
ಕಲಬುರಗಿ, ಅಕ್ಟೋಬರ್ 15: ರಾಜ್ಯದಲ್ಲಿ ಬರಗಾಲದ ಆತಂಕದ ನಡುವೆಯೇ ಕೆಆರ್ಎಸ್ ಡ್ಯಾಂನಲ್ಲಿ ಕಡಿಮೆ ನೀರಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಆದರೆ, ಇತ್ತ ಭೀಮಾ ನದಿಗೆ ಮಹಾರಾಷ್ಟ್ರದಿಂದ ಬರಬೇಕಾದ ನೀರು ಹರಿಸಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಚಾವತ್ ಆಯೋಗದ ಆದೇಶದ ಪ್ರಕಾರ ಭೀಮಾ ನದಿಗೆ ಹರಿಸಬೇಕಾದ 15 ಟಿಎಂಸಿ ನೀರು ಇನ್ನೂ ಸಿಗದಿರುವುದನ್ನು ಖಂಡಿಸಿ ರೈತರು ಇದೀಗ ಹೋರಾಟಕ್ಕೆ ಇಳಿದಿದ್ದಾರೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ, ಅಫಜಲಪುರ ತಾಲೂಕಿನ ಭೀಮಾ ತೀರದ ಅಳಗಿ (ಬಿ) ಗ್ರಾಮದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 60 ಕಿ.ಮೀ ಪಾದಯಾತ್ರೆ ಆರಂಭಿಸಿದ್ದಾರೆ.
ಭೀಮಾ ನದಿ ಉತ್ತರ ಕಲ್ಯಾಣ ಕರ್ನಾಟಕದ ಪ್ರಮುಖ ಜಲಮೂಲವಾಗಿದೆ. ಬಚಾವತ್ ಆಯೋಗದ ಆದೇಶದಂತೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸಬೇಕಿದೆ ಎಂಬುದು ರೈತರ ಪ್ರಮುಖ ಬೇಡಿಕೆ. ಆದರೆ ಮಹಾರಾಷ್ಟ್ರ ಸರ್ಕಾರ ಈ ನೀರನ್ನು ಹರಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ವೇಳೆಗೆ ಭೀಮಾ ನದಿ ಬತ್ತಲಾರಂಭಿಸುವುದರಿಂದ ಈ ಭಾಗದ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಮತ್ತು ತಮ್ಮ ಪಾಲಿನ ನೀರು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸಿದರೆ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸಲು ನೆರವಾಗಲಿದೆ ಎಂಬುದು ರೈತರ ವಾದ. ಹಲವು ವರ್ಷಗಳಿಂದ ತಮ್ಮ ಪಾಲಿನ ನೀರು ಸಿಗುತ್ತಿಲ್ಲ ಎಂದು ಆರೋಪಿಸಿರುವ ರೈತರು, ಈ ಬಾರಿ ಬರದ ಹಿನ್ನೆಲೆಯಲ್ಲಿ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 17ರಂದು ಕಲಬುರಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ನೀರು ಬಿಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು ಎಂದು ರೈತರು ಉಲ್ಲೇಖಿಸಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಭೀಮಾ ನದಿಗೆ ನೀರು ಹರಿಸುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ರೈತರು, ತಮ್ಮ ಬೇಡಿಕೆ ಈಡೇರದಿದ್ದರೆ ಕಲಬುರಗಿ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಂದ್ ನಡೆಸಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಗಮನ ಹರಿಸುತ್ತಿರುವಾಗ, ಭೀಮಾ ನದಿಗೆ ಬರಬೇಕಾದ ನೀರಿನ ವಿಚಾರದಲ್ಲೂ ಸಮಾನ ಆದ್ಯತೆ ನೀಡಬೇಕು ಎಂಬುದು ರೈತರ ಆಗ್ರಹ. ಬರದ ಸಂಕಷ್ಟದ ನಡುವೆ ಕುಡಿಯುವ ನೀರಿಗಾಗಿ ಹೋರಾಡುವ ಪರಿಸ್ಥಿತಿ ತಪ್ಪಿಸಲು ಮಹಾರಾಷ್ಟ್ರದಿಂದ ನೀರು ಹರಿಸುವಂತೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಾದಯಾತ್ರೆ ಮೂಲಕ ಒತ್ತಡ ಹೇರುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ