2A ಮೀಸಲಾತಿ ವರದಿ ವಿಳಂಬ ಮಾಡಿದ್ರೆ ವಿಧಾನಸೌಧ ಮುತ್ತಿಗೆ ಹಾಕ್ತೀವಿ -ಎಚ್ಚರಿಕೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ
jaya mruthyunjaya swamiji | ಮೀಸಲಾತಿ ವಿಚಾರಕ್ಕೆ ಸಿಎಂ ವರದಿ ನೀಡುವಂತೆ ಸೂಚಿಸಿದ್ದಾಗಿ ಸ್ಪಷ್ಟನೆ ಕೊಟ್ಟಿದ್ರು. ಹೀಗಾಗಿ, ವರದಿ ವಿಳಂಬ ಮಾಡಿದ್ರೆ ವಿಧಾನಸೌಧ ಮುತ್ತಿಗೆ ಹಾಕ್ತೀವಿ ಎಂಬ ಎಚ್ಚರಿಕೆಯನ್ನೂ ಜಯಮೃತ್ಯುಂಜಯ ಸ್ವಾಮೀಜಿ ಕೊಟ್ಟಿದ್ದಾರೆ.
ತುಮಕೂರು: ಪಂಚಮಸಾಲಿ ಸಮುದಾಯದ ಪಾದಯಾತ್ರೆ ಬೆಂಗಳೂರಿಗೆ ತಲುಪುವ ವೇಳೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕುರಿತ ವರದಿಯನ್ನು ತರಿಸಿಕೊಳ್ಳಲಿ. ವಿಳಂಬವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀ ಹಕ್ಕೊತ್ತಾಯ ಮಾಡಿದ್ದು ಎಚ್ಚರಿಕೆ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಉಪಸಮಿತಿಯೊಂದು ವರದಿ ನೀಡಿದೆ. 2012ರಲ್ಲಿ ಸಿ.ಎಂ. ಉದಾಸಿ ಅಧ್ಯಕ್ಷತೆಯ ಉಪಸಮಿತಿ ವರದಿಯನ್ನಾದರೂ ಸಿಎಂ ಯಡಿಯೂರಪ್ಪ ಜಾರಿ ಮಾಡಲಿ. ಮೀಸಲಾತಿ ನೀಡಲು ಯಾವುದೇ ಕಾನೂನು ತೊಡಕು ಇಲ್ಲ ಎಂದು ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ.
ಬಾಗಲಕೋಟೆಯ ಕೂಡಲಸಂಗಮದಿಂದ ಶುರುವಾದ ಪಂಚಮಸಾಲಿ ಸಮುದಾಯದ ಪಾದಯಾತ್ರೆ ಈಗ ತುಮಕೂರು ತಲುಪಿದೆ. ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಬಂದು ತಲುಪಲಿದೆ. ಹೀಗಾಗಿ, ತುಮಕೂರಿನಲ್ಲಿಂದು ಜಯಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಅಂತಿಮ ಸಭೆ ನಡೆಯಲಿದೆ. 2ಎ ಮೀಸಲಾತಿ ಕಲ್ಪಿಸಲು ಯಾವ ರೀತಿ ಹೋರಾಟ ನಡೆಸ್ಬೇಕು, ಯಾವ ರೀತಿ ಒತ್ತಡ ಹೇರಬೇಕು ಅಂತಾ ತೀರ್ಮಾನಿಸಲಿದ್ದಾರೆ.
ಸಂಜೆ ಆರು ಗಂಟೆ ಸುಮಾರಿಗೆ ಖಾಸಗಿ ಹೋಟೆಲ್ನಲ್ಲಿ ಜಯಮೃತ್ಯಂಜಯ ಶ್ರೀ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪಂಚಮಸಾಲಿ ಸಮಾಜದ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು, ಸಚಿವರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಸದಸ್ಯರು ಭಾಗಿಯಾಗಲಿದ್ದಾರೆ. ಈಗಾಗ್ಲೇ ಮೀಸಲಾತಿ ವಿಚಾರಕ್ಕೆ ಸಿಎಂ ವರದಿ ನೀಡುವಂತೆ ಸೂಚಿಸಿದ್ದಾಗಿ ಸ್ಪಷ್ಟನೆ ಕೊಟ್ಟಿದ್ರು. ಹೀಗಾಗಿ, ವರದಿ ವಿಳಂಬ ಮಾಡಿದ್ರೆ ವಿಧಾನಸೌಧ ಮುತ್ತಿಗೆ ಹಾಕ್ತೀವಿ ಎಂಬ ಎಚ್ಚರಿಕೆಯನ್ನೂ ಸ್ವಾಮೀಜಿ ಕೊಟ್ಟಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ: ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಿಎಂ BSY ಸೂಚನೆ