ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

| Updated By: Ganapathi Sharma

Updated on: Jan 04, 2025 | 1:32 PM

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಇದೀಗ ಸಮರ ಸಾರಿದೆ. ಸಚಿವ ಪ್ರಿಯಾಂಕ್​ ಖರ್ಗೆಯನ್ನೇ ಟಾರ್ಗೆಟ್ ಮಾಡಿ, ರಾಜೀನಾಮೆಗೆ ಆಗ್ರಹಿಸಿದೆ. ಕಲಬುರಗಿಯ ಪ್ರಿಯಾಂಕ್​ ಖರ್ಗೆ ನಿವಾಸಕ್ಕೆ ಮುತ್ತಿಗೆಗೂ ಬಿಜೆಪಿ ನಾಯಕರು, ಕಾರ್ಯಕರ್ಗತರು ಯತ್ನಿಸಿದ್ದಾರೆ. ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ
ಬಿಜೆಪಿ ನಾಯಕರ ಪ್ರತಿಭಟನೆ
Follow us on

ಕಲಬುರಗಿ, ಜನವರಿ 4: ಬೀದರ್​ನಲ್ಲಿ ಗುತ್ತಿಗೆದಾರ ಸಚಿನ್ ಬರೆದ ಡೆತ್​ನೋಟ್​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿದೆ ಎಂಬುದು ಬಿಜೆಪಿ ಆರೋಪ ಆಗಿದೆ. ಹೀಗಾಗಿ ಸಾವಿಗೆ ಸಚಿವರೇ ಕಾರಣ ಎಂದು ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ನಾಯಕರು ಮುತ್ತಿಗೆಗೆ ಯತ್ನಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾದರು.

ಇನ್ನು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು, ಪ್ರತಿಭಟನಾಕಾರನ್ನು ತಡೆದರು. ಈ ವೇಳೆ ತಳ್ಳಾಟ, ನೂಕಾಟವೂ ನಡೆಯಿತು.

ಮುತ್ತಿಗೆ ಹಾಕಲು ಬಂದವರಿಗೆ ಎಳನೀರು, ಕಾಫಿ, ಚಹಾ

ಎರಡು ದಿನ ಹಿಂದಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪ್ರತಿಭಟನೆ ಮಾಡಲಿ. ಒಳ್ಳೆ ರೀತಿಯಲ್ಲಿ ಆತಿಥ್ಯ ಕೊಡುತ್ತೇನೆ ಎಂದಿದ್ದರು. ಇದೀಗ ಅದರಂತೆಯೇ ಮುತ್ತಿಗೆ ಹಾಕಲು ಬಂದ ಬಿಜೆಪಿ ನಾಯಕರಿಗೆ ಎಳನೀರು, ಕಾಫಿ, ಟೀ ವ್ಯವಸ್ಥೆ ಮಾಡಲಾಗಿದ್ದು ಗಮನ ಸೆಳೆಯಿತು.

ಕಲಬುರಗಿಯಲ್ಲಿ ಪ್ರಿಯಾಂಕ್ ವಿರುದ್ಧ ಪ್ರತಿಭಟನೆ ನಡೆದರೆ, ಮಂಡ್ಯದಲ್ಲಿ ಪರವಾಗಿ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿಟಿ.ರವಿ ಫೋಟೋಗೆ ಮಸಿ ಬಳಿದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಕುಟುಂಬಸ್ಥರಿಗೆ ಫೋನ್ ಮಾಡಿ ಬಿಜೆಪಿ ಒತ್ತಡ: ಖರ್ಗೆ ಆರೋಪ

ಪ್ರತಿಭಟನೆಯಲ್ಲಿ ಭಾಗಿ ಆಗುವಂತೆ ಸಂತ್ರಸ್ತರ ಕುಟುಂಬಸ್ಥರಿಗೆ ಬಿಜೆಪಿ ಒತ್ತಡ ಹಾಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ತಮ್ಮ ವಿರುದ್ಧವಾಗಿ ಹೇಳಿಕೆ ಕೊಡುವಂತೆಯೂ ಬಿಜೆಪಿಯವರು ಒತ್ತಡ ಹೇರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ಸಂವಿಧಾನ ಕಲಬುರಗಿಯಲ್ಲಿ ಅನ್ವಯವಾಗುವುದಿಲ್ಲವೇ? ಕಾಂಗ್ರೆಸ್ ರೀತಿಯಲ್ಲೇ ಅಶೋಕ್ ತಿರುಗೇಟು

ಸಿದ್ದರಾಮಯ್ಯ ಸರ್ಕಾರದಲ್ಲಿ ಸರಣಿ ಆತ್ಮಹತ್ಯೆಗಳಾಗುತ್ತಿವೆ. ಆತ್ಮಹತ್ಯೆ ಭಾಗ್ಯ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಇನ್ನು ಆರ್ ಅಶೋಕ್ ಅಂತೂ ಬಿಹಾರದ ರೀತಿ ರಾಜ್ಯದಲ್ಲಿ ಬೆಳವಣಿಗೆಗಳಾಗುತ್ತಿವೆ ಎಂದರು.

ಮತ್ತೊಂದೆಡೆ, ಸಚಿನ್ ಪಾಂಚಾಳ್ ಆತ್ಮಹತ್ಯೆ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ಶುಕ್ರವಾರ 2 ಗಂಟೆ ಕುಟುಂಬಸ್ಥರ ವಿಚಾರಣೆ ಮಾಡಿದ್ದ ತಂಡ, ಇಂದು ಮತ್ತಷ್ಟು ವಿಚಾರಣೆ ಮುಂದುವರಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ