ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಶಾಂತಿನಗರ, ಮೆಜೆಸ್ಟಿಕ್, ಕೋರಮಂಗಲ, ಜೆ.ಪಿ. ನಗರ, ರಾಜಾಜಿನಗರ, ಆಡುಗೋಡಿ ರಿಚ್ಮಂಡ್ ಸರ್ಕಲ್, ವಿಧಾನಸೌಧ, ಯಶವಂತಪುರ, ವಿಜಯನಗರ, ವಿಲ್ಸನ್ ಗಾರ್ಡನ್ ಸೇರಿ ನಗರದ ಹಲವೆಡೆ ಮಳೆಯಾಗಿದೆ. ವಾಹನ ಸವಾರರು ಮಳೆಗೆ ಸಿಲುಕಿ ಪರದಾಡ್ತಿರುವ ದೃಶ್ಯ ಹಲವೆಡೆ ಕಂಡುಬಂದಿದೆ. ಮಳೆಗೆ ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿರುವ ಕಾರಣ ಜನರಿಗೆ ಮತ್ತಷ್ಟು ಕಷ್ಟವಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣ ಸುತ್ತಮುತ್ತ ಕೂಡ ಭಾರಿ ಮಳೆ ಉಂಟಾಗಿದೆ. ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಟರ್ಮಿನಲ್ ಮುಂಭಾಗ ನೀರು ನಿಂತಿದೆ. ಟರ್ಮಿನಲ್ ಮುಂದೆ 2 ಅಡಿಗೂ ಹೆಚ್ಚು ನೀರು ನಿಂತಿರುವ ಕಾರಣ ವಾಹನಗಳು ಸಂಚರಿಸಲಾಗದೇ ಪರದಾಡುವಂತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿಯೂ ಧಾರಾಕಾರ ಮಳೆಯಾಗಿದೆ.
ಭಾರೀ ಮಳೆಗೆ ಧರೆಗುರುಳಿದ ಮರ
ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಶೇಷಾದ್ರಿಪುರಂನಲ್ಲಿ ಗಾಳಿ ಮಳೆಗೆ ಮರ ಧರೆಗುರುಳಿದೆ. ಶಿರೂರು ಪಾರ್ಕ್ ರಸ್ತೆಯಲ್ಲಿ ಮರ ಬಿದ್ದಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಮಂತ್ರಿಮಾಲ್ ಕಡೆಗೆ ಸಾಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಅಷ್ಟೇ ಅಲ್ಲದೆ, ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಕೆರೆಯಂತಾಗಿದೆ. ಮಂತ್ರಿಮಾಲ್ ಬಳಿಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಬಾಗಲಕೋಟೆ: ಸಿಡಿಲು ಬಡಿದು ಯುವಕ ದುರ್ಮರಣ
ಮುಷ್ಠಿಗೇರಿ ಬಳಿ ಸಿಡಿಲು ಬಡಿದು ಯುವಕ ದುರ್ಮರಣವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುಷ್ಠಿಗೇರಿಯಲ್ಲಿ ಈ ಘಟನೆ ನಡೆದಿದೆ. ಸಿಡಿಲು ಬಡಿದು ಯುವಕ ಮಹೇಶ್ (19) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ದುರಂತ ಸಂಭವಿಸಿದೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರು: ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಇಬ್ಬರ ರಕ್ಷಣೆ
ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಮಹಲ್ ಗೋಡ್ ಗ್ರಾಮದ ಬಳಿ ಸೇತುವೆ ಮೇಲೆ ಘಟನೆ ನಡೆದಿದೆ. ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಚಲಾಯಿಸಿದ್ದರು. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಸವಾರರಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮಾಗುಂಡಿ- ಕಳಸ ಸಂಪರ್ಕ ಕಡಿತವಾಗಿದೆ.
ನ್ಯಾಯಬೆಲೆ ಅಂಗಡಿಗೆ ನೀರು ನುಗ್ಗಿ ಪಡಿತರ ಜಲಾವೃತ ಆದ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿಯ ರಸ್ತೆ ಸಂಪೂರ್ಣ ಜಲಾವೃತವಾಗಿ ಅವಾಂತರವಾಗಿದೆ. ಅಂಬಿಕಾ ನಗರದಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ.
ಗದಗ: ಬೂದೇಶ್ವರ ಮಠ ಬಹುತೇಕ ಜಲಾವೃತ
ಐತಿಹಾಸಿಕ ಬೂದೇಶ್ವರ ಮಠ ಬಹುತೇಕ ಜಲಾವೃತವಾಗಿದೆ. ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಮಠ ಜಲಾವೃತವಾಗಿದೆ. ಗದಗ ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬೂದೇಶ್ವರ ಮಠ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ರಸ್ತೆಗಳು, ಜಮೀನುಗಳು ಕೆರೆಯಂತಾಗಿದೆ. ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆಗೆ ಬೃಹತ್ ಗೋಡೆ ಕುಸಿತ; ಮನೆ ಕುಸಿಯುವ ಭೀತಿಯಿಂದ ಕಣ್ಣೀರಿಡುತ್ತಿರುವ ಮಹಿಳೆ
ಇದನ್ನೂ ಓದಿ: Karnataka Weather Today: ಬೆಂಗಳೂರು ಸೇರಿ ರಾಜ್ಯಾದ್ಯಂತ 3 ದಿನ ಭಾರೀ ಮಳೆ; 19 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ