ಒಳಮೀಸಲಾತಿಗೆ ಪಟ್ಟು: ವಿಧಾನಸೌಧದ ಒಳಗೆಯೇ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಅಲೆಮಾರಿ ಮುಖಂಡರು
ಮೀಸಲಾತಿ ವಿಚಾರವಾಗಿ ವಿಧಾನಸೌಧದ ಒಳಗೆಯೇ ಅಲೆಮಾರಿ ಸಮುದಾಯದ ಮುಖಂಡರು ಸರ್ಕಾರಕ್ಕೆ ಧಿಕ್ಕಾರ ಕೂಗಿದ ಪ್ರಸಂಗ ನಡೆದಿದೆ. ಒಳ ಮೀಸಲಾತಿ ವಿಚಾರವಾಗಿ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದಂತೆ ಆಕ್ರೋಶ ಹೊರ ಹಾಕಿರುವ ಮುಖಂಡರು, ಸುಪ್ರೀಂಕೋರ್ಟ್ ಆದೇಶದಂತೆ ತಳ ಸಮುದಾಯಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 31: ಒಳಮೀಸಲಾತಿ ವಿಚಾರವಾಗಿ ಅಲೆಮಾರಿ ಮುಖಂಡರ ಜೊತೆ ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ನಡೆಸಿದ್ದಾರೆ. ಸಭೆ ಮುಗಿಸಿ ಸಿಎಂ ತೆರಳ್ತಿದ್ದಂತೆ ಅಲೆಮಾರಿ ಮುಖಂಡರು ಅಸಮಾಧಾನ ಹೊರಹಾಕಿದ್ದು, ವಿಧಾನಸೌಧದ ಒಳಗೆಯೇ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಪ್ರಸಂಗ ನಡೆದಿದೆ. ಸುಪ್ರೀಂಕೋರ್ಟ್ ಆದೇಶದಂತೆ ತಳಸಮುದಾಯಕ್ಕೆ ನ್ಯಾಯ ಸಿಗಬೇಕಿದ್ದು, ಅದು ರಾಜ್ಯ ಸರ್ಕಾರದಿಂದ ನಮಗೆ ಸಿಗುತ್ತಿಲ್ಲ. ಸಾಮಾಜಿಕ ನ್ಯಾಯದಂತೆ ಅಲೆಮಾರಿ ಸಮಾಜಕ್ಕೆ ಮೀಸಲಾತಿ ಕೊಡಿ. ಯಾವುದೇ ಪ್ಯಾಕೇಜ್ ಬೇಡವೆಂದು ಮುಖಂಡರು ಆಗ್ರಹಿಸಿದ್ದಾರೆ.
ಅಲೆಮಾರಿಗಳ ಮಹಾ ಒಕ್ಕೂಟದ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನ್ಯಾ.ನಾಗಮೋಹನ ದಾಸ್ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿಗೆ ಸೂಚಿಸಿದ್ದರು. ಆದರೆ ಸಿ ಗ್ರೂಪ್ಗೆ ಸೇರಿಸಿರುವ ಬಗ್ಗೆ ಅಲೆಮಾರಿಗಳು ಪ್ರಶ್ನಿಸಿದ್ದು, ನಮಗೆ ಪ್ರತ್ಯೇಕವಾಗಿ ಪ್ರತ್ಯೇಕವಾಗಿ ಮೀಸಲಾತಿ ಬೇಕು ಎಂದು ಆಗ್ರಹಿಸಿದ್ದಾರೆ. ಅಲೆಮಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಜೊತೆಗೆ ಆರ್ಥಿಕ ಪ್ಯಾಕೇಜ್ ಕೊಡಬೇಕು ಮನವಿ ಮಾಡಿದ್ದಾರೆ. ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೆ ಅಲೆಮಾರಿ ಸಮುದಾಯಕ್ಕೆ ಶೇ. 1 ಮೀಸಲಾತಿ ನೀಡುವ ಬಗ್ಗೆ ಕಾನೂನು ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ನಿಗಮ ಮಾಡುತ್ತೇವೆ, ಆರ್ಥಿಕ ಪ್ಯಾಕೇಜ್ ಕೊಡುವುತ್ತೇವೆ, ಸ್ವಲ್ಪ ಸಮಯ ಕೊಡಿ ಎಂದು ಕೇಳಿರೋದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಶೇ.1ರಷ್ಟು ಮೀಸಲಾತಿಗೆ ಆಗ್ರಹ: ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಅಲೆಮಾರಿ ಸಮುದಾಯ
ಅಲೆಮಾರಿ ಸಮುದಾಯಕ್ಕೆ ಶೇ. 1ರಷ್ಟು ಮೀಸಲಾತಿಗೆ ಸರ್ಕಾರ ಸಮಯ ಕೇಳಿದೆ. ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಮುನ್ನ ಸಮಸ್ಯೆ ಪರಿಹರಿಸಿ ಎಂದುಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದ್ದೇವೆ. ಕೇಸ್ ಹಿಂಪಡೆಯುವ ಬಗ್ಗೆ ಒಕ್ಕೂಟದಲ್ಲಿ ಚರ್ಚಿಸಿ ನಿರ್ಧರಿಸ್ತೇವೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಧರ್ ತಿಳಿಸಿದ್ದಾರೆ.
ದೆಹಲಿಯಲ್ಲೂ ನಡೆದಿದ್ದ ಹೋರಾಟ
ಒಳ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಆರೋಪದ ಹಿನ್ನಲೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಅಲೆಮಾರಿ ಸಮುದಾಯ ದೆಹಲಿಯಲ್ಲೂ ಪ್ರತಿಭಟನೆ ನಡೆಸಿತ್ತು. ಜಂತರ್ ಮಂತರ್ನಲ್ಲಿ ಹೋರಾಟ ನಡೆಸಿದ್ದ ಪ್ರತಿಭಟನಾಕಾರರು, ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನವನ್ನೂ ನಡೆಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



