ಹಿಂದೂಗಳ ಹಬ್ಬಗಳ ಮೇಲೆಯೇ ಕಾಂಗ್ರೆಸ್ ಕಾಮಾಲೆ ಕಣ್ಣು: ಕುಮಾರಸ್ವಾಮಿ ತೋಟದ ಮನೆ ಮೇಲೆ ದಾಳಿಗೆ ಜೆಡಿಎಸ್ ಕಿಡಿ
ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ಜೆಡಿಎಸ್ ತಿರುಗೇಟು ನೀಡಿದೆ.
ಬೆಂಗಳೂರು, ಏಪ್ರಿಲ್ 10: ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಜೆಡಿಎಸ್, ಹಿಂದೂಗಳ ಹಬ್ಬಗಳ ಮೇಲೆಯೇ ಕಾಂಗ್ರೆಸ್ಗೆ ಕಾಮಾಲೆ ಕಣ್ಣು ಎಂದು ಕಿಡಿ ಕಾರಿದೆ.
ಪ್ರತೀ ಹಿಂದೂಗಳ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಟೀಕಿಸಿದೆ.
‘ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್ ಹಂಚುವ ಕಾಂಗ್ರೆಸ್’
ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ಎಕ್ಸ್ ಸಂದೇಶ
ಯುಗಾದಿ ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. @INCKarnataka ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ‘ಕಾಕದೃಷ್ಟಿ’ ಬೀರಿದೆ. ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ.1/4…
— Janata Dal Secular (@JanataDal_S) April 10, 2024
ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿಯನ್ನು ಟೀಕಿಸುವ ಬರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ಗೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ ಎಂದು ಕಿಡಿ ಕಾರಿದೆ.
ಇದನ್ನೂ ಓದಿ: ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ, ಕಾರ್ಯಕರ್ತರಿಗೆ ಸಿಗದ ಬಾಡೂಟ
‘ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಚುನಾವಣಾ ಆಯೋಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಈ ಮಧ್ಯೆ, ಹೆಚ್ಡಿ ಕುಮಾರಸ್ವಾಮಿಯವರ ತೋಟದ ಮನೆ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ