ಕಲಬುರಗಿ, ಜ.07: ಜಿಲ್ಲೆಯ ಅಫಜಲಪುರ(Afzalpur) ತಾಲ್ಲೂಕಿನ ಗ್ರಾಮದಲ್ಲಿ ನಿರ್ಮಾಣ ಆಗಬೇಕಿರುವ ನೂತನ ಹೈಸ್ಕೂಲ್ (high school)ಕಟ್ಟಡ ಕಾಮಗಾರಿ ಟೆಂಡರ್ನಲ್ಲಿ ಕಮಿಷನ್ ಮತ್ತು ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಕೆಕೆಆರ್ಡಿಬಿಯ ಎರಡು ಕೋಟಿ ಅನುದಾನದಲ್ಲಿ ನೂತನ 11 ಕೊಠಡಿಗಳ ಹೈಸ್ಕೂಲ್ ಕಟ್ಟಡ ಕಾಮಗಾರಿಗಾಗಿ ಕೆಲವು ತಿಂಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಬಿಜೆಪಿ ಬೆಂಬಲಿತ ಕಾಂಟ್ರಾಕ್ಟರ್ಗೆ ನೀಡಲಾಗಿತ್ತಂತೆ. ಆದರೀಗ ತಾಂತ್ರಿಕ ದೋಷ ಹಾಗೂ ಸ್ಥಳದ ಕೊರತೆ ನೇಪ ತೋರಿ ಹಳೆ ಟೆಂಡರ್ನ್ನು ರದ್ದುಪಡಿಸಿ, 9 ಕೋಠಡಿಗಳ ಪ್ಲ್ಯಾನ್ ರೂಪಿಸಿ ಮರು ಟೆಂಡರ್ಗೆ ಅಫಜಲಪುರ ಶಾಸಕ ಎಂ ವೈ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ಬೆಂಬಲಿಗರಿಗೆ ಶಾಲಾ ಕಟ್ಟಡ ಟೆಂಡರ್ ಕೊಡಿಸಲು ಕಮಿಷನ್ ಲೆಕ್ಕಾಚಾರ ಇಟ್ಟುಕೊಂಡು ಶಾಸಕರು ರಾಜಕೀಯ ಮಾಡ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿದ್ದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಹೈಸ್ಕೂಲ್ ಇತ್ತು. ಸುಮಾರು 200 ಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದ್ರೆ, ಹಳೆಯದಾದ ಶಾಲಾ ಕಟ್ಟಡ ಸಂಪೂರ್ಣ ಶೀಥಿಲ ಆಗಿತ್ತು. ಈ ಹಿನ್ನಲೆ ಮರು ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ರು ಕಾನೂನು ಅಡೆತಡೆ ಕಾರಣ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:ಪಿಎಸ್ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ
ಹೀಗಾಗಿ ನೂತನ ಹೈಸ್ಕೂಲ್ ಕಟ್ಟಡಕ್ಕಾಗಿ ಗ್ರಾಮಸ್ಥರು ದಿಟ್ಟ ನಿರ್ಧಾರ ಕೈಗೊಂಡು ಕಳೆದ 2022 ರ ನವೆಂಬರ್ ತಿಂಗಳಲ್ಲಿ ದೇಣಿಗೆ ಎತ್ತಿದ್ದರು. ಸೊನ್ನ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಕ್ಷರ ಜೋಳಿಗೆ ಮೂಲಕ ಗ್ರಾಮದ ಪ್ರತಿ ಮನೆಗೆ ತೆರಳಿ ಒಂದೂ ಕೋಟಿಗೂ ಅಧಿಕ ದೇಣಿಗೆ ಸಂಗ್ರಹಿಸಲಾಗಿತ್ತು. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಗ್ರಾಮಸ್ಥರು ಉದಾರ ಮನಸ್ಸಿನಿಂದ ಭರಪೂರ ದೇಣಿಗೆ ನೀಡಿದರು. ದೇಣಿಗೆ ಹಣದಲ್ಲಿ ಗ್ರಾಮದಲ್ಲಿ 5 ಎಕರೆ ಜಮೀನು ಖರೀದಿಸಿ 2.5 ಎಕರೆ ಜಮೀನು ಹೈಸ್ಕೂಲ್ ಕಟ್ಟಡಕ್ಕಾಗಿ ಶಿಕ್ಷಣ ಇಲಾಖೆಗೆ ನೀಡಲಾಗಿದೆ.
ಇನ್ನುಳಿದ 2.5 ಎಕರೆ ಜಮೀನು ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಅನುಕೂಲಕ್ಕಾಗಿ ಮೀಸಲಿಡಲಾಗಿದೆ. ಆದರೆ, ಜಮೀನು ಶಿಕ್ಷಣ ಇಲಾಖೆಗೆ ನೀಡಿ ಒಂದೂ ವರ್ಷ ಕಳೆದರೂ ಟೆಂಡರ್ನಲ್ಲಿ ಕಮಿಷನ್, ರಾಜಕೀಯ ಲೆಕ್ಕಾಚಾರದಿಂದ ಹೈಸ್ಕೂಲ್ ಕಟ್ಟಡ ಕಾಮಗಾರಿ ಆರಂಭವಾಗದೇ ನೆನೆಗುದಿಗೆ ಬಿದ್ದಿದೆ. ಇತ್ತ ಹಳೆ ಕಟ್ಟಡ ಶಿಥೀಲಗೊಂಡಿರುವುದರಿಂದ ಶಾಲಾ ಮಕ್ಕಳಿಗೆ ದೇವಸ್ಥಾನದ ವಸತಿ ಗೃಹದಲ್ಲಿ ಪಾಠ ಮಾಡಲಾಗುತ್ತಿದೆ. ಇದರಿಂದ ವಸತಿ ಗೃಹದಲ್ಲಿ ಭಕ್ತರ ವಾಸದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಆದ್ರೆ, ಗ್ರಾಮಸ್ಥರ ಆರೋಪವನ್ನ ಶಾಸಕರು ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ.
ಒಟ್ಟಿನಲ್ಲಿ ಕಾನೂನು ಅಡೆತಡೆಗಳಿಗೆ ಸೆಡ್ಡು ಹೊಡೆದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಇಡೀ ಗ್ರಾಮಸ್ಥರು ಸೇರಿಕೊಂಡು ಸುಸಜ್ಜಿತ ಹೈಸ್ಕೂಲ್ ಕಟ್ಟಡಕ್ಕಾಗಿ ಅಕ್ಷರ ಜೋಳಿಗೆ ಮೂಲಕ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹ ಮಾಡಿದ್ದರು. ಕಮಿಷನ್ ಮತ್ತು ರಾಜಕೀಯ ಲೆಕ್ಕಾಚಾರ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸ. ಅದೇನೇ ಲೆಕ್ಕಾಚಾರಗಳು ಇದ್ದರೂ ಸಹ ಮಕ್ಕಳ ಶಿಕ್ಷಣ ಭವಿಷ್ಯದ ದೃಷ್ಟಿಯಿಂದ ಹೈಸ್ಕೂಲ್ ಕಟ್ಟಡ ಶೀಘ್ರ ನಿರ್ಮಾಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟವರು ಮುಂದಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Sun, 7 January 24