ಜಾಲಿ ರೈಡ್ ಅಂತಾ ಕಾರು ಕದ್ದು.. ಆ್ಯಕ್ಸಿಡೆಂಟ್‌ ಮಾಡಿದ ಸೆಕ್ಯೂರಿಟಿ ಸಿಬ್ಬಂದಿ ಅಂದರ್​

ಜಾಲಿ ರೈಡ್ ಅಂತಾ ಕಾರು ಕದ್ದು.. ಆ್ಯಕ್ಸಿಡೆಂಟ್‌ ಮಾಡಿದ ಸೆಕ್ಯೂರಿಟಿ ಸಿಬ್ಬಂದಿ ಅಂದರ್​
ಜಾಲಿ ರೈಡ್ ಅಂತಾ ಕಾರು ಕದ್ದು ಆ್ಯಕ್ಸಿಡೆಂಟ್‌ ಮಾಡಿದ ಸೆಕ್ಯೂರಿಟಿ ಸಿಬ್ಬಂದಿ ಅಂದರ್

ಜಾಲಿ ರೈಡ್​ಗೆ ಅಂತಾ ಕಾರು ಕದ್ದು ಚಲಾಯಿಸುವಾಗ ಆ್ಯಕ್ಸಿಡೆಂಟ್‌ ಮಾಡಿದ ಸೆಕ್ಯೂರಿಟಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್​ ಒಂದರ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

KUSHAL V

|

Feb 22, 2021 | 11:24 PM

ಬೆಂಗಳೂರು: ಜಾಲಿ ರೈಡ್​ಗೆ ಅಂತಾ ಕಾರು ಕದ್ದು ಚಲಾಯಿಸುವಾಗ ಆ್ಯಕ್ಸಿಡೆಂಟ್‌ ಮಾಡಿದ ಸೆಕ್ಯೂರಿಟಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್​ ಒಂದರ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕ್ ಸರ್ಕಾರ್ ಹಾಗೂ ಶಿಬಂ ನಾಥ್ ಬಂಧಿತ ಆರೋಪಿಗಳು. ಇಬ್ಬರು ತ್ರಿಪುರ ಮೂಲದವರಾಗಿದ್ದು ನಗರದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.

ಏನಿದು ಪ್ರಕರಣ? ಪ್ರಿಯಾಂಕ್ ಹಾಗೂ ಶಿಬಂ ಒಂದೇ ರೂಂನಲ್ಲಿ ವಾಸವಿದ್ದರು. ಅತ್ತ ಪ್ರಿಯಾಂಕ್ ಸರ್ಕಾರ್ ಅಪಾರ್ಟ್​ಮೆಂಟ್​ನ ಸೆಕ್ಯೂರಿಟಿಯಾಗಿದ್ದರೆ ಇತ್ತ ಶಿಬಂ ನಾಥ್ ಮಂತ್ರಿ ಮಾಲ್ ಪಾರ್ಕಿಂಗ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ಫೆ.13ರ ಶನಿವಾರ ಅಪಾರ್ಟ್​ಮೆಂಟ್​ ಬಳಿ ಕುಡಿದು ಪಾರ್ಟಿ ಮಾಡಿದ್ದ ಆರೋಪಿಗಳು ಬಳಿಕ ಜಾಲಿ ರೈಡ್ ಹೋಗುವ ಪ್ಲ್ಯಾನ್ ಮಾಡಿದ್ದರು. ಅಂತೆಯೇ, ಸೆಕ್ಯೂರಿಟಿ ರೂಂನಲ್ಲಿದ್ದ ಕೀ ಬಂಚ್​ನಲ್ಲಿದ್ದ ಕಾರ್ ಕೀಯೊಂದನ್ನು ತೆಗೆದುಕೊಂಡು ವಾಹನದಲ್ಲಿ ಜಾಲಿ ರೈಡ್ ಹೋಗಿದ್ದರು.

ಮಧ್ಯರಾತ್ರಿ ಚಾಮರಾಜಪೇಟೆಯ 5ನೇ ಕ್ರಾಸ್ ಬಳಿ ಹೋಗುತ್ತಿದ್ದ ವೇಳೆ ಕಾರನ್ನು ಡಿಕ್ಕಿ ಹೊಡೆದಿದ್ರು. ಬಳಿಕ ಅದನ್ನು ರಸ್ತೆ ಬದಿ ಪಾರ್ಕ್ ಮಾಡಿ ಲಾಕ್ ಮಾಡಿಕೊಂಡು ವಾಪಾಸ್ ಬಂದಿದ್ರು.

ಇನ್ನು, ಕಾರು ಕಾಣೆಯಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಾಲೀಕ ರವಿಕುಮಾರ್ ದೂರು ನೀಡಿದ್ದರು. ದೂರಿನನ್ವಯ ತನಿಖೆಗೆ ಮುಂದಾದ ಪೊಲೀಸರು ಪ್ರಿಯಾಂಕ್​ನನ್ನ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ, ನಿಜಾಂಶ ಬಯಲಾಗಿದೆ.

ಆದರೆ, ಕುಡಿದ ಮತ್ತಿನಲ್ಲಿದ್ದ ಆರೋಪಿಗಳಿಗೆ ಅಪಘಾತವೆಸಗಿದ್ದ ಸ್ಥಳವೇ ಗೊತ್ತಿರಲಿಲ್ಲ. ಬಟ್​, ಅಪಘಾತದ ಬಳಿಕ ಇಬ್ಬರು ತಮ್ಮ ಫೋನ್​ನಲ್ಲಿ ಕಾರ್​ನ ಫೋಟೋವನ್ನು ಕ್ಲಿಕ್ಕಿಸಿದ್ದರು. ಫೋಟೋ ಆಧರಿಸಿ ಇಡೀ ದಿನ ನಗರದ ವಿವಿಧೆಡೆ ಹುಡುಕಾಡಿದ್ದ ಪೊಲೀಸರಿಗೆ ಕಾರಿನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ, ಆರೋಪಿಗಳ ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ ಚಾಮರಾಜಪೇಟೆಗೆ ಹೋಗಿರುವುದು ಪತ್ತೆಯಾಗಿತ್ತು. ಇದನ್ನು ಆಧರಿಸಿ ಅಲ್ಲಿಗೆ ತೆರಳಿದ ಖಾಕಿ ಪಡೆ ಅಪಘಾತಕ್ಕೆ ಈಡಾಗಿದ್ದ ಹೋಂಡಾ ಸಿಟಿ ಕಾರ್​ನ ಪತ್ತೆಹಚ್ಚಿದರು. ಅಪಘಾತದಲ್ಲಿ ಕಾರ್​ನ ಮುಂಬದಿ ಸಂಪೂರ್ಣ ಜಖಂಗೊಂಡಿದೆ. ಆರೋಪಿಗಳನ್ನ ಸದ್ಯ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 8.82 ಲಕ್ಷ ಮೌಲ್ಯದ ಚಿನ್ನ ಜಪ್ತಿ ಇತ್ತ, ಅಕ್ರಮವಾಗಿ ಸಾಗಿಸುತ್ತಿದ್ದ 8.82 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿರುವ ಘಟನೆ ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈನಿಂದ ಬಂದಿದ್ದ ಪ್ರಯಾಣಿಕರಿಬ್ಬರು ಚಿನ್ನ ಸಾಗಿಸುತ್ತಿದ್ರು. ಇಬ್ಬರನ್ನ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ.

ತಾಯಿ-ಮಗನ ಮೇಲೆ ದಾಳಿ ಮಾಡಿದ್ದ ಚಿರತೆಯ ಹತ್ಯೆ ಇತ್ತ, ತಾಯಿ-ಮಗನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದ ತಾಂಡಾ ಬಳಿ ನಡೆದಿದೆ. ತಾಲೂಕಿನ ಬೈರಗೊಂಡನಹಳ್ಳಿಯ ಬೋವಿ ಕಾಲೋನಿ ಬಳಿ ಚಿರತೆಯೊಂದು ಬೆಳಗ್ಗೆ ತಾಯಿ, ಮಗನ ಮೇಲೆ ದಾಳಿ ಮಾಡಿತ್ತು. ಹಾಗಾಗಿ, ಘಟನೆಯಲ್ಲಿ ಗಾಯಗೊಂಡಿದ್ದ ಕಿರಣ್, ಚಂದ್ರಮ್ಮರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿರತೆ ದಾಳಿ ಹಿನ್ನೆಲೆಯಲ್ಲಿ ಅದನ್ನು ಹಿಡಿಯಲು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ಸಮಯದಲ್ಲಿ, ಅರೆವಳಿಕೆ ತಜ್ಞರ ಮೇಲೆ ಚಿರತೆ ದಾಳಿ ಮಾಡಿದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಅದನ್ನು ಹೊಡೆದು ಕೊಂದರು.

ಬೈಕ್​​ ಹಾಗೂ ಟಂಟಂ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ ಬೈಕ್​​ ಹಾಗೂ ಟಂಟಂ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮಂದೇವಾಲ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಮೈಯೂರು ಗ್ರಾಮದ ರೇವಣಸಿದ್ದಪ್ಪ(36) ಹಾಗೂ ಟಂಟಂನಲ್ಲಿದ್ದ ಸಂಗಾಪುರ ಗ್ರಾಮದ ಲಕ್ಷ್ಮೀ(18) ದುರ್ಮರಣ ಹೊಂದಿದ್ದಾರೆ. ಅಪಘಾತದಲ್ಲಿ 10 ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

5,500 ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಇತ್ತ, 5,500 ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಗ್ರಾಮ ಲೆಕ್ಕಿಗ ಮಹೇಶ್ ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಪೌತಿ ಖಾತೆಗೆ ಕುಟುಂಬದವರ ಹೆಸರು ಸೇರಿಸಲು ಮಹೇಶ್ ಕುಮಾರ್ 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದಲ್ಲದೆ, 2 ದಿನಗಳ ಹಿಂದೆ 2,500 ಲಂಚ ಸಹ ಸ್ವೀಕರಿಸಿದ್ದ. ಇಂದು 5,500 ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸ್ ‌ನಿರೀಕ್ಷಕರಾದ ಕಿರಣ್ ಕುಮಾರ್ ಮತ್ತು ದೀಪಕ್.ಎಲ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹೇಶ್​ ಬಲೆಗೆ ಬಿದ್ದಿದ್ದಾನೆ.

ಮನೆಯ ಹಿಂಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮನೆಯ ಹಿಂಬಾಗಿಲು ಮುರಿದ ಖದೀಮರು ಚಿನ್ನಾಭರಣ ಕದ್ದೊಯ್ದ ಘಟನೆ ಬೆಂಗಳೂರಿನ ಓಂ ಸಾಯಿನಗರದಲ್ಲಿ ನಡೆದಿದೆ. ಊರಿಗೆ ತೆರಳಿದ್ದ ಶಿಕ್ಷಕ ಅರಳಪ್ಪ ನಿವಾಸದಲ್ಲಿ ಕಳ್ಳತನ ನಡದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ನಡೆದಿದೆ.

ಇದನ್ನೂ ಓದಿ:ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ

Follow us on

Related Stories

Most Read Stories

Click on your DTH Provider to Add TV9 Kannada