ಭೀಮೆ ಅಬ್ಬರಕ್ಕೆ ನಲುಗಿದ ಕಲಬುರಗಿ, ಯಾದಗಿರಿ: ವಾಹನಗಳಿಗೆ ಬದಲಿ ಮಾರ್ಗ
ಕಲ್ಯಾಣ ಕರ್ನಾಟಕ ಭಾಗದಲ್ಲಿ ನದಿಗಳ ಅಬ್ಬರದ ಹಿನ್ನಲೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಭೀಮೆ ಉಕ್ಕಿ ಹರಿದ ಪರಿಣಾಮ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹದ ನೀರಿಗೆ ಬೆಳೆ ಆಹುತಿಯಾಗಿದೆ. ಬ್ರಿಡ್ಜ್ಗಳು ಮುಳುಗಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 50 ಸೇರಿ, ಹಲವೆಡೆ ರಸ್ತೆಗಳ ಸಂಚಾರ ಬಂದ್ ಆಗಿದೆ. SDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಮುಂದುವರಿದಿದೆ.

ಬೆಂಗಳೂರು, ಸೆಪ್ಟೆಂಬರ್ 29: ಭಾರಿ ಮಳೆ ಹಿನ್ನಲೆ ಉಜನಿ ಮತ್ತು ಸಿನಾ ಡ್ಯಾಂಗಳು ಸೇರಿ ಮಹಾರಾಷ್ಟ್ರ (Maharashtra) ಭಾಗದಿಂದ ಭೀಮಾ ನದಿಗೆ ಭಾರಿ ನೀರು ಹರಿಬಿಟ್ಟಿರುವ ಕಾರಣ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಕರ್ನಾಟಕದ ಕಲಬುರಗಿ, ಬೀದರ್ ಮತ್ತು ಯಾದಗಿರಿಯ ಬಹುತೇಕ ಪ್ರದೇಶಗಳಲ್ಲಿ ಜನರ ಬದುಕು ಬೀದಿಗೆ ಬಂದಿದ್ದು, ಹಳ್ಳಿಗೆ ಹಳ್ಳಿಯೇ ದ್ವೀಪವಾಗಿ ಮಾರ್ಪಟ್ಟಿವೆ. ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಪ್ರವಾಹದಿಂದಾಗಿ ತೊಂದರೆ ಉಂಟಾಗಿದ್ದು, ಗಂಜಿ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ.
ಭೀಮೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 50ರ ಸಂಚಾರ ಸತತ ಎರಡನೇ ದಿನವೂ ಬಂದ್ ಆಗಿದೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿಸಂಗಾವಿ ಸೇರಿ ಹಲವೆಡೆ ನಿರ್ಮಿಸಲಾಗಿರುವ ಸೇತುವೆಗಳು ಜಲಾವೃತವಾದ ಪರಿಣಾಮ, ಸಾವಿರಾರು ವಾಹನಗಳು ರಸ್ತೆಯಲ್ಲಿಯೇ ನಿಂತಿವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಲಾರಿಗಳೇ ಸೇತುವೆ ಸಮೀಪ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಜೇವರ್ಗಿ ತಾಲೂಕಿನ ವಿವಿಧೆಡೆ ಪ್ರವಾಹದಲ್ಲಿ ಸಿಲುಕೊಂಡಿದ್ದ ಗ್ರಾಮಸ್ಥರನ್ನ SDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ನಿಲ್ಲದ ಪ್ರವಾಹ, ಮನೆಗಳಿಗೆ ನುಗ್ಗಿದ ನೀರು: ಹಸೂಗೂಸಿನೊಂದಿಗೆ ಮೇಲ್ಚಾವಣಿ ಮೇಲೆ ಕುಳಿತ ಬಾಣಂತಿ!
ವಾಹನಗಳಿಗೆ ಬದಲಿ ಮಾರ್ಗ
ಯಾದಗಿರಿ ಸಮೀಪ ಸೇತುವೆ ಮುಳುಗಡೆ ಹಿನ್ನಲೆ ಸರದಾಗಿ, ಫಿರೋಜಾಬಾದ್ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಯಾದಗಿರಿ-ಶಹಾಪುರ ರಸ್ತೆಯೂ ಬಂದ್ ಆಗಿದ್ದು, ಕಲಬುರ್ಗಿ-ಯಾದಗಿರಿ-ನಾರಾಯಣಪೇಟೆ (ತೆಲಂಗಾಣ) ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಮಂಜ್ರಾ ನದಿ ಪ್ರವಾಹದಿಂದಾಗಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಮಲಾನಗರ, ಹುಲ್ಸೂರು ಸೇರಿ 20ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಅನ್ನದಾತರು ಕಂಗಾಲು
ಯಾದಗಿರಿ ನಗರವನ್ನ ಭೀಮಾ ನದಿ ಪ್ರವಾಹ ಸುತ್ತುವರಿದಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಜಿಲ್ಲಾ ಕ್ರೀಡಾಂಗಣವೂ ಸಂಪೂರ್ಣ ಜಲಾವೃತವಾಗಿದೆ. ಕೃಷಿ ಜಮೀನಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಆಹುತಿಯಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿಗೆ ಅಟ್ಟಲಾಗಿ ನಿರ್ಮಿಸಲಾಗಿರುವ 6 ಬ್ರಿಜ್ ಕಮ್ ಬ್ಯಾರೇಜ್ ಗಳೂ ಮುಳುಗಿದ್ದು, ನರಗುಂದ-ರೋಣ ರಸ್ತೆ ಬಂದ್ ಆಗಿ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:50 am, Mon, 29 September 25




