ಮಹಿಳಾ ಅಧಿಕಾರಿಯಿಂದ ಕಲಬುರಗಿ ಮಾಜಿ ಮೇಯರ್ ವಿರುದ್ದ ಕಿರುಕುಳ ಆರೋಪ
ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಯೊಬ್ಬರು ಸುದ್ದಿಗೋಷ್ಟಿ ನಡೆಸಿ, ‘ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮೇಯರ್ ವಿರುದ್ದ ಕಿರುಕುಳ ಆರೋಪ ಮಾಡಿದ್ದಾರೆ. ಹೌದು, ಪರವಾನಗಿ ಪಡೆಯದೇ ನಡೆಯುತ್ತಿದ್ದ ನೀರಿನ ಘಟಕ ಸೀಜ್ ಮಾಡಿದ್ರೆ, ನನಗೆ ಕರೆ ಮಾಡಿ ಕೈ ಮುಖಂಡ ಒಬ್ಬರು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದ್ರೆ, ಆರೋಪವನ್ನು ಮಾಜಿ ಮೇಯರ್ ತಳ್ಳಿ ಹಾಕಿದ್ದಾರೆ.

ಕಲಬುರಗಿ, ಆ.29: ರಾಜ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಕೃಷಿ ಸಚಿವರ ವಿರುದ್ದ ಕೃಷಿ ಅಧಿಕಾರಿಗಳು ಬರೆದಿದ್ದಾರೆ ಎಂದು ಹೇಳಲಾಗಿರುವ ಪತ್ರ, ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಸಿಐಡಿ ತನಿಖೆ ಕೂಡ ನಡೆಯುತ್ತಿದೆ. ಈ ಮಧ್ಯೆ ಕಲಬುರಗಿ (Kalaburagi) ನಗರದಲ್ಲಿ ಇಂದು(ಆ.29) ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ, ಡಾ. ಅರ್ಚನಾ ಕಮಲಾಪುರಕರ, ಕೈ ಮುಖಂಡ ಹಾಗೂ ಮಾಜಿ ಮೇಯರ್ ವಿರುದ್ದ ಕಿರುಕುಳ ಆರೋಪ ಮಾಡಿದ್ದಾರೆ. ಜೊತೆಗೆ ಈ ಬಗ್ಗೆ ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.
ಹೌದು, ಇಂದು ಕಲಬುರಗಿ ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಹಿಳಾ ಅಧಿಕಾರಿ, ಡಾ. ಅರ್ಚನಾ ಕಮಲಾಪುರಕರ ಅವರು ‘ಈ ಹಿಂದೆ ನಾನು ಐಎಸ್ಐ ಮತ್ತು ಪರಾವಾನಗಿ ಪಡೆಯದೇ ಇದ್ದ ಹತ್ತಕ್ಕೂ ಹೆಚ್ಚು ನೀರಿನ ಘಟಕಗಳನ್ನು ಸೀಜ್ ಮಾಡಿದ್ದೆ. ಜೊತೆಗೆ ಕಳೆದ ಮೂರು ದಿನದಲ್ಲಿ ಮೂರು ಘಟಕಗಳ ಮೇಲೆ ಸೀಜ್ ಮಾಡಿದ್ದೇವೆ. ಆದ್ರೆ, ನಿನ್ನೆ(ಆ.28) ಸಂಜೆ ನನಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ಶರುಣು ಮೋದಿ, ಕಿರುಕುಳ ನೀಡಿದ್ದಾರೆ. ‘ನೀರಿನ ಘಟಕದ ಮೇಲೆ ಯಾಕೆ ದಾಳಿ ಮಾಡಿದ್ದೀರಿ, ನಿಮ್ಮ ವ್ಯಯಕ್ತಿಕ ಹಿತಾಸಕ್ತಿ ಏನು ಎಂದು ಕೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ: FIR ದಾಖಲು
ಸೂಕ್ತ ಭದ್ರತೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಈ ಹಿಂದೆ ನಮಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸಹ ಹೇಳಿದ್ದಾರೆ. ಆದ್ರು, ಕೂಡ ಕೆಲ ಘಟಕದ ಮೇಲೆ ಯಾಕೆ ದಾಳಿ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಹಿಳಾ ಅಧಿಕಾರಿಗೆ ಫೋನ್ ಮಾಡಿ, ಈ ರೀತಿ ಕಿರುಕುಳ ನೀಡಿದ್ರೆ, ನಾವು ಕೆಲಸ ಮಾಡಲು ಹೇಗೆ ಸಾದ್ಯವಾಗುತ್ತದೆ. ಹೀಗಾಗಿ ತಮಗೆ ಸೂಕ್ತ ಭದ್ರತೆ ನೀಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪರವಾನಗಿ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದ ಘಟಕವನ್ನು ಬಂದ್ ಮಾಡಿಸಿದ್ದ ಅಧಿಕಾರಿ
ನಿನ್ನೆ ಕಲಬುರಗಿ ನಗರದ ಆರ್ಟಿಓ ಕ್ರಾಸ್ ಬಳಿಯಿರುವ ಸಂಜೀವಿನಿ ವಾಟರ್ ಪ್ಲ್ಯಾಂಟ್ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ಮಾಡಿ, ಪರವಾನಗಿ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದ ಘಟಕವನ್ನು ಬಂದ್ ಮಾಡಿಸಿದ್ದರು. ಇದೇ ವಿಚಾರ ಇದೀಗ ಮಾಜಿ ಮೇಯರ್ ಮತ್ತು ಕೈ ಮುಖಂಡ ಶರಣು ಮೋದಿ ಹಾಗೂ ಅಧಿಕಾರಿ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಹನಿ ಟ್ರ್ಯಾಪ್: ವೃದ್ಧನ ವಿವಸ್ತ್ರಗೊಳಿಸಿ ಕಿರುಕುಳ, ಟಿವಿ ನಟಿ ಬಂಧನ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಶರುಣು ಮೋದಿ, ‘ಜಿಲ್ಲೆಯಲ್ಲಿ ಇನ್ನೂರು, ಮುನ್ನೂರು ಅನಧಿಕೃತ ನೀರಿನ ಘಟಕಗಳಿವೆ. ಒಂದೇ ಘಟಕ ಯಾಕೆ ಬಂದ್ ಮಾಡಿಸ್ತೀರಿ, ಎಲ್ಲಾ ಘಟಕ ಬಂದ್ ಮಾಡಿಸಿ ಎಂದು ಹೇಳಿದ್ದೇನೆ. ನಾನು ನಿನ್ನೆ ಸಂಜೆ ಕರೆ ಮಾಡಿದ್ದು ನಿಜ. ನಾನು ಮಾಜಿ ಮೇಯರ್ ಇದ್ದೇನೆ. ಅನೇಕರು ನನಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ. ಅದೇ ರೀತಿ ಸಂಜೀವಿನ ನೀರಿನ ಘಟಕದವರು ಕೂಡ ನಮ್ಮ ಘಟಕ ಮಾತ್ರ ಉದ್ದೇಶಪೂರ್ಕವಾಗಿ ಬಂದ್ ಮಾಡಿಸಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದೇನೆ ಎಂದರು.
ಈ ಕುರಿತು ಮಾಹಿತಿ ಕೇಳುವುದು ತಪ್ಪು ಹೇಗೆ ಆಗುತ್ತೆ. ಆದ್ರೆ, ಅಧಿಕಾರಿಯೇ ನನ್ನ ಜೊತೆ ಇಂಗ್ಲಿಷ್ ಮಾತನಾಡಲು ಆರಂಭಿಸಿದ್ರು. ಅಧಿಕಾರಿಗಳಿಗೆ ಕರೆ ಮಾಡಿದ್ರೆ, ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಆರಂಭಿಸಿದ್ರೆ, ಸಾಮಾನ್ಯ ಜನರ ಗತಿಯೇನು. ತಾನು ಯಾವುದೇ ಬೆದರಿಕೆ ಹಾಕಿಲ್ಲ. ಇಂತಹ ಅಧಿಕಾರಿಗಳು ನಮ್ಮ ಸರ್ಕಾರಕ್ಕೆ ಕೆಟ್ಟ ಹಸರು ತರ್ತಿದ್ದಾರೆ. ಅಧಿಕಾರಿಯ ಪತಿಯೇ ಕಚೇರಿಯಲ್ಲಿ ಕಾರುಬಾರು ನಡೆಸುತ್ತಾರೆ. ಆ ಬಗ್ಗೆ ತನಿಖೆಗೆ ನಾನು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಮೇಯರ್ ಶರುಣು ಮೋದಿ ಹೇಳಿದರು.
ಇದನ್ನೂ ಓದಿ:Hassan News: ಪತ್ನಿ ಸೇರಿ ಆಕೆಯ ಪೋಷಕರಿಂದ ಕಿರುಕುಳ ಆರೋಪ: ಮನನೊಂದು ಸಾವಿಗೆ ಶರಣಾದ ನವವಿವಾಹಿತ
ಕಲಬುರಗಿಯಲ್ಲಿ ಇದೀಗ ಮಾಜಿ ಮೇಯರ್ ಮತ್ತು ಮಹಿಳಾ ಅಧಿಕಾರಿ ವಿರುದ್ದ ಟಾಕ್ ಪೈಟ್ ನಡೆದಿದೆ. ಆದ್ರೆ, ಕಿರುಕುಳ ಬಗ್ಗೆ ಅಧಿಕಾರಿ ಇಲ್ಲಿವರೆಗೆ ಮೇಲಾಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಆದ್ರೆ, ಅನಧಿಕೃತ ನೀರಿನ ಘಟಕಗಳನ್ನು ಬಂದ್ ಮಾಡುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿಸ್ಪಕ್ಷಪಾತವಾಗಿ ನಡೆದುಕೊಂಡು, ಜನರಿಗೆ ಶುದ್ದ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆ ಮಾಡಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ