ನಿಮ್ಮದು 100% ಕಮಿಷನ್ ಸರ್ಕಾರ ಎಂದು ಈಗಲಾದರೂ ಒಪ್ಪುವಿರಾ? ಕಾಂಗ್ರೆಸ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್
40% ಸರ್ಕಾರ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತಮ್ಮದು 100% ಸರ್ಕಾರ ಎಂದು ಒಪ್ಪುತ್ತೀರಾ? ಎಂದು ಪ್ರಶ್ನಿಸಿದ ಬಿಜೆಪಿ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಿಂತಹ ಭ್ರಷ್ಟಾಚಾರಗಳು ನಡೆದಿವೆ ಎಂದು ಸರಣಿ ಟ್ವೀಟ್ಗಳನ್ನು ಮಾಡಿದೆ.
ಬೆಂಗಳೂರು: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಿಂತಹ ಭ್ರಷ್ಟಾಚಾರಗಳು ನಡೆದಿವೆ ಎನ್ನುತ್ತಾ ಬಿಜೆಪಿ(BJP) ಸರಣಿ ಟ್ವೀಟ್ಗಳನ್ನು ಮಾಡಿದ್ದು, ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಟೀಕಿಸಿದೆ. ಅಲ್ಲದೆ ಕಡುಭ್ರಷ್ಟ ಕಾಂಗ್ರೆಸ್ ಎಂದು ಹ್ಯಾಷ್ಟ್ಯಾಗ್ ಕೂಡ ಹಾಕಿದ್ದು, ಸಿದ್ದರಾಮಯ್ಯ (Siddaramaiah) ಅವರನ್ನು ಭ್ರಷ್ಟರಾಮಯ್ಯ ಎಂದು ಜರಿದಿದೆ.
“ರಾಶಿ ರಾಶಿ ಹಗರಣಗಳ ಅನಭಿಷಿಕ್ತ ದೊರೆ ಎಂದರೆ ಅದು ರೀಡುರಾಮಯ್ಯ. ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಕಲ್ಲು ಗಣಿಗಾರಿಕೆ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಮರಳು ದಂಧೆ, ವರ್ಗಾವಣೆ ದಂಧೆ, ಭ್ರಷ್ಟರಾಮಯ್ಯ ಅವರೇ ಇದಕ್ಕೆಲ್ಲಾ ಪಡೆದ ಕಮಿಷನ್ ಎಷ್ಟು?” ಎಂದು ಬಿಜೆಪಿ ಪ್ರಶ್ನಿಸಿದೆ.
“ಕಾಂಗ್ರೆಸ್ ಅವಧಿಯಲ್ಲಿ ಬಿಬಿಎಂಪಿಯನ್ನು ಕೆ.ಜೆ.ಜಾರ್ಜ್ ಅವರು ಎಟಿಎಂ ರೀತಿ ಬಳಕೆ ಮಾಡಿದ್ದರು. ಜಾರ್ಜ್ ಅವರು ಸಿದ್ದರಾಮಯ್ಯ ಪಾಲಿನ ಎಟಿಎಂ ಆಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಬಿಬಿಎಂಪಿಯಲ್ಲಿ 1,400 ಕೋಟಿ ಹಗರಣ ನಡೆದಿದೆ. ಈ ಎಲ್ಲಾ ಹಗರಣಗಳಿಗೂ ಕಾವಲುಗಾರನಾಗಿದ್ದು ನೀವಲ್ಲವೇ?” ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸುತ್ತಾ ಭ್ರಷ್ಟರಾಮಯ್ಯ, ಕಡುಭ್ರಷ್ಟಕಾಂಗ್ರೆಸ್ ಎಂದು ಕರೆದಿದೆ.
ಕಾಂಗ್ರೆಸ್ ಅವಧಿಯಲ್ಲಿ ಸಚಿವರು ಖಾತೆ ನಿರ್ವಹಣೆ ಮಾಡುವ ಬದಲು ತಮ್ಮ ಖಾತೆ ಭರ್ತಿ ಮಾಡಿಕೊಂಡಿದ್ದರು ಎಂದು ಬಿಜೆಪಿ ಆರೋಪಿಸಿದೆ. “ವೈಟ್ ಟಾಪಿಂಗ್ ಹಗರಣ, ಹೈಕಮಾಂಡ್‌ಗೆ 119 ಕೋಟಿ ಕಪ್ಪ ಪಾವತಿ, ಕೆಂಪೇಗೌಡ ಲೇಔಟ್ ಟೆಂಡರ್‌ನಲ್ಲಿ 25 ಪರ್ಸೆಂಟ್ ಕಮಿಷನ್, ಈಗಲಾದರೂ ನಿಮ್ಮದು 100% ಕಮಿಷನ್ ಸರ್ಕಾರ ಎಂದು ಒಪ್ಪುವಿರಾ?” ಎಂದು ಬಿಜೆಪಿ ಪ್ರಶ್ನಿಸಿದೆ.
“ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವ ಗಾದೆ ಮಾತಿನಂತೆ ಕಾಂಗ್ರೆಸ್ ಮಾಡಿದ ಮಹಾನ್ ಸಾಧನೆ ಎಂದರೆ ಅದು ಭ್ರಷ್ಟಾಚಾರವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶದಲ್ಲಿ ಭ್ರಷ್ಟಾಚಾರ ಮುಂದುವರಿಸಿದರೆ, ರಾಜ್ಯದಲ್ಲಿ ಅದರ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಹೊತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಭ್ರಷ್ಟರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು” ಎಂದು ಟ್ವೀಟ್ ಮಾಡಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Wed, 14 September 22