ಶೇ.1ರಷ್ಟು ಮೀಸಲಾತಿಗೆ ಆಗ್ರಹ: ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಅಲೆಮಾರಿ ಸಮುದಾಯ
ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯ ಸಿಡಿದೆದ್ದಿದೆ. ಈ ಬಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸಿದ ಪ್ರತಿಭಟನಾಕಾರರು, ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನವನ್ನೂ ನಡೆಸಿದ್ದಾರೆ. ಒಳ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಆರೋಪ ಸಮುದಾಯದಿಂದ ಕೇಳಿಬಂದಿದೆ.

ದೆಹಲಿ, ಅಕ್ಟೋಬರ್ 02: ಒಳ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಆರೋಪದ ಹಿನ್ನಲೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ (Congress) ವಿರುದ್ಧ ಅಲೆಮಾರಿ ಸಮುದಾಯ ಸಿಡಿದೆದ್ದಿದೆ. ಶೇ.1ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಹೋರಾಟ ನಡೆಸಿದ ಪ್ರತಿಭಟನಾಕಾರರು, ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನವನ್ನೂ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತ ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಹಾಕಿ ದೆಹಲಿ ಪೊಲೀಸರು ತಡೆದ ಪ್ರಸಂಗ ನಡೆದಿದೆ.
ನ್ಯಾ. ನಾಗಮೋಹನ್ ದಾಸ್ ತಮ್ಮ ವರದಿಯಲ್ಲಿ ಪರಿಶಿಷ್ಟ ಸಮುದಾಯವನ್ನ ಐದು ವಿಭಾಗಗಳಾಗಿ ಪರಿಗಣಿಸಿ ಮೀಸಲಾತಿ ಹಂಚಿಕೆ ಮಾಡಿದ್ದರು. ಆದರೆ ಸರ್ಕಾರದ ಅದನ್ನ ಕೇವಲ ಮೂರು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿದೆ. ಅಲೆಮಾರಿ ಸಮುದಾಯಕ್ಕೆ ನೀಡಲಾಗಿದ್ದ ಶೇ.1ರಷ್ಟು ಮೀಸಲಾತಿಯನ್ನ ತೆಗೆಯಲಾಗಿದ್ದು, ವರ್ಗ ‘ಸಿ’ಗೆ ವಿಲೀನಗೊಳಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಸಮುದಾಯ ಆಕ್ರೋಶಗೊಂಡಿದೆ. 101 ಪರಿಶಿಷ್ಟ ಜಾತಿಗಳಲ್ಲಿ 59 ಅತಿ ಸಣ್ಣ ಜಾತಿಗಳಿವೆ. ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ಈ ಸಣ್ಣ ಜಾತಿಗಳ ಪಾಲು ಶೇ. 4.97ರಷ್ಟಿದ್ದು, ಬಹುತೇಕರು ಅಲೆಮಾರಿಗಳು. ಹೀಗಾಗಿಯೇ ನ್ಯಾ. ನಾಗಮೋಹನ್ ದಾಸ್ ಆಯೋಗ ಸಣ್ಣ ಜಾತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಶೇ.1 ಒಳ ಮೀಸಲು ನಿಗದಿ ಮಾಡಿತ್ತು.
ಇದನ್ನೂ ಓದಿ: ಭುಜ್ ವಾಯುನೆಲೆಯಿಂದ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ
ಬೆಂಗಳೂರಲ್ಲೂ ನಡೆದಿದ್ದ ಪ್ರತಿಭಟನೆ
ಕಳೆದ ತಿಂಗಳಷ್ಟೇ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಲಾಮಾರಿ ಸಮುದಾಯ ಪ್ರತಿಭಟನೆ ನಡೆಸಿತ್ತು. ಅಲಾಮಾರಿ ಸಮುದಾಯವನ್ನ ಸರ್ಕಾರ ಸೇರಿಸಿರುವ ವರ್ಗ ‘ಸಿ’ಯಲ್ಲಿ ಬಲಾಢ್ಯ ಜಾತಿಗಳಿದ್ದು, ಸಣ್ಣ ಜಾತಿಗಳು ಇಲ್ಲಿ ಮೀಸಲಾತಿ ಪಡೆಯುವು ಕಷ್ಟ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಅಲ್ಲದೆ ಪ್ರತಿಭಟನಾ ನಿರತ ಓರ್ವ ಮಹಿಳೆ ಮೈ ಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದ ಘಟನೆ ನಡೆದಿತ್ತು. ಪ್ರತಿಭಟನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಔರಾದ್ ಶಾಸಕ ಪ್ರಭು ಚೌಹಾಣ್, ಮಾಜಿ ಸಂಸದ ಉಮೇಶ್ ಜಾದವ್ ಸೇರಿ ಹಲವು ಬಿಜೆಪಿ ನಾಯರು ಸಾಥ್ ಕೊಟ್ಟಿದ್ದರು. ಕೊನೆಗೂ ಸ್ಥಳಕ್ಕೆ ಆಗಮಿಸಿದ್ದ ಸಚಿವ ರಾಮಲಿಂಗ ರೆಡ್ಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಬೇಡಿಕೆಗಳನ್ನ ಸಿಎಂ ಗಮನಕ್ಕೆ ತರುವ ಬಗ್ಗೆ ಭರವಸೆ ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Thu, 2 October 25




