ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್ಲೈನ್ಗೆ ಅನ್ನದಾನಿ ಎಚ್ಚರಿಕೆ
ನಾನು ಚೆಡ್ಡಿ ಹಾಕುತ್ತಿದ್ದ ವಯಸ್ಸಿನಿಂದಲೂ ಅಂಬರೀಶಣ್ಣನ ಪಿಚ್ಚರ್ ನೋಡುತ್ತಿದ್ದೇನೆ. ಅಂಬರೀಶ್ ಅಣ್ಣ ನಮ್ಮಜ್ಜಿ ಊರಿನವರು ಎನ್ನುವ ಅಭಿಮಾನ ನನಗೆ ಇದೆ. ಅಂಬರೀಶ್ ಅಣ್ಣನ ಅಭಿಮಾನವನ್ನು ಯಾರಾದರೂ ಹೇಳಿಕೊಡಬೇಕಾ ನಮಗೆ: ಅನ್ನದಾನಿ
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಜಗಳದಲ್ಲಿ ಹೆಚ್ಡಿಕೆ ವಿರುದ್ಧ ಮಾತನಾಡಿರುವ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ಜೆಡಿಎಸ್ ಶಾಸಕ ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಏನು ಗೊತ್ತಿದೆ? ನೀವು ಯಾಕೆ ಮಾತನಾಡುತ್ತೀರಿ? ಮತ್ತೆ ಮಂಡ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಅನ್ನದಾನಿ ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧಪಡದವರು ಈ ವಿಚಾರದಲ್ಲಿ ಮಾತನಾಡುವುದು ತಪ್ಪು ಎಂದಿರುವ ಅವರು ರಾಕ್ಲೈನ್ ವೆಂಕಟೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುಮಲತಾ ಮೇಡಂ ಗೆದ್ದ ಮೇಲೆ ಮಂಡ್ಯಕ್ಕೆ ಬಂದಿರುವವರು. ಜನ ಮತ ಹಾಕಿದ್ದಾರೆ, ಸಂತೋಷ. ಅದಕ್ಕೆ ತಕ್ಕನಾಗಿ ಚೆನ್ನಾಗಿ ಕೆಲಸ ಮಾಡಿ, ಜನ ಇಟ್ಟಿರುವ ಅಭಿಮಾನವನ್ನು ಉಳಿಸಿಕೊಳ್ಳಬೇಕು. ಆದರೆ, ಕುಮಾರಣ್ಣನ ಕೆಣಕುವ ಕೆಲಸ ಮಾಡಬೇಡಿ ಎಂದು ಅನ್ನದಾನಿ ಹೇಳಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರಿಗೆ ಮಂಡ್ಯ ಜಿಲ್ಲೆ ಬಗ್ಗೆ ಏನು ಗೊತ್ತಿದೆ? ಅವರು ಮಂಡ್ಯ ಬಗ್ಗೆ ನಾಲಗೆ ಬಿಗಿ ಹಿಡಿದುಕೊಂಡು ಮಾತಾಡಲಿ ಎಂದಿದ್ದಾರೆ.
ನಾನು ಚೆಡ್ಡಿ ಹಾಕುತ್ತಿದ್ದ ವಯಸ್ಸಿನಿಂದಲೂ ಅಂಬರೀಶಣ್ಣನ ಪಿಚ್ಚರ್ ನೋಡುತ್ತಿದ್ದೇನೆ. ಅಂಬರೀಶ್ ಅಣ್ಣ ನಮ್ಮಜ್ಜಿ ಊರಿನವರು ಎನ್ನುವ ಅಭಿಮಾನ ನನಗೆ ಇದೆ. ಅಂಬರೀಶ್ ಅಣ್ಣನ ಅಭಿಮಾನವನ್ನು ಯಾರಾದರೂ ಹೇಳಿಕೊಡಬೇಕಾ ನಮಗೆ. ಎರಡನೇ ತಲೆಮಾರಿಗೆ ನಮ್ಮ ಅಭಿಷೇಕ್ ಬರುತ್ತಿದ್ದಾರೆ. ಅವರು ಬಂದರೆ ಸಂತೋಷ ನಮಗೆ. ನಾವು ಅವರು ಬರೋದನ್ನು ಬೇಡ ಅನ್ನೋದಿಲ್ಲ. ಈ ಜಿಲ್ಲೆಯ ಮಗ ಆತ. ಜತೆಗೆ, ಅಂಬರೀಶ್ ಅಣ್ಣನ ಮಗ ಎಂದು ಅಭಿಮಾನ ನಮಗೂ ಇದೆ. ಹಾಗಂತ ಕುಮಾರಣ್ಣನ ಕೆಣಕುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ರವೀಂದ್ರ ಶ್ರೀಕಂಠಯ್ಯ ಒಬ್ಬರು ಸುಸಂಸ್ಕೃತರು. ಅವರ ತಂದೆ ಕಾಲದಿಂದ ರಾಜಕೀಯ ನೋಡಿದ ವ್ಯಕ್ತಿ ಅವರು. ರವೀಂದ್ರ ಶ್ರೀಕಂಠಯ್ಯ ಅವರ ತಂದೆ ಮಹಾರಾಜರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ರವೀಂದ್ರ ಶ್ರೀಕಂಠಯ್ಯ ಅಸಂಬದ್ಧವಾಗಿ ಮಾತನಾಡುತ್ತಾರೆ ಎನ್ನುವುದನ್ನು ನಾನು ಒಪ್ಪಲ್ಲ. ಅವರು ಮಾತನಾಡೋದು ಸರಿ ಇದೆ. ಕನ್ನಂಬಾಡಿ ಕಟ್ಟೆ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಇದೆ. ಅದರ ಬಗ್ಗೆ ಯಾರಾದರೂ ಮಾತನಾಡಿದಾಗ ಅವರು ವಾಪಾಸ್ಸು ಮಾತನಾಡಲೇಬೇಕು. ನಮ್ಮ ಇಬ್ಬರು ಶಾಸಕರು ಬಿಇ ಮಾಡಿದ್ದಾರೆ. ಇಂಜಿನಿಯರಿಂಗ್ ಮಾಡಿದ ಎಂಎಲ್‌ಎಗಳೇ ಮಾತನಾಡುತ್ತಿಲ್ಲ. ನೀವು ಯಾಕೆ ಕನ್ನಂಬಾಡಿ ಕಟ್ಟೆಯನ್ನು ಎಳೆದುಕೊಂಡು ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಅಂಬರೀಶ್ ಅಣ್ಣನಿಗೂ ರವೀಂದ್ರ ಶ್ರೀಕಂಠಯ್ಯ ಅವರಿಗೂ ಏನು ವಿರಸ ಇತ್ತೆಂದು ನನಗೆ ಗೊತ್ತಿಲ್ಲ. ನಮ್ಮ ಶಾಕರಿಗೆ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ ಅವರನ್ನು ಕಾಪಾಡುವುದು, ಅವರ ಜೊತೆಯಲ್ಲಿ ನಿಲ್ಲುವುದು ನಮ್ಮ ಕರ್ತವ್ಯ. ಹೀಗಾಗಿ ನಾನು ಅವರ ಪರವಾಗಿ ನಿಲ್ಲುತ್ತೇನೆ ಎಂದಿರುವ ಅನ್ನದಾನಿ ಸುಮಲತಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸುಮಲತಾ ಸೋಲಿಸಲು ಹೆಚ್ಡಿ ಕುಮಾರಸ್ವಾಮಿ ಶಪಥ.. ಇದಕ್ಕೆ ಸುಮಲತಾ ಕೌಂಟರ್ ಪ್ಲಾನ್ ಏನು?
Published On - 10:06 am, Sat, 10 July 21