ಕಲಬುರಗಿ, ನ.27: ಜಿಲ್ಲೆಯ (Kalaburagi) ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪಂಚಾಯತ್ಗೆ ಸೇರಿದ ಜಾಗದಲ್ಲಿ ಗಣೇಶ ಕಟ್ಟೆ ನಿರ್ಮಾಣ ವಿಚಾರವಾಗಿ ಮತ್ತೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ. ತಂಡವೊಂದು ಗಣೇಶ ಕಟ್ಟೆ ನಿರ್ಮಾಣಕ್ಕೆ ಮುಂದಾದಾಗ ಈ ಜಾಗ ಮಸೀದಿಗೆ ಸೇರಿದ್ದು ಎಂದು ಮತ್ತೊಂದು ತಂಡ ಚಕಾರ ಎತ್ತಿದೆ. ಅಲ್ಲದೆ, ಮಸೀದಿ ಜಾಗದಲ್ಲಿ ಗಣೇಶ ಕಟ್ಟೆ ನಿರ್ಮಾಣ ಮಾಡುತ್ತಿದ್ದಾರೆ ಅಂತಾ ಗಲಾಟೆ ನಡೆಸಿದ್ದಾರೆ.
ಎರಡು ತಿಂಗಳ ಹಿಂದೆಯೂ ಇದೇ ವಿಚಾರಕ್ಕೆ ಗಲಾಟೆ ನಡೆದಿತ್ತು. ಆ ವೇಳೆ, ಜೇವರ್ಗಿ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಸರ್ವೆ ಮಾಡಿ ಪಂಚಾಯತ್ ಸ್ಥಳ ಎಂದು ಗುರುತಿಸಿ ಹೋಗಿದ್ದರು. ಎರಡು ಸಮುದಾಯದವರು ಸಮ್ಮತಿ ಸೂಚಿಸಿ ಒಪ್ಪಿಗೆ ಪತ್ರ ಕೂಡ ಬರೆದು ಕೊಟ್ಟಿದ್ದರು. ಇದೀಗ ಪಂಚಾಯತಿ ಜಾಗದಲ್ಲಿ ಕಟ್ಟೆ ನಿರ್ಮಾಣಕ್ಕೆ ಮುಂದಾದ ಹಿನ್ನೆಲೆ ಮತ್ತೆ ಗಲಾಟೆ ನಡೆದಿದೆ.
ಘಟನೆ ಸಂಬಂಧ ಮಾತನಾಡಿದ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಅಂಕಲಗಿ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ನಾನು ಇಲ್ಲಿಗೆ ಬಂದಿದ್ದೇನೆ. ಗ್ರಾಮದಲ್ಲಿ ಸದ್ಯ ಎಲ್ಲವು ಹತೋಟಿಯಲ್ಲಿದೆ. ಗ್ರಾಮದಲ್ಲಿ ಒರ್ವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಮಾಹಿತಿ ಹಂಚಿದ್ದ. ಇದರಿಂದಾಗಿ ಬೆಳಿಗ್ಗೆ ಗಲಾಟೆಯಾಗಿತ್ತು ಎಂದರು.
ಇದನ್ನೂ ಓದಿ: ಕಲಬುರಗಿ: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ: ಮೂವರಿಗೆ ಕಡ್ಡಾಯ ನಿವೃತ್ತಿ
ಸದ್ಯ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡುತ್ತೇವೆ. ಗಣೇಶ ಕಟ್ಟೆ ವಿವಾದ ತಾಲೂಕಾಡಳಿತ ಬಗೆ ಹರಿಸಿದೆ. ಎರಡೂ ಕಡೆಯವರು ಒಪ್ಪಿಗೆ ನೀಡಿದ್ದಾರೆ. ಅದು ಸ್ಥಳೀಯ ಪಂಚಾಯತ್ಗೆ ಸೇರಿದ ಜಾಗ ಎಂದು ಗುರುತಿಸಲಾಗಿದೆ. ಆದರೆ ಈ ಬಗ್ಗೆ ಪ್ರಚೋದಕಾರಿ ಮಾಹಿತಿ ಹಂಚಿದ್ದರಿಂದ ಗಲಾಟೆಯಾಗಿದೆ ಎಂದರು.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ