ಜನಿವಾರ ವಿವಾದ: ಬೀದರ್​ನ ಸುಚಿವ್ರತ್ ಕುಲಕರ್ಣಿಗೆ ಸರ್ಕಾರದಿಂದ ಎರಡು ಆಯ್ಕೆ

ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಅವಕಾಶ ನಿರಾಕರಿಸಲ್ಪಟ್ಟ ಬೀದರ್‌ನ ಸುಚಿವ್ರತ್ ಕುಲಕರ್ಣಿ ಅವರಿಗೆ ಕರ್ನಾಟಕ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಬಗ್ಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸರ್ಕಾರ ನೀಡಿರುವ ಎರಡು ಆಯ್ಕೆಗಳೇನು? ಇಲ್ಲಿದೆ ವಿವರ

ಜನಿವಾರ ವಿವಾದ: ಬೀದರ್​ನ ಸುಚಿವ್ರತ್ ಕುಲಕರ್ಣಿಗೆ ಸರ್ಕಾರದಿಂದ ಎರಡು ಆಯ್ಕೆ
ಸುಚಿವ್ರತ್​ ಕುಲಕರ್ಣಿ

Updated on: Apr 25, 2025 | 1:19 PM

ಬೆಂಗಳೂರು, ಏಪ್ರಿಲ್​ 25: ಜನಿವಾರ (Janivara) ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆಯಿಂದ ವಂಚಿತರಾದ ಬೀದರ್​ನ (Bidar) ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಭೌತವಿಜ್ಞಾನ ಹಾಗೂ ರಾಸಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡುವುದು. ಬೇಡವೆಂದರೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಸರ್ಕಾರ ವಿದ್ಯಾರ್ಥಿ ಮುಂದಿಟ್ಟಿದೆ.

ಈ ಮಾಹಿತಿಯನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್​ ಅವರು ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಆಯ್ಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಪ್ಪಿಗೆ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.

ಉಚಿತವಾಗಿ ಸೀಟ್​ ಕೊಡಿಸುವುದಾಗಿ ಖಂಡ್ರೆ ಭರವಸೆ

ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಘಟನೆ ನಡೆದ ಬಳಿಕ ಸುಚಿವ್ರತ್ ಕುಲಕರ್ಣಿ ಮನೆಗೆ ಭೇಟಿ ನೀಡಿದ್ದ ಸಚಿವ ಈಶ್ವರ್​ ಖಂಡ್ರೆ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿ, ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ; ಬೀದರ್​ ಕಾಲೇಜಿನ ಪ್ರಿನ್ಸಿಪಾಲ್, ಸಿಬ್ಬಂದಿ ಅಮಾನತು
ಜನಿವಾರ ವಿವಾದ; ಅಧಿಕಾರಿಗಳದ್ದೇ ತಪ್ಪೆಂದು ವರದಿ ಸಲ್ಲಿಸಿದ ಡಿಸಿ
CET ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು

ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ

ಏನಿದು ಪ್ರಕರಣ?

ಸುಚಿವೃತ ಕುಲಕರ್ಣಿ ಬೀದರ್​ನ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿಗೆ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದರು. ಈ ವೇಳೆ, ಅಲ್ಲಿನ ಸಿಬಂದಿ ಜನಿವಾರ ತೆಗೆದು ಪರೀಕ್ಷೆ ಹಾಜರಾಗುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಸುಚಿವೃತ ಕುಲಕರ್ಣಿಯವರು ಜನಿವಾರ ತೆಗೆಯದೆ ವಾಪಸ್​ ಮನೆಗೆ ಹೋಗಿದ್ದರು.

ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೇ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಈ ಘಟನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ