ಕೆಆರ್​ಎಸ್ ಡ್ಯಾಂ ಬಳಿ ಕಲ್ಲುಗಳ ಕುಸಿತ: ಸ್ಥಳಕ್ಕೆ ಭೇಟಿ ನೀಡಿ, ಶಾಸಕ‌ ರವೀಂದ್ರ ಶ್ರೀಕಂಠಯ್ಯ ಹೇಳಿದ್ದೇನು?

KRS Dam: ಡ್ಯಾಂಗೂ, ಕಲ್ಲು ಕುಸಿದಿದ್ದಕ್ಕೂ ಸಂಬಂಧವಿಲ್ಲ. ಗಾರ್ಡನ್​ಗೆ ಹೋಗುವ ದಾರಿಯಲ್ಲಿ ಹತ್ತು ಹದಿನೈದು ಕಲ್ಲುಗಳು ಬಿದ್ದಿವೆ. ಇವುಗಳನ್ನ ಮಣ್ಣಿನಿಂದ ಕಟ್ಟಲಾಗಿದ್ದು, ಮಳೆಯಿಂದಾಗಿ ಘಟನೆಯಾಗಿದೆ: ರವೀಂದ್ರ ಶ್ರೀಕಂಠಯ್ಯ

ಕೆಆರ್​ಎಸ್ ಡ್ಯಾಂ ಬಳಿ ಕಲ್ಲುಗಳ ಕುಸಿತ: ಸ್ಥಳಕ್ಕೆ ಭೇಟಿ ನೀಡಿ, ಶಾಸಕ‌ ರವೀಂದ್ರ ಶ್ರೀಕಂಠಯ್ಯ ಹೇಳಿದ್ದೇನು?
ಕೆಆರ್​ಎಸ್​ ಡ್ಯಾಂಗೆ ಭೇಟಿ ನೀಡಿದ ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಕೆಆರ್​ಎಸ್​ ಡ್ಯಾಂ ಸಮೀಪದಲ್ಲಿ (KRS Dam) ಕಲ್ಲು ಕುಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ (JDS MLA Ravindra Srikantaiah) ಬೆಳ್ಳಂಬೆಳಗ್ಗೆ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಡ್ಯಾಂಗೂ, ಕಲ್ಲು ಕುಸಿದಿದ್ದಕ್ಕೂ ಸಂಬಂಧವಿಲ್ಲ. ಗಾರ್ಡನ್​ಗೆ ಹೋಗುವ ದಾರಿಯಲ್ಲಿ ಹತ್ತು ಹದಿನೈದು ಕಲ್ಲುಗಳು ಬಿದ್ದಿವೆ. ಇವುಗಳನ್ನ ಮಣ್ಣಿನಿಂದ ಕಟ್ಟಲಾಗಿದ್ದು, ಮಳೆಯಿಂದಾಗಿ (Heavy Rain) ಘಟನೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ತೊಂದರೆಯಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬಂದ ಬೆನ್ನಲ್ಲೇ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿದ್ದು, ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ರಸ್ತೆಯಂತಿರುವ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ಪಟ್ಟಿಯಲ್ಲಿ ರವೀಂದ್ರ ಶ್ರೀಂಕಠಯ್ಯ ಅವರ ಮೇಲೂ ಕೆಲ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಭಾರೀ ವಾಗ್ಯುದ್ಧವೇ ನಡೆದಿದೆ. ಇದೀಗ ಅವಘಡ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಇದಕ್ಕೂ ಡ್ಯಾಂಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.

ಡ್ಯಾಂ ನಿರ್ಮಾಣದ ನಂತರ ಕಲ್ಲುಗಳು ಕುಸಿದಿದ್ದು ಇದೇ ಮೊದಲ ಬಾರಿಯಾಗಿದ್ದು, ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆದರೆ, ಗಾರ್ಡನ್​ಗೆ ಹೋಗುವ ರಸ್ತೆಯಲ್ಲಿ ಕುಸಿದಿರುವ ಕಲ್ಲುಗಳಿಂದ ಡ್ಯಾಂ ಸುರಕ್ಷತೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಕೂಡಾ ಸ್ಪಷ್ಟಪಡಿಸಿದ್ದು, ಆತಂಕ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜಲಾಶಯದಿಂದ ಕಾವೇರಿ ಪ್ರತಿಮೆ ಬಳಿಗೆ ತೆರಳಲು ಸಂಪರ್ಕ ಕಲ್ಪಿಸುವ ರಸ್ತೆಯಂತಹ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಡ್ಯಾಂಗೂ ಕುಸಿತ ಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ, ಡ್ಯಾಂ ಸುರಕ್ಷತೆಗೆ ಧಕ್ಕೆಯಾಗದ ಸ್ಥಳದಲ್ಲಿ ಕಲ್ಲುಗಳು ಕುಸಿದಿವೆ. ಘಟನೆಯಿಂದ ಯಾವುದೇ ಆತಂಕ ಇಲ್ಲ ಎಂದು ಟಿವಿ9ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿಜಯ್​ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

KRS DAM

ಅಧಿಕಾರಿಗಳೊಂದಿಗೆ ಚರ್ಚೆ

KRS DAM

ರವೀಂದ್ರ ಶ್ರೀಕಂಠಯ್ಯ ಭೇಟಿ

 

ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ಹಳೆ ರಸ್ತೆಯ ಕಲ್ಲುಗಳು ಕುಸಿದಿದ್ದು, 80+ ಗೇಟ್‌ಗಳ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಲ್ಲುಗಳ ಕುಸಿತ ಕಂಡಿರುವುದರಿಂದ ಸಹಜವಾಗಿಯೇ ಆತಂಕ ಉದ್ಭವಿಸಿತ್ತು. ಅಲ್ಲದೇ ಅದು ಕೆಆರ್‌ಎಸ್ ಡ್ಯಾಂನ ಮಧ್ಯ ಭಾಗದಲ್ಲಿರುವ ಜಾಗವಾಗಿದ್ದು, ಗೇಟ್ ದುರಸ್ತಿ ಕಾರ್ಯದ ವೇಳೆ ಏಕಾಏಕಿ ಕುಸಿತವಾಗಿದ್ದು ಅನುಮಾನಕ್ಕೆ ಆಸ್ಪದವಾಗಿತ್ತು. ಆದರೆ, ಈ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಸ್ಪಷ್ಟನೆ ನೀಡಿರುವುದರಿಂದ ಜನ ಕೊಂಚ ನಿರಾಳರಾಗಿದ್ದಾರೆ.

ಇದನ್ನೂ ಓದಿ:
KRS Dam: ಕೆಆರ್​ಎಸ್​ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ; ಆತಂಕ ಬೇಡ ಎಂದ ಅಧಿಕಾರಿಗಳು