ಸಿದ್ಧಗಂಗಾ ಮಠಕ್ಕೆ ವಿದ್ಯುತ್ ಬಿಲ್​ ಕಟ್ಟುವಂತೆ ನೋಟಿಸ್​ ನೀಡಿದ್ದು ನಿಜವೆಂದ ಸಿದ್ದಲಿಂಗ ಸ್ವಾಮೀಜಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 19, 2024 | 3:07 PM

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್ ಬಿಲ್ ನೋಟಿಸ್ ನೀಡಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ನೀರಾವರಿ ಯೋಜನೆಗೆ ಬಳಸಿದ ವಿದ್ಯುತ್‌ಗೆ ಈ ಬಿಲ್ ಬಂದಿದ್ದು, ಸ್ವಾಮೀಜಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರ ಈ ವಿಷಯವನ್ನು ಬಗೆಹರಿಸುವ ಭರವಸೆ ಇದೆ ಎಂದಿದ್ದಾರೆ. ಈ ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ. ರವಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಸಿದ್ಧಗಂಗಾ ಮಠಕ್ಕೆ ವಿದ್ಯುತ್ ಬಿಲ್​ ಕಟ್ಟುವಂತೆ ನೋಟಿಸ್​ ನೀಡಿದ್ದು ನಿಜವೆಂದ ಸಿದ್ದಲಿಂಗ ಸ್ವಾಮೀಜಿ
ಸಿದ್ಧಗಂಗಾ ಮಠಕ್ಕೆ ವಿದ್ಯುತ್ ಬಿಲ್​ ಕಟ್ಟುವಂತೆ ನೋಟಿಸ್​ ನೀಡಿದ್ದು ನಿಜವೆಂದ ಸಿದ್ದಲಿಂಗ ಸ್ವಾಮೀಜಿ
Follow us on

ಚಾಮರಾಜನಗರ, ಡಿಸೆಂಬರ್​ 19: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ರಾಜ್ಯ ಸರ್ಕಾರ ಸಿದ್ದಗಂಗಾ ಮಠಕ್ಕೆ (Siddagangaa Mutt) ಶಾಕ್ ಕೊಟ್ಟಿದೆ. ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ ವಿದ್ಯುತ್ ಬಿಲ್ ಅನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಡಿಬಿ ಅಭಿಯಂತರರು ಪತ್ರ ಬರೆದಿದ್ದಾರೆ. ಇದು ಸದ್ಯ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದು, ನೋಟಿಸ್ ನೀಡಿದ್ದು ದೊಡ್ಡ ವಿಚಾರವಲ್ಲ, ದೊಡ್ಡದು ಮಾಡಬೇಡಿ ಎಂದು ಹೇಳಿದ್ದಾರೆ.

ನೋಟಿಸ್ ಸಂಬಂಧ ಕ್ರಮಕೈಗೊಳ್ಳಿ ಎಂದು ನಾವು ಯಾರಿಗೂ ಹೇಳಿಲ್ಲ: ಸಿದ್ದಲಿಂಗ ಸ್ವಾಮೀಜಿ 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಐಎಡಿಬಿಯಿಂದ ನಮ್ಮ ಮಠಕ್ಕೆ ನೋಟಿಸ್ ಬಂದಿರುವುದು ನಿಜ. ಇದನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮಠದಿಂದ ಪತ್ರ ಬರೆದಿದ್ದೇವೆ. ಕೆಐಡಿಬಿಯವರು 70 ಲಕ್ಷ ರೂ. ಬಿಲ್ ಕಟ್ಟಲಾಗಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪರಿಹಾರ ಮಾಡಿಕೊಡಿ ಎಂದಿದ್ದೆವು.

ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌ ನೋಟಿಸ್‌: ವಿವಾದಕ್ಕೀಡಾದ ಬೆನ್ನಲ್ಲೇ ಸರ್ಕಾರ ಯೂಟರ್ನ್

ಸಚಿವ ಎಂ.ಬಿ.ಪಾಟೀಲ್ ನೋಟಿಸ್ ಹಿಂಪಡೆಯುತ್ತೇವೆ ಅಂದರೆ ಸಂತಸ. ನೋಟಿಸ್ ಸಂಬಂಧ ಕ್ರಮಕೈಗೊಳ್ಳಿ ಎಂದು ನಾವು ಯಾರಿಗೂ ಹೇಳಿಲ್ಲ. ಸಿದ್ಧಗಂಗಾ ಮಠಕ್ಕೆ ನೋಟಿಸ್ ವಿಚಾರದಲ್ಲಿ ಸರ್ಕಾರ ಇತ್ಯರ್ಥ ಮಾಡುತ್ತೆ ಎಂದಿದ್ದಾರೆ.

ಮಠದಿಂದಲೇ ಕಿತ್ತುಕೊಳ್ಳೋ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ? ಸಿ.ಟಿ.ರವಿ ಕಿಡಿ

ಇನ್ನು ಈ ವಿಚಾರವಾಗಿ ಬೆಳಗಾವಿಯಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಕರ್ನಾಟಕದಲ್ಲಿ ಮಠಗಳಿಗೆ ಕೊಡುವ ಪರಂಪರೆ ಇದೆ. ಆದರೆ ಮಠದಿಂದ ಕಿತ್ತುಕೊಳ್ಳುವುದು ಇದ್ಯಾವ ಸೀಮೆ ಪರಂಪರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹಲವು ಮಠಗಳು ಅನ್ನದಾಸೋಹ, ಉಚಿತ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ಮಠದಿಂದಲೇ ಕಿತ್ತುಕೊಳ್ಳೋ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ? ಹಾಗಾದರೆ ಇವರು ಬಿಕಾರಿಗಳಾಗಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ಪಾಸ್ ಕೊಡಿಸಲು ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೇ ಬ್ಲ್ಯಾಕ್​ಮೇಲ್! ವ್ಯಕ್ತಿಯ ಬಂಧನ

ನಿಮಗೆ ನಾಚಿಕೆ ಆಗಲ್ವಾ? ನೋಟಿಸ್ ವಾಪಸ್ ಪಡೆದುಕೊಳ್ಳಿ. ಸುತ್ತಮುತ್ತ ಕೆರೆಗಳಿಗೆ ನೀರು ಹರಿಸಿದ್ದಕ್ಕೆ ಮಠಕ್ಕೆ ನೋಟಿಸ್ ಕೊಡುತ್ತಿರಾ? ಮಠಕ್ಕೆ ನೋಟಿಸ್ ಕೊಟ್ಟಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.