AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಜೋಗ ಜಲಪಾತ ವೀಕ್ಷಿಸಲು ಬರುವವರಿಗೆ ವಿಶೇಷ ಬಸ್​ ವ್ಯವಸ್ಥೆ ಕಲ್ಪಿಸಿದ ಕೆಎಸ್​ಆರ್​ಟಿಸಿ

Jog Falls Package Tour: ಬೆಂಗಳೂರಿನಿಂದ ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆಂದು ಬಿಡಲಾದ ವಿಶೇಷ ಯೋಜನೆ ಅಡಿಯಲ್ಲಿ ಮಕ್ಕಳಿಗೆ 1,800 ರೂಪಾಯಿ ಹಾಗೂ ವಯಸ್ಕರಿಗೆ 2,000 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದರಲ್ಲಿ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ವೆಚ್ಚವೂ ಸೇರಿಕೊಂಡಿದೆ ಎನ್ನುವುದು ಗಮನಾರ್ಹ.

ಬೆಂಗಳೂರಿನಿಂದ ಜೋಗ ಜಲಪಾತ ವೀಕ್ಷಿಸಲು ಬರುವವರಿಗೆ ವಿಶೇಷ ಬಸ್​ ವ್ಯವಸ್ಥೆ ಕಲ್ಪಿಸಿದ ಕೆಎಸ್​ಆರ್​ಟಿಸಿ
ಜೋಗ ಜಲಪಾತ (ಸಂಗ್ರಹ ಚಿತ್ರ)
TV9 Web
| Updated By: Skanda|

Updated on:Jul 24, 2021 | 11:15 AM

Share

ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮವಾಗಿ ಮಳೆಗಾಲದಲ್ಲಿ ಕಳೆಗಟ್ಟುವ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು (Tourists) ಕೈಚಾಚಿ ಕರೆಯುತ್ತಿವೆ. ಮಲೆನಾಡಿನಲ್ಲಿ ಧುಮ್ಮಿಕ್ಕುವ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದ್ದು, ರಾಜ್ಯದ ವಿವಿಧ ಭಾಗಗಳ ಪ್ರವಾಸಿಗರು ಜಲಧಾರೆಯ ಅಂದವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಮಲೆನಾಡಿನ ಮಳೆಗಾಲದ ಸೊಬಗು, ಜೋಗ ಜಲಪಾತದ (Jog Falls) ವೈಭವವನ್ನು ಅನುಭವಿಸಿ ಮೈಮರೆಯಲು ಬರುವ ಪ್ರವಾಸಿ ಪ್ರಿಯರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ಜೋಗಕ್ಕೆ ವಿಶೇಷ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದು, ಆಸಕ್ತರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವುಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕೆಎಸ್​ಆರ್​ಟಿಸಿ ಪರಿಚಯಿಸಿರುವ ವಿಶೇಷ ಬಸ್​ನಲ್ಲಿ (ಎಸಿ ರಹಿತ ಸ್ಲೀಪರ್ – Non AC Sleeper) 30 ಆಸನಗಳ ವ್ಯವಸ್ಥೆ ಇದ್ದು, ಸದ್ಯದ ಮಾಹಿತಿ ಪ್ರಕಾರ ಪ್ರತಿ ವಾರಾಂತ್ಯಕ್ಕೆ ಈ ಬಸ್​ ಬೆಂಗಳೂರಿನಿಂದ ಜೋಗಕ್ಕೆ ಸೇವೆ ಒದಗಿಸಲಿದೆ. ಒಂದು ವೇಳೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಲ್ಲಿ ಅದನ್ನು ವಾರದ ದಿನಗಳಿಗೂ ಪ್ರವಾಸಿಗರಿಗೆಂದೇ ವಿಶೇಷ ದರದಲ್ಲಿ ವಿಸ್ತರಿಸುವ ಯೋಚನೆಯಲ್ಲಿ ಕೆಎಸ್​ಆರ್​ಟಿಸಿ ಇದೆ.

ಕೆಎಸ್​ಆರ್​ಟಿಸಿ ಶಿವಮೊಗ್ಗ ವಿಭಾಗೀಯ ಅಧಿಕಾರಿ ಸತೀಶ್.ವಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ 5.30ರ ಸುಮಾರಿಗೆ ಜೋಗಕ್ಕೆ ಬಂದು ತಲುಪಲಿದೆ. ಪ್ರವಾಸಿಗರು ಹೊಟೇಲ್​ಗಳಿಗೆ ತೆರಳಿ ಸ್ನಾನ, ತಿಂಡಿ ಮುಗಿಸಿಕೊಂಡು ನಂತರ ವರದಹಳ್ಳಿ ಶ್ರೀಧರ ಆಶ್ರಮ, ವರದಾಮೂಲ, ಇಕ್ಕೇರಿ, ಕೆಳದಿ ಹಾಗೂ ಜೋಗ ಜಲಪಾತವನ್ನು ವೀಕ್ಷಿಸಬಹುದಾಗಿದೆ. ಮಧ್ಯಾಹ್ನದ ಊಟಕ್ಕೆ ಹೊಟೇಲ್​ಗಳಲ್ಲಿ ವ್ಯವಸ್ಥೆ ಇರುತ್ತದೆ. ಸಂಜೆಗೆ ಶಾಪಿಂಗ್​ ಮಾಡಲಿಚ್ಛಿಸುವವರಿಗೂ ಅವಕಾಶ ಇರುತ್ತದೆ. ಇಡೀ ದಿನ ಇಲ್ಲಿನ ಸೌಂದರ್ಯ ಸವಿದು ರಾತ್ರಿ ಮತ್ತೆ ಸಾಗರದಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ವಾಪಾಸ್ಸು ಹೋಗಬಹುದು ಎಂದು ಹೇಳಿದರು.

ಸದ್ಯ ಬೆಂಗಳೂರಿನಿಂದ ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆಂದು ಬಿಡಲಾದ ವಿಶೇಷ ಯೋಜನೆ ಅಡಿಯಲ್ಲಿ ಮಕ್ಕಳಿಗೆ 1,800 ರೂಪಾಯಿ ಹಾಗೂ ವಯಸ್ಕರಿಗೆ 2,000 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದರಲ್ಲಿ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ವೆಚ್ಚವೂ ಸೇರಿಕೊಂಡಿದೆ ಎನ್ನುವುದು ಗಮನಾರ್ಹ.

ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಅಧಿಕಾರಿಗಳು ವಾರಾಂತ್ಯದಲ್ಲಿ ಸುಮಾರು 8,000 ಜನ ಹಾಗೂ ವಾರದ ದಿನಗಳಲ್ಲಿ ಸುಮಾರು 4,000 ಜನ ಜೋಗ ಜಲಪಾತದ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

(KSRTC Introduces Jog Falls Tour package from Bengaluru in Weekend)

ಇದನ್ನೂ ಓದಿ: Jog Falls Video: ಆಹಾ! ಭೋರ್ಗರೆವ ಜೋಗ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ 

ದಶಕದ ಬಳಿಕ ಜೋಗ ಜಲಪಾತದಂತೆ ತುಂಬಿ ಹರಿದ ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ -ಮನ ಸೋತ ಪ್ರವಾಸಿಗರು

Published On - 11:10 am, Sat, 24 July 21