು ಎಲಿಪೆಟ್, ಹಿರೇಪೇಟ್‌ನಲ್ಲಿರುವ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಹಾನಿಯಾಗಿದೆ.

ಧಾರವಾಡ: ಅಳ್ನಾವರ ತಾಲೂಕಿನ ಹುಲಿಕೆರೆಯಲ್ಲಿ ಜಲಾವೃತಗೊಂಡಿದ್ದ ಮನೆಯಲ್ಲಿದ್ದ ವಿಶೇಷ ಚೇತನೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

Dharawada

ವಿಕಲಚೇತನೆಯೊಬ್ಬರನ್ನು ರಕ್ಷಿಸುತ್ತಿರುವ ಸ್ಥಳೀಯರು

ಧಾರವಾಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಜನರಲ್ಲಿ ಭೀತಿ ಕಡಿಮೆಯಾಗಿಲ್ಲ. ಕಾರಣ, ಭಾರೀ ಮಳೆಯಿಂದ ಮನೆಗಳು ಕುಸಿದುಬೀಳುವ ಹಂತದಲ್ಲಿವೆ. ಆದ್ದರಿಂದ ಮರಳಿ ಮನೆಗೆ ಸೇರಲು ಜನರು ಭಯ ವ್ಯಕ್ತಪಡಿಸುತ್ತಿದ್ದು, ಕಾಳಜಿ ಕೇಂದ್ರವನ್ನು ತೆರೆಯುವಂತೆ ಸಂತ್ರಸ್ತರು ಆಗ್ರಪಡಿಸಿದ್ದಾರೆ.

ದಾವಣಗೆರೆ: ಕರ್ನಾಟಕದ ಮಧ್ಯಭಾಗವಾದ ದಾವಣಗೆರೆಯಲ್ಲೂ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ತುಂಗಭದ್ರ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಹರಿಹರದ ಗಂಗಾನಗರದ ಕೆಲ ಮನೆಗಳಿಗೆ ನೀರು ನುಗ್ಗಿದ ಕಾರಣ, 15 ಕುಟುಂಬಗಳನ್ನು ಸ್ಥಳಾಂತರಿಸಿ ಹರಿಹರದ ಎಪಿಎಂಸಿ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಎಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

ತುಂಗಭದ್ರಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ 70 ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹರಿಹರ ತಾಲೂಕಿನ ಉಕ್ಕಡಗಾತ್ರಿ ಪುಣ್ಯಕ್ಷೇತ್ರಕ್ಕೆ ನೀರು ನುಗ್ಗಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆಯ ಆರ್ಭಟ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆ

(Heavy rain in Uttara Karnataka region several villages and farms were waterlogged)

Click on your DTH Provider to Add TV9 Kannada