ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣಕ್ಕೆ ಹೋಗಲು ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿತ್ತು. ಪ್ರಯಾಣಿಕರ ಕಿಸೆಯಿಂದ ಮೊಬೈಲ್‌ಗಳು ಹೇಗೆ ಮಂಗ ಮಾಯವಾಗುತ್ತಿದ್ದವೆಂದು ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಜೇಬಿನಲ್ಲಿದ್ದ ಮೊಬೈಲ್‌ಗಳನ್ನು ಯಾರ ಕಣ್ಣಿಗೂ ಕಾಣಿಸದಂತೆ ಎಗರಿಸುವವರು ಜಾಸ್ತಿಯಾಗಿಬಿಟ್ಟಿದ್ದರು. ಕಳೆದ ವಾರವಷ್ಟೇ ಮೊಬೈಲ್‌ಗಳು ಸರಣಿ ಕಳ್ಳತನವಾಗಿ ಮತ್ತಷ್ಟು ಚಿಂತೆಗೆ ಕಾರಣವಾಗಿತ್ತು.
ಮೊಬೈಲ್ ಕಳೆದುಕೊಂಡವರ ಪೈಕಿ ಕೆಲವರು ಹೋಗಿ ಪೊಲೀಸ್ ಠಾಣೆಗೆ ದೂರು ಕೊಟ್ಟರೆ, ಮತ್ತೆ ಕೆಲವರು ಯಾಕೆ ಬೇಕಪ್ಪಾ ಉಸಾಬರಿ ಎನ್ನುವಂತೆ ತಮ್ಮ ಹಣೆಬರಹಕ್ಕೆ ಬೈದುಕೊಂಡು ಹೋಗಿಬಿಡುತ್ತಿದ್ದರು. ಹೆಚ್ಚಾಗಿ ಬಸ್ಸಿಗಾಗಿ ಕಾದು ಸುಸ್ತಾಗಿ ನಿದ್ದೆಗೆ ಶರಣಾದವರನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಕ್ಷಣಾರ್ಧದಲ್ಲಿ ಮೊಬೈಲ್ ಎಗರಿಸಿ ಮಾಯವಾಗುತ್ತಿತ್ತು. ಮದ್ಯದ ಅಮಲಿನಲ್ಲಿ ಇರುವವರು ಸಿಕ್ಕರಂತೂ ಅವರ ಜೇಬಿನಿಂದ ಮೊಬೈಲ್ ಎತ್ತದೇ ಬಿಡುತ್ತಿರಲಿಲ್ಲ. ಕೇವಲ ನಾಲ್ಕೇ ದಿನದಲ್ಲಿ ಒಟ್ಟು 20 ಬೆಲೆಬಾಳುವ ಮೊಬೈಲ್ ದೋಚಿರುವ ಐನಾತಿ ಕಳ್ಳರು ಅದರಿಂದಲೇ 1 ಲಕ್ಷದ 42 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ.
ಇಂತಹ ಕಳ್ಳರ ಹಾವಳಿಯಿಂದಾಗಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಕಡೆ ಮುಖ ಮಾಡುವುದಕ್ಕೆ ಸಹ ಜನರು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೊಬೈಲ್ ಕಳೆದುಕೊಂಡ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಉಪನಗರ ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದರು.
ಉಪನಗರ ಠಾಣೆಗೆ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದ ಪೋಲಿಸ್ ಆಯುಕ್ತ ಲಾಭುರಾಮ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಡಿಸಿಪಿ ಕೆ.ರಾಮರಾಜನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಒಂದು ವಾರದೊಳಗೆ ಮೊಬೈಲ್ ಕಳ್ಳರನ್ನ ಪತ್ತೆ ಹಚ್ಚಲು ನಿರ್ದೇಶನ ನೀಡಿದ್ದರು. ಆಯುಕ್ತರ ಖಡಕ್ ಸೂಚನೆಯಂತೆ ಡಿಸಿಪಿ ತನಿಖೆ ನಡೆಸಿದ್ದಾರೆ.
ಅದರ ಪರಿಣಾಮ ಚಳ್ಳೆಹಣ್ಣು ತಿನ್ನಿಸುತ್ತಲೇ ಪರಾರಿಯಾಗುತ್ತಿದ್ದ ಗ್ಯಾಂಗ್ ಖಾಕಿ ಬೀಸಿದ ಬಲೆಗೆ ಸಿಕ್ಕಿಬಿದ್ದಿದೆ. ಮಾರುತಿ (31), ವಿನಾಯಕ (26), ರಾಹುಲ್ (22) ಮತ್ತು ಝಾಕೀರ್ (20) ಎಂಬ ನಾಲ್ವರು ಕಳ್ಳರು ಪೊಲೀಸರ ಅತಿಥಿಗಳಾಗಿದ್ದಾರೆ. ಈ ಎಲ್ಲರೂ ಹುಬ್ಬಳ್ಳಿಯವರೇ ಆಗಿದ್ದು ಮೊಬೈಲ್ ಕಳ್ಳತನವನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದರು. ಸದ್ಯ ಸಾರ್ವಜನಿಕರ ನಿದ್ದೆಗೆಡಿಸಿದ್ದ ಕಿಲಾಡಿ ಕಳ್ಳರ ಹೆಡೆಮುರಿಕಟ್ಟಿರುವುದು ಕೊಂಚ ನೆಮ್ಮದಿ ಮೂಡಿಸಿದೆ.
Published On - 7:58 pm, Thu, 21 January 21