ಮರ ಕಡಿದಿದ್ದಕ್ಕೆ ಹೈಕೋರ್ಟ್ ಮೊರೆ : ತಾತ್ಕಾಲಿಕವಾಗಿ ಸ್ವಾಮೀಜಿ ವಿಗ್ರಹ ನಿರ್ಮಾಣಕ್ಕೆ ತಡೆ
ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದೆ. ಹಾಗಿದ್ದರೂ ಎಲ್ಲಾ ಕಾನೂನುಗಳನ್ನ ಗಾಳಿಗೆ ತೂರಿ ಇಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದು, ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ ಎನ್ನುವುದು ಪರಿಸರ ಪ್ರೇಮಿಗಳ ಎಚ್ಚರಿಕೆಯಾಗಿದೆ.

ಹಾಸನ: ನಗರದ ಮುಖ್ಯ ರಸ್ತೆಯಲ್ಲಿ ಶತಮಾನಗಳಿಂದ ಇದ್ದ ಮರಗಳನ್ನು ಸ್ವಾಮೀಜಿಯೊಬ್ಬರ ವಿಗ್ರಹ ನಿರ್ಮಾಣ ಮಾಡುವ ಉದ್ದೇಶದಿಂದ ಭಕ್ತರು ಕಡಿದಿದ್ದಾರೆ. ಇದರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಬೇಡ ಎಂದು ವೈದ್ಯರು ಹಾಗೂ ವಕೀಲರ ತಂಡ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ಶುರುಮಾಡಿದೆ. ನಗರಸಭೆ ಅನುಮತಿ, ಅರಣ್ಯ ಇಲಾಖೆಯಿಂದ ತಕರಾರು ಮುಕ್ತ ಪತ್ರವನ್ನೂ ಪಡೆಯದೆ, ತನ್ನಷ್ಟಕ್ಕೆ ತಾನೇ ತಲೆ ಎತ್ತಿದ್ದ ಅಕ್ರಮ ಮಂಟಪದ ಕಾಮಗಾರಿ ನಿಲ್ಲಬೇಕು ವೈದ್ಯರು ಹಾಗೂ ವಕೀಲರ ತಂಡ ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ ಎಂದು ಕೋರ್ಟ್ ತಡೆಯಾಜ್ಞೆ ನೀಡಿದ್ದು, ಮರ ಕಡಿಯುವಾಗ ಮೌನವಾಗಿದ್ದ ಅಧಿಕಾರಿಗಳಿಗೆ ಸದ್ಯ ಆತಂಕ ಶುರುವಾಗಿದೆ.
ಸಮಸ್ಯೆ ಇಲ್ಲದಿದ್ದರೂ ಮರ ಕಡಿದಿರುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮತ್ತು ನಗರಸಭೆ ಅಧಿಕಾರಿಗಳಿಗೆ ಉರುಳಾಗಲಿದೆ ಎನ್ನಲಾಗಿದೆ. ಹಾಸನದ ಎಂಜಿ ರಸ್ತೆಯಲ್ಲಿ ಕಳೆದ ನವೆಂಬರ್ನಲ್ಲಿ ರಸ್ತೆ ಬದಿಯಲ್ಲಿದ್ದ ಬೃಹದಾಕಾರದ ಮರವನ್ನು ಕಡಿದುರುಳಿಸಿದ್ದ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು, ಮರ ಕಡಿದ ಜಾಗದಲ್ಲಿ ಆದಿಚುಂಚನಗಿರಿ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿಗಳ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದ ಭಕ್ತರ ಯತ್ನಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಯಾರಿಗೂ ತೊಂದರೆಯನ್ನೇ ನೀಡದ ಮರವನ್ನು ಕಡಿದಿದ್ದಷ್ಟೇ ಅಲ್ಲದೇ, ನಗರಸಭೆಯಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂಬ ಬಗ್ಗೆ ಪಕ್ಕಾ ದಾಖಲೆ ಸಂಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ ವೈದ್ಯರಾದ ಡಾ|ದೇವದಾಸ್ ಹಾಗೂ ವಕೀಲರಾದ ಹರೀಶ್ ಬಾಬು ನೇತೃತ್ವದ ತಂಡದ ಮನವಿ ಪುರಸ್ಕರಿಸಿರುವ ಕೋರ್ಟ್ ಈ ಕಾಮಗಾರಿಗೆ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೂ ಈ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಯಬಾರದು ಹಾಗೂ ಯಾವುದೇ ಪ್ರತಿಮೆ ಪ್ರತಿಷ್ಠಾಪನೆ ಮಾಡಕೂಡದು ಎಂದು ಎಚ್ಚರಿಕೆ ನೀಡಿದೆ. ಹಾಸನದ ನಗರಸಭೆ ಆಯುಕ್ತರು, ನಗರಾಭಿವೃದ್ದಿ ಪ್ರಾಧಿಕಾರ ಸೇರಿ ಹಲವರಿಗೆ ಕೋರ್ಟ್ ನೊಟೀಸ್ ಜಾರಿ ಮಾಡಿದ್ದು, ಮಾರ್ಚ್ 19ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಸ್ವಾಮೀಜಿ ವಿಗ್ರಹ ನಿರ್ಮಾಣಕ್ಕಾಗಿ ಮರ ಕಡಿದಿರುವ ದೃಶ್ಯ
ಮರವಿದ್ದ ಜಾಗದಲ್ಲಿ ಅಕ್ರಮ ಮಂಟಪ ಕಟ್ಟಿ, ಅಲ್ಲಿ ವಿಗ್ರಹವೊಂದನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿಯುತ್ತಲೇ ನಗರಸಭೆಗೆ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದ ಹೋರಾಟಗಾರರಿಗೆ ಅಲ್ಲಿ ಕಟ್ಟಡ ಕಟ್ಟಲು ಯಾವುದೇ ಪರವಾನಗಿ ಕೊಟ್ಟಿಲ್ಲ ಎಂದು ನಗರಸಭೆ ಆಯುಕ್ತರೇ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಮರ ಕಡಿದ ಅರಣ್ಯ ಇಲಾಖೆ ಅದೇ ಜಾಗದಲ್ಲಿ ಮುಂದಿನ ಮಳೆಗಾಲದಲ್ಲಿ ಗಿಡ ನೆಡುವುದಾಗಿ ಹಿಂಬರ ನೀಡಿದೆ. ಆದರೆ, ಮರವಿದ್ದ ಜಾಗದಲ್ಲಿ ಮಂಟಪವೊಂದು ತಲೆ ಎತ್ತಿದೆ.
ವಿಗ್ರಹ ಸ್ಥಾಪನೆ ಮಾಡೋದಕ್ಕೆ ನಮ್ಮ ವಿರೋಧ ಇಲ್ಲ. ಬದಲಿಗೆ 2006ರಲ್ಲಿ ಯೂನಿಯನ್ ಆಫ್ ಇಂಡಿಯಾ ವರ್ಸಸ್ ಸ್ಟೇಟ್ ಆಫ್ ಗುಜರಾತ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಗಣ್ಯ ವ್ಯಕ್ತಿಯ ಪ್ರತಿಮೆ ಅಥವಾ ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಅವಕಾಶ ಇಲ್ಲವೆಂದು ಹೇಳಿದೆ ಎಂಬ ಮಾಹಿತಿಯನ್ನು ಪರಿಸರ ಪ್ರೇಮಿ ಡಾ.ದೇವದಾಸ್ ತಿಳಿಸಿದ್ದಾರೆ.

ಮರ ಕಡಿದಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಪರಿಸರವಾದಿಗಳು
ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದೆ. ಹಾಗಿದ್ದರೂ ಎಲ್ಲಾ ಕಾನೂನುಗಳನ್ನ ಗಾಳಿಗೆ ತೂರಿ ಇಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದು, ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ ಎನ್ನುವುದು ಪರಿಸರ ಪ್ರೇಮಿಗಳ ಎಚ್ಚರಿಕೆಯಾಗಿದೆ.
ಈ ಬಗ್ಗೆ ಫೆಬ್ರವರಿ 24ರಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಹೋರಾಟಗಾರನ ಅರ್ಜಿಯನ್ನ ಮಾರ್ಚ್ 1ರಂದು ಕೋರ್ಟ್ ವಿಚಾರಣೆ ನಡೆಸಿದ್ದು, ಪ್ರತಿಮೆ ಸ್ಥಾಪನೆಗೆ ತಡೆ ನೀಡಿದೆ. ಮಾರ್ಚ್ 19ರೊಳಗೆ ಸೂಕ್ತ ಉತ್ತರ ನೀಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನೊಟೀಸ್ ಜಾರಿಮಾಡಲಾಗಿದ್ದು, ಏಪ್ರಿಲ್ 19ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ವಕೀಲರಾದ ಹರೀಶ್ ಬಾಬು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸ್ವಾಮಿಜಿ ಮೇಲಿನ ಭಕ್ತಿಯಿಂದ ಅನುಮತಿ ಇಲ್ಲದ ಜಾಗದಲ್ಲಿ ಪ್ರತಿಮೆ ನಿರ್ಮಿಸಲು ಮುಂದಾದ ಕೆಲ ಭಕ್ತರ ನಿರ್ಧಾರ ಸ್ವಾಮೀಜಿ ಪ್ರತಿಮೆ ವಿಚಾರವನ್ನೇ ವಿವಾದವಾಗುವಂತೆ ಮಾಡಿದೆ. ಮರ ಕಡಿದ ಜಾಗದಲ್ಲಿ ಗಿಡ ನೆಡಿ. ಸುರಕ್ಷಿತ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಿ ಎಂದು ಹೋರಾಟಕ್ಕಿಳಿದಿರುವ ಪರಿಸರ ಪ್ರೇಮಿಗಳಿಗೆ ಇದೀಗ ತಾತ್ಕಾಲಿಕ ಗೆಲುವು ಸಿಕ್ಕಿದೆ. ಎಲ್ಲವೂ ಗೊತ್ತಿದ್ದ ಅಧಿಕಾರಿಗಳು ವಹಿಸಿದ ಮೌನದಿಂದ ಇದೀಗ ಇಕ್ಕಟ್ಟಿಗೆ ಸಿಲುಕಿದ್ದು, ಕೋರ್ಟ್ ಮುಂದೆ ಅಧಿಕಾರಿಗಳು ಏನು ಹೇಳಿಕೆ ಕೊಡುತ್ತಾರೆ ಎನ್ನುವುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Nagarhole National Park: ಕರಿ ಚಿರತೆ ಮರವೇರುವ ಅಪರೂಪದ ದೃಶ್ಯ ನಾಗರಹೊಳೆ ಕಬಿನಿಯಲ್ಲಿ ಕ್ಯಾಮೆರಾದಲ್ಲಿ ಸೆರೆ..