ಚನ್ನಪಟ್ಟಣ, ಅಕ್ಟೋಬರ್ 25: ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಗುರುವಾರವಷ್ಟೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದರು. ಇದೀಗ ಎನ್ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯೊಂದಿಗೆ ಚನ್ನಪಟ್ಟಣದ ಚುನಾವಣಾ ಅಖಾಡ ರಂಗೇರಿದೆ.
ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ನಾಯಕರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಳಿಕ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ನಿಖಿಲ್ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಚನ್ನಪಟ್ಟಣ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ. ಇನ್ನು ಮೊಮ್ಮಗನಿಗೆ ಒಳ್ಳೆಯದಾಗಲಿ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರೋ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಇನ್ನು ದೋಸ್ತಿ ನಾಯಕರು ಹೂಗಳಿಂದ ಸಿಂಗಾರಗೊಂಡಿರುವ ಚನ್ನಪಟ್ಟಣ ನಗರದಲ್ಲಿ ಅಬ್ಬರದ ರೋಡ್ ಶೋ ನಡೆಸಿದರು. ಶೇರ್ವಾ ಸರ್ಕಲ್ನಿಂದ ತಾಲೂಕು ಕಚೇರಿವರೆಗೆ ಬೃಹತ್ ಱಲಿ ನಡೆಸಿದರು.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಪುತ್ರನ ಎರಡು ಚುನಾವಣೆಗಳನ್ನ ನೆನೆಪು ಮಾಡಿಕೊಂಡರು. ಕಾಂಗ್ರೆಸ್ ಕುತಂತ್ರಕ್ಕೆ ಈ ಹಿಂದೆ ನಿಖಿಲ್ ಸೋತಿದ್ದರು. ಈ ಬಾರಿ ಚನ್ನಪಟ್ಟಣದ ಜನ ಬಲಿಯಾಗಲ್ಲ ಎನ್ನುವ ಮೂಲಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ಬಿಜೆಪಿ ನಾಯಕರು ಪ್ರಬಲವಾಗಿ ನಿಂತಿದ್ದಾರೆ. ಇವತ್ತು ರಾಮನಗರದಲ್ಲಿ ಸುದ್ದಿ ಗೋಷ್ಠಿ ಕೂಡ ನಡೆಸಿ, ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ. ಇದೇ ವೇಳೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿಪಿವೈ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ. ಸಿಪಿವೈ ನಿರ್ಗಮನದಿಂದ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಅಶ್ವತ್ಥನಾರಾಯಣ ಒಪ್ಪಿಕೊಂಡರೆ, ಯೋಗೇಶ್ವರ್ ಹರಕೆಯ ಕುರಿ ಎಂದು ಅಶೋಕ್ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುತ್ತಿದ್ದಂತೆಯೇ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ ಆಗಿದೆ. ಗುರುವಾರ ತಡರಾತ್ರಿವರೆಗೂ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಸಂಸದ ಡಿಕೆ ಸುರೇಶ್, ಮಾಗಡಿ ಬಾಲಕೃಷ್ಣ, ಎಂಎಲ್ಸಿ ಪುಟ್ಟಣ್ಣ ಸೇರಿದಂತೆ ಸ್ಥಳೀಯ ಮುಖಂಡರಿಗೆ ಡಿಕೆ ಪ್ರಚಾರದ ರೂಪುರೇಷೆ ತಿಳಿಸಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕರು ನಿಖಿಲ್ ಸ್ಪರ್ಧೆಗೆ ವ್ಯಂಗ್ಯವಾಡಿದ್ದಾರೆ. ನಿಖಿಲ್ ಮೈತ್ರಿ ಅಭ್ಯರ್ಥಿಯಾಗುತ್ತಾರೆಂದು ಎಲ್ಲರಿಗೂ ಗೊತ್ತಿತ್ತು ಎಂದು ಮಾಜಿ ಸಂಸದ ಡಿಕೆ ಸುರೇಶ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ
ಈ ನಡುವೆ ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಂಡೂರಿನಲ್ಲಿ ಬಂಗಾರು ಹನುಮಂತು ವಿಜಯೇಂದ್ರ ನೇತೃತ್ವದಲ್ಲಿ ಅಬ್ಬರದ ರೋಡ್ ಶೋ ನಡೆಸಿದರೆ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಕೂಡ ಮೆರವಣಿಗೆ ಮಾಡಿ, ತಮ್ಮ ನಾಯಕರ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ