ಉತ್ತರ ಕನ್ನಡ: ಕೊರೊನಾ ತೀವ್ರತೆಯನ್ನು ಅರಿತ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ. ಇದರಿಂದಾಗಿ ದಿನಕೂಲಿಕಾರರರು, ವ್ಯಾಪಾರಿಗಳು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಜಾರಿಯಾಗಿರುವುದು ಕಡಲತೀರಗಳಲ್ಲಿನ ಪ್ರಾಣಿಗಳಿಗೆ ಅನುಕೂಲವಾಗಿದೆ. ಉತ್ತರ ಕನ್ನಡದಲ್ಲಿ ಜಲಚರ ಪ್ರಾಣಿಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಲಾಕ್ಡೌನ್ನಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಇದರಿಂದ ಸಮುದ್ರತೀರಗಳು ಸ್ವಚ್ಛಂದವಾಗಿದ್ದು ಇದು ಕರಾವಳಿ ತಡಿಯಲ್ಲಿ ಕಡಲಾಮೆಗಳು ಮೊಟ್ಟೆ ಇಟ್ಟು ಮರಿ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸಿದೆ. ಈ ಅಪರೂಪದ ಜೀವಿಗಳನ್ನು ಸಂರಕ್ಷಣೆ ಮಾಡಲು ಇದೀಗ ಅರಣ್ಯ ಇಲಾಖೆ ಸಹ ಮುಂದಾಗಿದೆ ಎನ್ನುವುದು ವಿಶೇಷ ಸಂಗತಿಯಾಗಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿನ ಕಡಲತೀರದಲ್ಲಿ ಹೆಚ್ಚಾಗಿ ಕಂಡುಬರುವ ಕಡಲಾಮೆ ಮೊಟ್ಟೆಗಳನ್ನು ಅರಣ್ಯ ಇಲಾಖೆ ಸಂರಕ್ಷಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು, ಈ ಮೂಲಕ ಕಡಲಾಮೆ ಸಂತತಿ ಹೆಚ್ಚಲು ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆ. ಹೊನ್ನಾವರದ ಕಾಸರಕೋಡು, ಟೊಂಕ ಸೇರಿದಂತೆ ಕಡಲತೀರ ಪ್ರದೇಶದಲ್ಲಿ ಆಲಿವ್ ರಿಡ್ಲೆ ಹೆಸರಿನ ಪ್ರಬೇಧದ ಅಳಿವಿನಂಚಿನಲ್ಲಿರುವ ಕಡಲಾಮೆಗಳು ಮೊಟ್ಟೆಯನ್ನು ಇಡುತ್ತವೆ.
ಆಲಿವ್ ರಿಡ್ಲೆ ಆಮೆಗಳು ಫೆಬ್ರುವರಿಯಿಂದ ಈವರೆಗೆ ಸಾವಿರಾರು ಮೊಟ್ಟೆಗಳನ್ನು ಇಟ್ಟು ಮರಿಮಾಡಿ ಸಮುದ್ರ ಸೇರುತ್ತಿವೆ. ಇದನ್ನ ಗಮನಿಸಿದ ಹೊನ್ನಾವರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಆಮೆಗಳು ಕಡಲತೀರದಲ್ಲಿ ಇಡುವ ಮೊಟ್ಟೆಗಳನ್ನು ನಾಯಿ ಇನ್ನಿತರ ಪ್ರಾಣಿಗಳ ಪಾಲಾಗದಂತೆ ರಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಮೊಟ್ಟೆ ಇರಿಸಿದ ಪ್ರದೇಶದಲ್ಲೇ ಕಬ್ಬಿಣದ ಜಾಲರಿಯನ್ನು ಅಳವಡಿಸಿಟ್ಟಿದ್ದಾರೆ. ಇದರಿಂದ ಮೊಟ್ಟೆಗಳು ಸುರಕ್ಷಿತವಾಗಿರುತ್ತಿದ್ದು, ಈವರೆಗೆ ಸುಮಾರು 900 ಮೊಟ್ಟೆಗಳನ್ನು ರಕ್ಷಿಸಿ ಮರಿಗಳನ್ನು ಕಡಲಿಗೆ ಬಿಟ್ಟಿದ್ದಾರೆ.
ಹೊನ್ನಾವರದ ಕಾಸರಕೋಡು ಭಾಗದಲ್ಲಿ ಮೊದಲಿನಿಂದಲೂ ಅಪರೂಪದ ಆಲಿವ್ ರಿಡ್ಲೆ ಪ್ರಬೇಧದ ಆಮೆಗಳು ಫೆಬ್ರುವರಿಯಿಂದ ಮೊಟ್ಟೆ ಇಡಲು ಬರುತ್ತವೆ. ಜೂನ್ ತಿಂಗಳಲ್ಲಿ ಬಹುತೇಕ ಈ ಜಾತಿಯ ಆಮೆಗಳ ಮೊಟ್ಟೆಗಳು ಮರಿಯಾಗಿ ಸಮುದ್ರ ಸೇರುತ್ತವೆ. ಈ ಹಿಂದೆ ಬಂದರು ಚಟುವಟಿಕೆ, ಜನರ ಸಂಚಾರದಿಂದಾಗಿ ಈ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುವುದನ್ನು ಕಡಿಮೆ ಮಾಡಿದ್ದವು. ಅಲ್ಲದೇ ಸಾಕಷ್ಟು ಬಾರಿ ಮೊಟ್ಟೆಗಳು ನಾಯಿ ಹಾಗೂ ಕಳ್ಳರ ಪಾಲಾಗುತಿದ್ದವು. ಹೀಗಾಗಿ ಮೊಟ್ಟೆಗಳ ರಕ್ಷಣೆಗೆ ನಾವು ಮುಂದಾಗಿದ್ದು, ಮೊಟ್ಟೆಗಳ ಕುರಿತು ಮಾಹಿತಿ ನೀಡಿದಲ್ಲಿ ಬಹುಮಾನ ನೀಡುವ ಮೂಲಕ ಸ್ಥಳೀಯರಿಂದಲೂ ಸಹಕಾರವನ್ನ ಪಡೆದುಕೊಳ್ಳಲಾಗುತ್ತಿದೆ ಎಂದು ಹೊನ್ನಾವರ ವಿಭಾಗದ ಆರ್ಎಫ್ಓ ಬೋರಯ್ಯ.ಎ ತಿಳಿಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ಹೊನ್ನಾವರ ಭಾಗದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಆಮೆಗಳು ಕಂಡು ಬರುತ್ತಿವೆ. ಆಮೆಗಳು ಸಮುದ್ರದ ಸಮತೋಲನ ಕಾಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಮೀನುಗಾರರ ಮಿತ್ರ ಅಂತಲೂ ಕರೆಸಿಕೊಳ್ಳುತ್ತವೆ. ಹೀಗಾಗಿ ಇವುಗಳ ರಕ್ಷಣೆ ಜತೆಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿದ್ದು, ಹೊನ್ನಾವರದ ಕಾಸರಕೋಡು ಭಾಗವನ್ನು ಕಡಲಾಮೆ ರಕ್ಷಿತ ವಲಯ ಎಂದು ಘೋಷಣೆ ಮಾಡಬೇಕು ಎಂದು ಪರಿಸರವಾದಿಗಳು ಮತ್ತು ಕಡಲ ಜೀವಶಾಸ್ತ್ರಜ್ಞರಾಗಿರುವ ಪ್ರಕಾಶ ಮೇಸ್ತಾ ಆಗ್ರಹಿಸಿದ್ದಾರೆ.
ಒಟ್ಟಾರೇ ಲಾಕ್ಡೌನ್ ಕಾರಣದಿಂದಾಗಿ ಜನಸಂಚಾರ ಕಡಿಮೆಯಾಗಿದ್ದು, ಕಡಲತೀರದಲ್ಲಿ ಆಮೆಗಳ ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾದಂತಾಗಿದೆ. ಅಲ್ಲದೆ ಆಮೆಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಅಳಿವಿನಂಚಿನಲ್ಲಿರುವ ಕಡಲಾಮೆಗಳನ್ನು ಉಳಿಸುವುದರ ಜತೆಗೆ ಸುತ್ತಲಿನ ಪರಿಸರವನ್ನೂ ರಕ್ಷಿಸುವ ಕೆಲಸಕ್ಕೆ ಸ್ಥಳೀಯರು ಕೈಜೋಡಿಸಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ:
20 ಸಾವಿರ ಟನ್ ಡೀಸೆಲ್ ಸೋರಿಕೆ! ಜಲಚರಗಳಿಗೆ ಕುತ್ತು: ತುರ್ತುಪರಿಸ್ಥಿತಿ ಘೋಷಣೆ