ನೀರಾವರಿ ಇಂಜಿನಿಯರುಗಳ ವೈಫಲ್ಯ! ಚಿಕ್ಕಬಳ್ಳಾಪುರದಲ್ಲಿ ನೂರಾರು ಹೆಕ್ಟೇರ್ ದ್ರಾಕ್ಷಿ ಹೂ ರೇಷ್ಮೆ ತರಕಾರಿ ಬೆಳೆಗಳು ಜಲಾವೃತ, ರೈತನಿಗೆ ಕಣ್ಣೀರು ಚಕ್ರತೀರ್ಥ

ಮಳೆ ಬರುವುದಕ್ಕೂ ಮುನ್ನವೆ... ಸಣ್ಣ ನಿರಾವರಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯ ಇಂಜಿನಿಯರ್ ತಮ್ಮ ಜವಾಬ್ದಾರಿ, ಕರ್ತವ್ಯ ಪ್ರಜ್ಞೆ ತೋರಿಸಿದ್ದರೆ ಇಂದು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರ ಬೆಳೆಗಳು ಜಲಾವೃತ ಆಗ್ತಿರಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ  ಇಂಜಿನಿಯರುಗಳ ವೈಫಲ್ಯ! ಚಿಕ್ಕಬಳ್ಳಾಪುರದಲ್ಲಿ ನೂರಾರು ಹೆಕ್ಟೇರ್ ದ್ರಾಕ್ಷಿ ಹೂ ರೇಷ್ಮೆ ತರಕಾರಿ ಬೆಳೆಗಳು ಜಲಾವೃತ, ರೈತನಿಗೆ ಕಣ್ಣೀರು ಚಕ್ರತೀರ್ಥ
ನೀರಾವರಿ ಇಂಜಿನಿಯರುಗಳ ವೈಫಲ್ಯ! ಚಿಕ್ಕಬಳ್ಳಾಪುರದಲ್ಲಿ ನೂರಾರು ಹೆಕ್ಟರ್ ದ್ರಾಕ್ಷಿ ಹೂ ರೇಷ್ಮೆ ತರಕಾರಿ ಬೆಳೆಗಳು ಜಲಾವೃತ, ರೈತನಿಗೆ ಕಣ್ಣೀರು ಚಕ್ರತೀರ್ಥ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 01, 2022 | 5:16 PM

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕರ ಮಳೆಯಿಂದ 791 ಹೆಕ್ಟರ್ ತೋಟಗಾರಿಕೆ ಬೆಳೆಗಳು ಹಾಗೂ 100 ಹೆಕ್ಟರ್ ನಷ್ಟು ಕೃಷಿ ಬೆಳೆಗಳು ಹಾನಿಯಾಗಿದೆ. ಮತ್ತೊಂದೆಡೆ, ಕೆರೆಯೊಂದು ತುಂಬಿ ಕೋಡಿ ಹರಿಯುತ್ತಿರುವ ಕಾರಣ ನೂರಾರು ಎಕರೆ ತೋಟಗಾರಿಕೆ ಬೆಳೆಗಳು, ರಾತ್ರಿ ಕಳೆದು ಬೆಳಗಾಗುವುದರಲ್ಲಿ ಜಲಾವೃತವಾಗಿವೆ.

ಬಂಗಾರದ ಬೆಲೆಯ ಮಧ್ಯೆಯೂ… ಕ್ಯಾರೆಟ್, ಬೀಟ್ ರೂಟ್, ಹೂಕೋಸು, ಸೇವಂತಿ, ಗುಲಾಬಿ ಸೇರಿದಂತೆ ರೇಷ್ಮೆ ದ್ರಾಕ್ಷಿ ಬೆಳೆಗಳು ನೀರಿನಲ್ಲಿ ಜಲಾವೃತವಾಗಿ… ಅವುಗಳ ಮಾಲಿಕನಾದ ರೈತನಲ್ಲಿ ಕಣ್ಣೀರು ತರಿಸಿದೆ. ಹೌದು!! ನಾಲ್ಕೈದು ದಿನಗಳಿಂದ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರದ ಕಂದವಾರ ಕೆರೆ, ಮಂಚನಬಲೆ ಕೆರೆ, ರಂಗಧಾಮ ಕೆರೆಗಳು ಕೋಡಿ ಹರಿದು ಅಮಾನಿ ಗೋಪಾಲಕೃಷ್ಣ ಕೆರೆಯ ಒಳ ಹರಿವು ಹೆಚ್ಚಳವಾಗಿದೆ. ಇದ್ರಿಂದ ಅಮಾನಿ ಗೋಪಾಲಕೃಷ್ಣ ಕೆರೆಯ ಜೋಡಿ ಕೋಡಿಗಳು ಹರಿಯುತ್ತಿವೆ. ಕೆರೆಯ ಹಿನ್ನೀರಿನಲ್ಲಿ ಅಗಲಗುರ್ಕಿ ಗ್ರಾಮದ ವೆಂಕಟೇಶಗೆ ಸೇರಿದ ಗುಲಾಬಿ ತೋಟ, ಮಂಜುನಾಥ್ ಗೆ ಸೇರಿದ ದ್ರಾಕ್ಷಿ ತೋಟ, ಮುನಿರಾಜು ಗೆ ಸೇರಿದ ರೇಷ್ಮೆ, ಬಾಳೆ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಜಲಾವೃತವಾಗಿ ರೈತರ ಕಣ್ಣಲ್ಲಿ ಕಣ್ಣೀರು ಚಕ್ರತೀರ್ಥವಾಗಿದೆ

ಇದು ಕೆರೆಯ ಹಿನ್ನೀರು ಹಾಗೂ ಕಾಲುವೆ ನೀರಿನ ಕಥೆಯಾದ್ರೆ… ಅಮಾನಿ ಗೋಪಾಲಕೃಷ್ಣ ಕೆರೆಯ ಜೋಡಿ ಕೋಡಿಗಳು ಹರಿಯುತ್ತಿದ್ದು, ಕೋಡಿಯ ನೀರು ಪಟ್ರೇನಹಳ್ಳಿ, ಅಜ್ಜವಾರ, ನಾಯನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ತೋಟಗಳಿಗೆ ನೀರು ನುಗ್ಗಿದೆ. ಇದ್ರಿಂದ ಪಟ್ರೇನಹಳ್ಳಿ ಗ್ರಾಮದ ಬಳಿ ನಾಗರಾಜ್ ಎನ್ನುವ ರೈತನ ಸೇವಂತಿ ತೋಟ ಸಂಪೂರ್ಣ ಜಲಾವೃತವಾಗಿ ರೈತ ಕಣ್ಣೀರು ಹಾಕಿದ್ದಾನೆ.

ಇನ್ನು ಪಟ್ರೇನಹಳ್ಳಿಯ ವಿದ್ಯಾವಂತ ಯುವ ರೈತ ಮಹೇಶ, ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟು, ತೋಟಗಾರಿಕೆಯತ್ತ ಮುಖ ಮಾಡಿ ಸಾಲಸೋಲ ಮಾಡಿ ಬೀಟ್ ರೂಟ್ ತರಕಾರಿ ಬೆಳೆದಿದ್ದ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಬೆಳೆದ ಬೆಳೆ ಸಂಪೂರ್ಣ ಜಾಲವೃತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟ್ ರೂಟ್ ಬೆಳೆ ನೀರು ಪಾಲಾಗಿದೆ.

ಇನ್ನು ಕೆರೆಯ ನೀರು ಹೂಕೋಸು ತೋಟವೊಂದಕ್ಕೆ ನುಗ್ಗಿ, ಪಟ್ರೇನಹಳ್ಳಿ ಗ್ರಾಮದ ಚಿಕ್ಕಗೋಪಾಲಪ್ಪನ ತೋಟ ಸಂಪೂರ್ಣ ಜಲಾವೃತವಾಗಿದೆ. ಅಗಲಗುರ್ಕಿ, ಪಟ್ರೇನಹಳ್ಳಿ, ಅಜ್ಜವಾರ, ನಾಯನಹಳ್ಳಿ ಗ್ರಾಮಗಳ ರೈತರ ಸಾವಿರಾರು ಎಕರೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಇದಕ್ಕೆ ಕಾರಣ ಎಚ್.ಎನ್.ವ್ಯಾಲಿ ಯೋಜನೆ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾನಿಗೋಪಾಲಕೃಷ್ಣ ಕೆರೆಯ ನೀರಿನಿಂದ ಆದ ಅವಾಂತರಗಳ ಬಗ್ಗೆ ಟಿವಿ9 ನಲ್ಲಿ ಸುದ್ದಿ ನೋಡಿ ಎಚ್ಚೆತ್ತ ಚಿಕ್ಕಬಳ್ಳಾಪುರ ಉಪವಿಭಾಗಧಿಕಾರಿ ಡಾ. ಸಂತೋಷಕುಮಾರ್ ಹಾಗೂ ಅಧಿಕಾರಿಗಳ ತಂಡವು ಕೆರೆಯ ಕೋಡಿ, ಜಲಾವೃತವಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಬರೋಬ್ಬರಿ 791 ಹೆಕ್ಟರ್ ತೋಟಗಾರಿಕೆ ಹಾಗೂ 100 ಎಕೆರೆ ಕೃಷಿ ಬೆಳೆಗಳು ಹಾನಿಯಾಗಿವೆ.

ಒಟ್ನಲ್ಲಿ ಮಳೆ ಬರುವುದಕ್ಕೂ ಮುನ್ನವೆ… ಸಣ್ಣ ನಿರಾವರಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯ ಇಂಜಿನಿಯರ್ ತಮ್ಮ ಜವಾಬ್ದಾರಿ, ಕರ್ತವ್ಯ ಪ್ರಜ್ಞೆ ತೋರಿಸಿದ್ದರೆ ಇಂದು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರ ಬೆಳೆಗಳು ಜಲಾವೃತ ಆಗ್ತಿರಲಿಲ್ಲ. ಅಧಿಕಾರಿಗಳ ಹೊಣೆಗೇಡಿತನವೆ ರೈತರ ಬೆಳೆಗಳು ಹಾಳಾಗಲು ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ