
ರಾಯಚೂರು: ಆಹಾರ ಇಲಾಖೆ ವೆಬ್‌ಸೈಟ್ ದುರ್ಬಳಕೆ ಮಾಡಿ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಮುಖ್ಯ ತಿರುವು ಸಿಕ್ಕಿದ್ದು, ಆಹಾರ ಇಲಾಖೆಯ ಶಿರಸ್ತೆದಾರನೇ ಕಿಂಗ್ಪಿನ್ ಎಂಬ ಮಾಹಿತಿ ಹೊರಬಿದ್ದಿದೆ. ಸಿಂಧನೂರು ಆಹಾರ ಇಲಾಖೆ ಶಿರಸ್ತೆದಾರ ಆನಂದ್ ಸದ್ಯ ನಾಪತ್ತೆಯಾಗಿದ್ದು, ಈತನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನು ಆನಂದ್ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಶಾಸಕ ನಾಡಗೌಡರ ಮಾಜಿ ಆಪ್ತ ಕಾರ್ಯದರ್ಶಿ
ಆನಂದ್, ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರ ಮಾಜಿ ಆಪ್ತ ಕಾರ್ಯದರ್ಶಿ ಎಂದು ತಿಳಿದು ಬಂದಿದ್ದು, ಆಹಾರ ಇಲಾಖೆಯಲ್ಲಿ ಆನಂದ್ ಥಂಬ್ ಇಂಪ್ರೇಷನ್ ಬಳಸಿ ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರನ್ನಾಗಿಸುವ ಮೂಲಕ ಪಡಿತರ ಲೂಟಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಸಂಚಾಲಕಿ ಭಾಗ್ಯಶ್ರಿ ಮತ್ತು ಆಕೆಯ ಸಹಾಯಕ ತಿಮ್ಮಣ್ಣ ಸೇರಿಕೊಂಡು ಆಹಾರ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ಸುಮಾರು 545 ಎಪಿಎಲ್ ಕಾರ್ಡುದಾರರನ್ನ ಬಿಪಿಎಲ್ ಕಾರ್ಡುದಾರರಾಗಿ ಪರಿವರ್ತಿಸಿ ಪಡಿತರ ಲೂಟಿ ಮಾಡಿದ್ದರು ಎನ್ನುವುದು ಈ ಹಿಂದೆ ತಿಳಿದುಬಂದಿತ್ತು. ಇವರಿಬ್ಬರ ಕೃತ್ಯಕ್ಕೆ ಸಹಕರಿಸಿರುವ ಸಿಂಧನೂರು ನಗರದಲ್ಲಿರುವ ಕಂಪ್ಯೂಟರ್ ಸೆಂಟರ್ನ ಬಸವರಾಜ ಎಂಬಾತ ಹುಲಿಗೆಮ್ಮ ಮತ್ತು ಬಸಪ್ಪ ದಂಪತಿಯ ಎಪಿಎಲ್ ಕಾರ್ಡನ್ನ ಬಿಪಿಎಲ್ ಕಾರ್ಡನ್ನಾಗಿ ಪರಿವರ್ತಿಸಿದ್ದಾರೆ.
ಜಿಲ್ಲೆಯಲ್ಲಿ ಸದ್ದಿಲ್ಲದೇ ಆಹಾರ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ಎಪಿಎಲ್ ಆ ಮೂಲಕ ಕಾರ್ಡುದಾರರನ್ನು ಬಿಪಿಎಲ್ ಕಾರ್ಡುದಾರರೆಂದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ನಿತ್ಯವೂ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಧಾನ್ಯ ದೋಚುತ್ತಿದ್ದ ಸ್ಫೋಟಕ ಸಂಗತಿ ಬೆಳಕಿಗೆ ಬಂದಿತ್ತು. ನಿರಂತರವಾಗಿ ದಂಧೆ ನಡೆಸುತ್ತಿದ್ದ ಐವರ ವಿರುದ್ಧ ಎಫ್ಐಆರ್ ಹಾಕಿರುವ ಪೊಲೀಸರು ಸದ್ಯ ನಾಲ್ವರನ್ನು ಜೈಲಿಗೆ ತಳ್ಳಿದ್ದಾರೆ. ಈ ಪ್ರಕರಣ ಸಂಬಂಧ ಭಾಗ್ಯಶ್ರಿ, ತಿಮ್ಮಣ್ಣ, ಬಸವರಾಜ ಮತ್ತು ಬಸಪ್ಪ ಎಂಬುವವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಹಾರ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ಎಪಿಎಲ್ ಕಾರ್ಡುದಾರರನ್ನೆ ಬಿಪಿಎಲ್ ಕಾರ್ಡುದಾರರೆಂದು ಅಪ್ಲೋಡ್ ಮಾಡಿ ಪಡಿತರ ದೋಚುತ್ತಿದ್ದ ಕೃತ್ಯದಲ್ಲಿ ಶಾಮೀಲಾಗಿದ್ದ ಹುಲಿಗೆಮ್ಮ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ನಾಲ್ವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಪರಾರಿಯಾಗಿರುವ ಹುಲಿಗೆಮ್ಮ ಪತ್ತೆಗೆ ಜಾಲ ಬೀಸಿದ್ದಾರೆ. ಹೀಗಾಗಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದವರನ್ನು ಕೇವಲ ಜೈಲಿಗೆ ತಳ್ಳಿದರೆ ಸಾಲದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಪಿಎಲ್ ಕಾರ್ಡುದಾರರು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಈ ಕೇಸ್ನಲ್ಲಿ ಶಾಮೀಲಾಗಿದ್ದ ನಾಲ್ವರನ್ನ ಜೈಲಿಗಟ್ಟಿದ ಪೊಲೀಸರು. ಸಿಂಧನೂರು ನಗರ ಮತ್ತು ಗ್ರಾಮೀಣ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ ಬಡವರ ಪಾಲಾಗಬೇಕಿದ್ದ ಆಹಾರವನ್ನು ಈ ರೀತಿಯಾಗಿ ದೋಚುತ್ತಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗುವುದು ಅನಿವಾರ್ಯವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರ ಯಾರ ಹೆಸರು ಕೇಳಿ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Food Department website: ಆಹಾರ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ಪಡಿತರ ಲೂಟಿ; ನಾಲ್ವರು ಜೈಲಿಗೆ