ಪರಿಷತ್ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್​ ಮೈತ್ರಿ ಮುಂದುವರಿಕೆ, ಯಾರಿಗೆ ಯಾವ ಕ್ಷೇತ್ರ? ಇಲ್ಲಿದೆ ವಿವರ

|

Updated on: May 12, 2024 | 6:25 PM

Karnataka Legislative Council Elections 2024: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಇದೀಗ ವಿಧಾನಪರಿಷತ್ ಚುನಾವಣೆ ಎದುರಾಗಿದೆ. ಜೂನ್ ತಿಂಗಳಲ್ಲಿ ಅವಧಿ ಮುಗಿಯುವ ಆರು ಪರಿಷತ್ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದೆ. ಇನ್ನು ಪರಿಷತ್ ಚುನಾವಣೆಯಲ್ಲೂ ಸಹ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆದಿದ್ದು, ಒಟ್ಟು 6 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್​ಗೆ 2 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಹಾಗಾದ್ರೆ, ಬಿಜೆಪಿ ಹಾಗೂ ಜೆಡಿಎಸ್​ ಸ್ಪರ್ಧಿಸುವ ಕ್ಷೇತ್ರಗಳಾವುವು ಎನ್ನುವ ವಿವರ ಇಲ್ಲಿದೆ.

ಪರಿಷತ್ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್​ ಮೈತ್ರಿ ಮುಂದುವರಿಕೆ, ಯಾರಿಗೆ ಯಾವ ಕ್ಷೇತ್ರ? ಇಲ್ಲಿದೆ ವಿವರ
ಬಿಜೆಪಿ, ಜೆಡಿಎಸ್​
Follow us on

ಬೆಂಗಳೂರು, (ಮೇ 12): ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಅಶ್ಲೀಲ ವಿಡಿಯೋ ಪ್ರಕರಣ ನಡುವೆಯೂ ಜೆಡಿಎಸ್​ ಮತ್ತು ಬಿಜೆಪಿ ನಡುವಿನ ಮೈತ್ರಿ ಮುಂದುವರೆದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವರು ಇದೀಗ ಕರ್ನಾಟಕ ವಿಧಾನಪರಿಷತ್​ನಲ್ಲೂ ( karnataka legislative council election) ಜಂಟಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿವೆ. ಹೀಗಾಗಿ ಒಟ್ಟು ಆರು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್​ಗೆ 2 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ದೂರವಾಣಿ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಅಂತಿಮ ಮಾತುಕತೆ ಮೂಲಕ ಬಿಜೆಪಿ 6ರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಇನ್ನುಳಿದ ಎರಡು ಕ್ಷೇತ್ರಗಳನ್ನು ದಳಪತಿಗಳಿಗೆ ಬಿಟ್ಟುಕೊಡಲು ಸಮ್ಮಿತಿ ಸೂಚಿಸಿದೆ. ಜೆಡಿಎಸ್​ಗೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಬಿಟ್ಟುಕೊಡಲು ಬಿವೈವಿಜಯೇಂದ್ರ ಮತ್ತು ಜೆಪಿ ನಡ್ಡಾ ಒಪ್ಪಿಗೆ ಸೂಚಿಸಿದ್ದಾರೆ.

ಬಿಜೆಪಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಅಮರನಾಥ ಪಾಟೀಲ್, ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಅ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ.ಎ. ನಾರಾಯಣಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇ.ಸಿ. ನಿಂಗರಾಜು ಹೆಸರುಗಳನ್ನು ಪ್ರಕಟಿಸಲಾಗಿದೆ. ನೈಋತ್ಯ ಶಿಕ್ಷಕರ ಕ್ಷೇತ್ರವು ಜೆಡಿಎಸ್ ಪಾಲಾಗಿದ್ದು, ಎಸ್.ಎಲ್ ಭೋಜೆಗೌಡ ಕಣಕ್ಕೆ ಇಳಿದಿದ್ದಾರೆ. ಆದರೆ, ಈಗ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಹೊರಬರಬೇಕಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಇದನ್ನೂ ಓದಿ: ವಿಧಾನ ಪರಿಷತ್​ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್​ನಿಂದ ಮರಿತಿಬ್ಬೇಗೌಡ ಕಣಕ್ಕೆ

ಈ ಮೊದಲು ಬಿಜೆಪಿ ಒಟ್ಟು 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಒಂದು ಕ್ಷೇತ್ರವನ್ನು ಮಾತ್ರ ಜೆಡಿಎಸ್​ ಪಾಲಿಗೆ ಬಿಟ್ಟಿತ್ತು. ಆದ್ರೆ, ಕುಮಾರಸ್ವಾಮಿ ಜೆಪಿ ನಡ್ಡಾ, ವಿಜಯೇಂದ್ರ ಜೊತೆ ಮಾತುಕತೆ ನಡೆಸಿ ಇನ್ನೊಂದು ಕ್ಷೇತ್ರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ದಕ್ಷಿಣ ಶಿಕ್ಷಕರ ಅಭ್ಯರ್ಥಿಯಾಗಿ ಘೋಷಿಸಿದ್ದ ಲಿಂಗರಾಜು ಅವರ ಹೆಸರನ್ನು ಬಿಜೆಪಿ ವಾಪಸ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.

ಕ್ಷೇತ್ರ ಹಂಚಿಕೆ ಫೈನಲ್ ಆಗುತ್ತಿದ್ದಂತೆಯೇ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಎಚ್​ಡಿ ದೇವೇಗೌಡ ಅವರು ನ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಅಲ್ಲದೇ ಬಿಫಾರಂ ಸಹ ನೀಡಿದೆ, ಹೌದು…ನೈಋತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್.ಭೋಜೇಗೌಡ ಕಣಕ್ಕಿಳಿಯಲಿದ್ದಾರೆ. ಅವರಿಗೆ ಇಂದು(ಮೇ 12) ನೈಋತ್ಯ ಶಿಕ್ಷಕರ ಕ್ಷೇತ್ರದ ಬಿಫಾರಂ ಸಹ ನೀಡಲಾಗಿದೆ.

ಬಿಜೆಪಿಯ ಕ್ಷೇತ್ರಗಳು-ಅಭ್ಯರ್ಥಿಗಳು

ಬಿಜೆಪಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಅಮರನಾಥ ಪಾಟೀಲ್, ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಅ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ.ಎ. ನಾರಾಯಣಸ್ವಾಮಿ ಅವರನ್ನು ಘೋಷಣೆ ಮಾಡಲಾಗಿದೆ.

ದಕ್ಷಿಣ ಶಿಕ್ಷಕರ‌ ಕ್ಷೇತ್ರದ ಅಭ್ಯರ್ಥಿ ಬದಲಾವಣೆ

ದಕ್ಷಿಣ ಶಿಕ್ಷಕರ‌ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಈಗಾಗಲೇ ಇ.ಸಿ ನಿಂಗರಾಜು ಅವರ ಹೆಸರನ್ನು ಬಿಜೆಪಿ ಘೋಷಣೆ ಮಾಡಿತ್ತು. ಆದರೆ, ಇದೀಗ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ಮಾತುಕತೆ ನಡೆದಿದ್ದು, ಅಂತಿಮವಾಗಿ ಬಿಜೆಪಿ ದಕ್ಷಿಣ ಶಿಕ್ಷಕರ‌ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿದೆ. ಹೀಗಾಗಿ ಬಿಜೆಪಿ ಘೋಷಣೆ ಮಾಡಿದ್ದ ಇ.ಸಿ ನಿಂಗರಾಜು ಅವರ ಹೆಸರು ವಾಪಸ್ ಪಡೆದುಕೊಂಡಿದ್ದು, ಈ ಕ್ಷೇತ್ರಕ್ಕೆ ಜೆಡಿಎಸ್​ನ ಭೋಜೇಗೌಡ ಅವರು ಜೆಡಿಎಸ್​ನಿಂದ ಕಣಕ್ಕಳಿಯಲಿದ್ದಾರೆ. ಆದ್ರೆ, ನೈರುತ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್​ಗಾಗಿ ಜೆಡಿಎಸ್​ನಲ್ಲಿ ಭಾರೀ ಪೈಪೋಟಿ ನಡೆದಿದೆ. ಅಂತಿಮವಾಗಿ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ