Breaking News ಗೋವಾದ 11 ಶಾಸಕರ ಪೈಕಿ 8 ಮಂದಿ ಬಿಜೆಪಿಗೆ ಸೇರ್ಪಡೆ
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಡುವೆಯೇ ಗೋವಾದಲ್ಲಿನ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರವನ್ನುಂಟುಮಾಡಿದೆ.
ಪಣಜಿ: ಕಾಂಗ್ರೆಸ್ ಪಕ್ಷವು (Congress) ಪಕ್ಷಾಂತರದ ಯತ್ನವನ್ನು ತಡೆದ ಎರಡು ತಿಂಗಳ ನಂತರ, ಅದರ 11 ಶಾಸಕರ ಪೈಕಿ ಎಂಟು ಮಂದಿ ಶಾಸಕರು ಇಂದು ಬಿಜೆಪಿ (BJP) ಸೇರಿದ್ದಾರೆ. ಹಿರಿಯ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಈ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಡುವೆಯೇ ಗೋವಾದಲ್ಲಿನ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರವನ್ನುಂಟುಮಾಡಿದೆ. ರಾಹುಲ್ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಹೊತ್ತಲ್ಲೇ ಶಾಸಕರು ಪಕ್ಷಾಂತರವಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗೇಲಿ ಮಾಡಿದ ಬಿಜೆಪಿ ಮೊದಲು ನಿಮ್ಮ ಪಕ್ಷವನ್ನು ಜೋಡಿಸಿ ಎಂದಿದೆ. “ಇದು ಕಾಂಗ್ರೆಸ್ ಚೋಡೋ (ಕಾಂಗ್ರೆಸ್ ತೊರೆಯಿರಿ), ಬಿಜೆಪಿ ಕೊ ಜೋಡೋ,” ಎಂದು ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿದ ಮೈಕೆಲ್ ಲೋಬೋ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಇದು ಆಪರೇಷನ್ ಕೀಚಡ್, ಅಂದರೆ ಕೆಸರು. ಇದನ್ನು ಮಾಡಲು ಬಿಜೆಪಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿತು ಕೇಂದ್ರ ತನಿಖಾ ಸಂಸ್ಥೆಗಳು, ಗೂಂಡಾಗಳಿಂದ ಬೆದರಿಕೆಗಳು, ಹಣದ ಆಮಿಷ ಎಲ್ಲವನ್ನೂ ಮಾಡಿತು. ಯಾಕೆಂದರೆ ಅದು ಭಾರತ್ ಜೋಡೋ ಯಾತ್ರೆಯಿಂದ ಅಸ್ವಸ್ಥವಾಗಿದೆ. ಪಕ್ಷಾಂತರವಾದ ಶಾಸಕರು ದುಷ್ಟತೆಯ ಸಂಕೇತಗಳು ಎಂದು ಖೇರಾ ಪ್ರತಿಕ್ರಿಯಿಸಿದ್ದಾರೆ.
ದಿಗಂಬರ ಕಾಮತ್ ಮತ್ತು ಮೈಕೆಲ್ ಲೋಬೋ ಜುಲೈನಲ್ಲಿಯೇ ಪಕ್ಷಾಂತರ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅಂದಹಾಗೆ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್ ಅವರಲ್ಲಿ ಕೇಳಿತ್ತು. ಈ ನಡುವೆಯೇ ಕಾಂಗ್ರೆಸ್ ಮೈಕೆಲ್ ಲೋಬೊ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಿದ್ದರೂ ಆ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಿರಲಿಲ್ಲ
ಇಂದು ಬೆಳಗ್ಗೆ ವಿಧಾನಸಭೆ ಕಲಾಪ ನಡೆಯದ ಕಾರಣ ಸ್ಪೀಕರ್ ಜೊತೆ ಶಾಸಕರ ಸಭೆ ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಇದಾದ ನಂತರ ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ ಎಲ್ಲಾ ಪ್ರಮುಖ ನಾಯಕರು ಮುಂಬರುವ ದಿನಗಳಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷವನ್ನು ತೊರೆಯಲಿದ್ದಾರೆ. ನಾವು ಜನರನ್ನು ಪ್ರತಿನಿಧಿಸುತ್ತಿದ್ದೇವೆ, ಅವರ ಧ್ವನಿಯನ್ನು ಕೇಳಬೇಕು. ನಮಗೆ ತೊರೆಯಲು ಹೇಳಿದರು, ನಾವು ಹೋಗುತ್ತಿದ್ದೇವೆ ಎಂದು ಬಿಜೆಪಿ ಸೇರಿದ ನಂತರ ಮಾತನಾಡಿದ ಮೈಕೆಲ್ ಲೋಬೋ ಹೇಳಿದ್ದಾರೆ.
Published On - 1:41 pm, Wed, 14 September 22