Anil Kumble: ಅತ್ತ ತಮನ್ನಾಗೆ 6 ಕೋಟಿ ರೂ. ಇತ್ತ ಸಂಭಾವನೆಯೇ ಇಲ್ಲದೆ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಅನಿಲ್ ಕುಂಬ್ಳೆ!
ಅನಿಲ್ ಕುಂಬ್ಳೆ: ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯಾಗಲು ಕರ್ನಾಟಕ ಸರ್ಕಾರವು ನಟಿ ತಮನ್ನಾ ಭಾಟಿಯಾಗೆ 6 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ನೀಡಿರುವುದು ವಿವಾದಕ್ಕೀಡಾಗಿದೆ. ಇದಕ್ಕೆ ವಿರುದ್ಧವಾಗಿ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಪಡೆಯದೆ ರಾಜ್ಯದ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅವರ ಸಮಾಜಮುಖಿ ಧೋರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಮೇ 28: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಮತ್ತು ಅವರಿಗೆ 6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ನೀಡುತ್ತಿರುವುದಕ್ಕೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಕರ್ನಾಟಕ ಸರ್ಕಾರದ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದೂ ಸಹ ಯಾವುದೇ ಸಂಭಾವನೆ ಪಡೆಯದೆ! ಕರ್ನಾಟಕ ರಾಜ್ಯ ಅರಣ್ಯ ಇಲಾಖೆ (Karnataka Forest Department) ಮತ್ತು ವನ್ಯಜೀವಿ ಸಂರಕ್ಷಣ ರಾಯಭಾರಿಯಾಗಿ ಅನಿಲ್ ಕುಂಬ್ಳೆ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ವಿಚಾರವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಮಾಹಿತಿ ನೀಡಿದ್ದಾರೆ.
ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹಿತಾಸಕ್ತಿಯಿಂದ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕರಾದ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶಿಸಲು ನಿರ್ಧರಿಸಿದ್ದೇವೆ. ಕುಂಬ್ಳೆ ಅವರು ಇತ್ತೀಚೆಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವನ್ಯಜೀವಿಗಳ ಮೇಲಿನ ಅಪಾರ ಕಾಳಜಿ, ಅರಣ್ಯದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ಹೊಂದಿರುವ ಖ್ಯಾತಿಯಿಂದಾಗಿ ಅವರು ಈ ಜವಾಬ್ದಾರಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಯಾವುದೇ ಸಂಭಾವನೆ ಪಡೆಯದ ಕುಂಬ್ಳೆ
ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಪಡೆಯದೇ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಸೇವೆಗಾಗಿ ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ನಮ್ಮ ರಾಜ್ಯದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಮತ್ತು ಚೈತನ್ಯ ದೊರೆಯಲಿದೆ ಎಂಬ ಭರವಸೆ ನನಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಅನಿಲ್ ಕುಂಬ್ಳೆ ಟ್ವೀಟ್
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣ ರಾಯಭಾರಿಯಾಗಿ ನನ್ನನ್ನು ನೇಮಿಸಿದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಸಚಿವರಿಗೆ ಶ್ರೀ @eshwar_khandre ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಮ್ಮ ರಾಜ್ಯದ ಸಸ್ಯ ಹಾಗೂ ಪ್ರಾಣಿಗಳಲ್ಲಿನ ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು,ವನ್ಯಜೀವಿ ಸಂರಕ್ಷಣೆ ಮತ್ತು… https://t.co/cxdsOJohar
— Anil Kumble (@anilkumble1074) May 27, 2025
ಏತನ್ಮಧ್ಯೆ, ‘ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣ ರಾಯಭಾರಿಯಾಗಿ ನನ್ನನ್ನು ನೇಮಿಸಿದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಮ್ಮ ರಾಜ್ಯದ ಸಸ್ಯ ಹಾಗೂ ಪ್ರಾಣಿಗಳಲ್ಲಿನ ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು,ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಅಭಿವೃದ್ಧಿಯನ್ನು ಬೆಂಬಲಿಸುವತ್ತ ನನ್ನ ಕೆಲಸವನ್ನು ಮುಂದುವರಿಸಲು ಪ್ರಯತ್ನಿಸುತ್ತೇನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ, ದೀಪಿಕಾಗೆ ಮೈಸೂರು ಸ್ಯಾಂಡಲ್ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಕ್ರಿಕೆಟ್ ಹೊರತಾಗಿ ವನ್ಯಜೀವಿ ಛಾಯಾಗ್ರಹಣ ಕೂಡ ಅನಿಲ್ ಕುಂಬ್ಳೆ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಒಂದೆಡೆ ತಮನ್ನಾ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ, ಸಂಭಾವನೆಯನ್ನೇ ಪಡೆಯದೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣ ರಾಯಭಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಅನಿಲ್ ಕುಂಬ್ಳೆ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Wed, 28 May 25








