ನಿಮ್ಮ ಮಗುವಿಗೆ ಮೊಬೈಲ್ ಅಡಿಕ್ಷನ್ ಇದೆಯೇ? ಉಚಿತ ನೆರವು ನೀಡಲಿದೆ ನಿಮ್ಹಾನ್ಸ್, ಸೇವೆ ಪಡೆಯಲು ಹೀಗೆ ಮಾಡಿ
ಮಕ್ಕಳ ಟೆಕ್ನಾಲಕಿ ಅಡಿಕ್ಷನ್ ಬಗ್ಗೆ ಪೋಷಕರಿಗೆ ಉಚಿತ ಆನ್‌ಲೈನ್ ಸೆಷನ್ ಮೂಲಕ ತರಬೇತಿ ನೀಡಲು ನಿಮ್ಹಾನ್ಸ್ ಮುಂದಾಗಿದೆ. ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಮತ್ತು ತಂತ್ರಜ್ಞಾನದ ಆರೋಗ್ಯಕರ ಬಳಕೆಯನ್ನು ಉತ್ತೇಜಿಸಲು ತಜ್ಞರ ಮಾರ್ಗದರ್ಶನ ಮತ್ತು ಪ್ರಾಯೋಗಿಕ ತಂತ್ರಗಳನ್ನು ಈ ಆನ್‌ಲೈನ್ ಸೆಷನ್ಗಳುಒಳಗೊಂಡಿರಲಿವೆ. ಪೋಷಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ವೈಯಕ್ತಿಕ ಸಲಹೆಗಳನ್ನು ಪಡೆಯಲು ಅವಕಾಶವಿದೆ. ಯಾವಾಗಲೆಲ್ಲ ಸೆಷನ್ ನಡೆಯಲಿದೆ? ನೋಂದಣಿ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಬೆಂಗಳೂರು, ಮೇ 28: ಮಕ್ಕಳು ಹೆಚ್ಚು ಹೊತ್ತು ಮೊಬೈಲ್, ಟಿವಿ ನೋಡುತ್ತಾ ಇರುವುದು ಹಾಗೂ ಮಕ್ಕಳ ಟೆಕ್ನಾಲಜಿ ಅಡಿಕ್ಷನ್ ತಪ್ಪಿಸುವುದೇ ಪೋಷಕರಿಗೆ ಈಗ ಬಲು ದೊಡ್ಡ ತಲೆನೋವಾಗಿದೆ. ಈ ವಿಚಾರದಲ್ಲಿ ಪೋಷಕರ ನೆರವಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನಿಮ್ಹಾನ್ಸ್ (NIMHANS) ಧಾವಿಸಲಿದೆ. ಮಕ್ಕಳಲ್ಲಿ ಅತಿಯಾದ ಸ್ಕ್ರೀನ್ ಸಮಯ (Screentime), ಗೇಮಿಂಗ್, ಸಾಮಾಜಿಕ ಮಾಧ್ಯಮ ಬಳಕೆ ಹಾಗೂ ಟೆಕ್ನಾಲಜಿ ಅಡಿಕ್ಷನ್ (Technology Addiction) ತಪ್ಪಿಸಲು ಪೋಷಕರಿಗೆ ನೆರವಾಗಲು ಉಚಿತ ಆನ್‌ಲೈನ್ ಸೆಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿಮ್ಹಾನ್ಸ್ ನಿರ್ಧರಿಸಿದೆ.
ಎಸ್ಎಚ್ಯುಟಿ ಕ್ಲಿನಿಕ್ (ತಂತ್ರಜ್ಞಾನದ ಆರೋಗ್ಯಕರ ಬಳಕೆಗಾಗಿನ ಸೇವೆ) ಮತ್ತು ಯೋಗಕ್ಷೇಮ ಕೇಂದ್ರ (NCWB) ಜಂಟಿಯಾಗಿ ಈ ಸೆಷನ್ ಹಮ್ಮಿಕೊಂಡಿವೆ. ಇದು ಮಕ್ಕಳಲ್ಲಿ ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ತಜ್ಞರ ಮಾರ್ಗದರ್ಶನ, ಪ್ರಾಯೋಗಿಕ ತಂತ್ರಗಳ ಮಾಹಿತಿ ಮತ್ತು ಬೆಂಬಲವನ್ನು ನೀಡಲಿದೆ.
ಮಕ್ಕಳಲ್ಲಿ ಸ್ಕ್ರೀನ್ ಟೈಮ್ ಕಡಿಮೆ ಮಾಡಲು, ವರ್ತನೆಯಲ್ಲಿನ ಬದಲಾವಣೆ ನಿರ್ವಹಣೆ ಮಾಡಲು ಬೇಕಾದ ತಂತ್ರಗಳ ಅರಿವು ಮೂಡಿಸುವ ಮೂಲಕ ಪೋಷಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ತಂತ್ರಜ್ಞಾನದ ಸದ್ಬಳಕೆ ಮತ್ತು ಅಡಿಕ್ಷನ್ ನಡುವಣ ಸೂಕ್ಷ್ಮವನ್ನು ಮಕ್ಕಳಿಗೆ ತಿಳಿಯಪಡಿಸಲು, ಸಂಘರ್ಷಗಳನ್ನು ಪರಿಹರಿಸಲು ಪರಿಣಾಮಕಾರಿ ಮಾರ್ಗಗಳನ್ನು ತೋರಿಸಿಕೊಡಲು ಈ ಸೆಷನ್ ಪೋಷಕರಿಗೆ ನೆರವಾಗಲಿದೆ. ಆ ಮೂಲಕ ಕುಟುಂಬವೊಂದರ ಒಟ್ಟಾರೆ ಪರಿಸ್ಥಿತಿಯನ್ನು ಸುಧಾರಿಸುವುದು ಹಾಗೂ ಆರೋಗ್ಯಕರ ದಿನಚರಿ ಅನುಸರಿಸುವಂತೆ ಮಾಡುವುದು ಸಹ ಈ ಕಾರ್ಯಕ್ರಮದ ಉದ್ದೇಶ ಎನ್ನಲಾಗಿದೆ.
ಆನ್‌ಲೈನ್ ಸೆಷನ್ನಲ್ಲಿ ಏನೇನಿರಲಿದೆ?
ಈ ಸೆಷನ್ನಲ್ಲಿ, ತಂತ್ರಜ್ಞಾನ ಅತಿಯಾದ ಬಳಕೆಗೆ ಸಂಬಂಧಿಸಿದ ಸಾಮಾನ್ಯ ಮಾನಸಿಕ ಆರೋಗ್ಯ ತೊಂದರೆಗಳ ಬಗ್ಗೆ ಪೋಷಕರು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಪರಿಣಿತ ಮನಃಶ್ಶಾಸ್ತ್ರಜ್ಞರಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಪೋಷಕರು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದರ ಜತೆಗೆವೈಯಕ್ತಿಕವಾಗಿ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ನೆರವಾಗುವ ಉದ್ದೇಶದೊಂದಿಗೆ ಆನ್‌ಲೈನ್ ಸೆಷನ್ಗಳನ್ನು ವಾರಾಂತ್ಯದಲ್ಲಿ ಆಯೋಜಿಸಲಾಗುತ್ತಿದೆ.
ಯಾವಾಗಲೆಲ್ಲ ಆನ್‌ಲೈನ್ ಸೆಷನ್?
ಈ ಉಚಿತ ಆನ್‌ಲೈನ್ ಸೆಷನ್ ಕಾರ್ಯಕ್ರಮವು ಪ್ರತಿ ಶನಿವಾರ (Working Saturday) ನಡೆಯಲಿದೆ. ಮೇ 31, ಜೂನ್ 21, ಜೂನ್ 25, ಜೂನ್ 28 ಮತ್ತು ಜುಲೈ 5 ರಂದು ನಿಗದಿಯಾಗಿದ್ದು, ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿವೆ. ನೋಂದಣಿ ಮಾಡಿದವರಿಗೆ ಝೂಮ್ ಲಿಂಕ್ ಕಳುಹಿಸಲಾಗುತ್ತದೆ.
ಆನ್‌ಲೈನ್ ಸೆಷನ್ಗೆ ನೋಂದಣಿ ಹೇಗೆ?
ಆನ್‌ಲೈನ್ ಸೆಷನ್ಗೆ ಸೇರಲು ಆಸಕ್ತಿ ಹೊಂದಿರುವ ಪೋಷಕರು NIMHANS parent group registration form ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ನಿಮ್ಹಾನ್ಸ್ ತಿಳಿಸಿದೆ. ದೇಶದ ಪರಿಣಿತ ಮಾನಸಿಕ ಆರೋಗ್ಯ ತಜ್ಞರಿಂದ ತರಬೇತಿ ಪಡೆಯಲು ಹಾಗೂ ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವ ಬಗ್ಗೆ ಮಾಹಿತಿ ಪಡೆಯಲು ಇದು ಒಂದು ಉತ್ತಮ ಅವಕಾಶ ಎಂದು ನಿಮ್ಹಾನ್ಸ್ ಹೇಳಿದೆ.
ಇದನ್ನೂ ಓದಿ: ಒಂದು ಕಡೆ ಮಳೆ, ಇನ್ನೊಂದು ಕಡೆ ಕೊರೊನಾ, ನಿಮ್ಮ ಮಕ್ಕಳ ರಕ್ಷಣೆ ಹೇಗೆ? ಇಲ್ಲಿದೆ ನೋಡಿ
ಈ ಕಾರ್ಯಕ್ರಮವು ಎಲ್ಲಾ ಪೋಷಕರಿಗೆ, ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆ ಅಥವಾ ಅನಾರೋಗ್ಯಕರ ಸ್ಕ್ರೀನ್ ಟೈಮ್, ಟೆಕ್ನಾಲಜಿ ಅಡಿಕ್ಷನ್ನಿಂದ ಬಳಲುತ್ತಿರುವವರಿಗೆ ಮುಕ್ತವಾಗಿದೆ.








