ಲಗೇಜ್ ಸಮೇತ ಹಾಸ್ಟೆಲ್ನಿಂದ ಹೊರ ಬಿದ್ದಿರುವ ವಿದ್ಯಾರ್ಥಿಗಳು; ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಒತ್ತಾಯ
ನಗರದ ಜೆಎಂಐಟಿ ವೃತ್ತದ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಅನೇಕ ಬಿಇಡಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಆದರೆ ಕಳೆದೆರಡು ದಿನಗಳಿಂದ ಹಾಸ್ಟೆಲ್ ವಾರ್ಡನ್ ಮಹಾಲಿಂಗಪ್ಪ ವಿದ್ಯಾರ್ಥಿಗಳಿಗೆ ಹಾಸ್ಟಲ್ ಖಾಲಿ ಮಾಡುವಂತೆ ಸೂಚಿಸುತ್ತಿದ್ದು ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಚಿತ್ರದುರ್ಗ: ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ತಡೆಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಕೊರೊನಾ ಎರಡನೇ ಅಲೆಯನ್ನು ನಿರ್ಲಕ್ಷಿಸಬೇಡಿ ಎಂದು ವೈದ್ಯರು ಮೇಲಿಂದ ಮೇಲೆ ಮನವಿ ಮಾಡುತ್ತಿದ್ದಾರೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ದುಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗ ನಗರದ ಜೆಎಂಐಟಿ ವೃತ್ತದ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಅನೇಕ ಬಿಇಡಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಆದರೆ ಕಳೆದೆರಡು ದಿನಗಳಿಂದ ಹಾಸ್ಟಲ್ ವಾರ್ಡನ್ ಮಹಾಲಿಂಗಪ್ಪ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಖಾಲಿ ಮಾಡುವಂತೆ ಸೂಚಿಸುತ್ತಿದ್ದು ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಏಪ್ರಿಲ್ 22 ರಂದು ಊಟ, ತಿಂಡಿ ಕೂಡ ನೀಡಿಲ್ಲ. ಕುಡಿಯಲು ನೀರು ಸಹ ನೀಡದೆ ಹಾಸ್ಟೆಲ್ ಖಾಲಿ ಮಾಡಲು ಸೂಚಿಸುತ್ತಿದ್ದಾರೆ. ನಿನ್ನೆ ರಾತ್ರಿ ಕರ್ಫ್ಯೂ ಇದ್ದ ಕಾರಣ ಊಟ , ತಿಂಡಿ ಇಲ್ಲದೆ ಉಪವಾಸವಿರುವಂತಾಗಿದೆ. ಮತ್ತೊಂದು ಕಡೆ ಬಿಇಡಿ ಪರೀಕ್ಷೆಗಳು ಇರುವುದರಿಂದ ದೂರದ ಊರುಗಳಿಂದ ಬಂದಿರುವ ನಮಗೆ ಇರುವುದು ಎಲ್ಲಿ ಎಂಬ ಆತಂಕ ಶುರುವಾಗಿದೆ. ಹೀಗಾಗಿ, ಬಿಇಡಿ ಪರೀಕ್ಷೆಗಳನ್ನು ಮುಂದೂಡಿ ಇಲ್ಲವೇ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಎಂದು ವಿದ್ಯಾರ್ಥಿ ಅರುಣ ಹೇಳಿದ್ದಾರೆ.
ಇನ್ನು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದನ್ನು ಅರಿತ ಚಿತ್ರದುರ್ಗ ಠಾಣೆ ಸಿಪಿಐ ರಮೇಶ್ ಸ್ಥಳಕ್ಕೆ ಆಗಮಿಸಿದ್ದು, ವಿದ್ಯಾರ್ಥಿಗಳ ಸ್ಥಿತಿ ಕಂಡು ಹಾಸ್ಟೆಲ್ ವಾರ್ಡನ್ ಮಹಾಲಿಂಗಪ್ಪನನ್ನು ತರಾಟೆಗೆ ತೆಗೆದುಕೊಂಡರು. ನಂತರದಲ್ಲಿ ಈ ಕುರಿತು ಮಾತನಾಡಿದ ಹಾಸ್ಟೇಲ್ ವಾರ್ಡನ್ ಮಹಾಲಿಂಗಪ್ಪ ಮೊನ್ನೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ಖಾಲಿ ಮಾಡಿಸಲು ಸೂಚಿಸಿದ್ದರು. ಇದೀಗ ಹಾಸ್ಟೆಲ್ ಒದಗಿಸುವಂತೆ ಆದೇಶಿಸಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಕ್ದೇತ್ರದಲ್ಲೇ ವಿದ್ಯಾರ್ಥಿಗಳು ಒಂದು ದಿನ ಊಟ ನೀರಿಲ್ಲದೆ ಹೈರಾಣಾದ ಘಟನೆ ನಡೆದಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ:
ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆ ಬೆಂಗಳೂರು ನಗರ
ಸೋಂಕು ತಗುಲಿಸಿಕೊಳ್ಳಬೇಡಿ; ಚಿಕಿತ್ಸೆಗಿಂತಲೂ ಮುಂಜಾಗ್ರತೆಯೇ ಕೊರೊನಾಗೆ ಸೂಕ್ತ ಮದ್ದು