ಕೊರೊನಾ ಲೋನ್ ಹೆಸರಲ್ಲಿ ವಂಚನೆ: ಜನರಿಗೆ 11 ಕೋಟಿ ಪಂಗನಾಮ, ಇನ್ನೂ ಆರೋಪಿಗಳ ಬಂಧನವಾಗಿಲ್ಲ
kalaburagi bhovi development corporation: ಪಾಸ್ ಬುಕ್ ಹಿಡಿದು ಮುಂದೇನು ಮಾಡೋದು, ಸಾಲ ಮರಳಿಸಿ ಅಂದ್ರೆ ನಾವು ಹೇಗೆ ಕಟ್ಟೋದು ಅನ್ನೋ ಚಿಂತೆಯಲ್ಲಿದ್ದಾರೆ, ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ನಿವಾಸಿಗಳು. ಅದಕ್ಕೆ ಕಾರಣ...
ಕೊರೊನಾದಿಂದ (Coronavirus) ಇಡೀ ಜಗತ್ತೇ ತಲ್ಲಣಗೊಂಡಿದೆ. ಕೊರೊನಾ ಅಂದ್ರೆ ಸಾಕು ಕೆಲ ಜನರು ಇನ್ನೂ ಬೆಚ್ಚಿಬೀಳ್ತಿದ್ದಾರೆ. ಯಾಕೆಂದರೆ ಇದೇ ಕೊರೊನಾ ಹೆಸರಲ್ಲಿ ಕೆಲವರು ನೂರಾರು ಜನರಿಗೆ ಮೋಸ ಮಾಡಿದ್ದಾರೆ. ಕಲಬುರಗಿ ಬೋವಿ ಅಭಿವೃದ್ದಿ ನಿಗಮದಿಂದ (kalaburagi bhovi development corporation) ಸಾಮಾನ್ಯ ಜನರಿಗೆ ಕೊರೊನಾ ಲೋನ್ (Loan) ಕೊಡಿಸ್ತೇನೆ ಅಂತ ಹೇಳಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿಯಲಾಗಿದೆ (Fraud). ಹೌದು ಆ ಜನರ ಪಾಸ್ ಬುಕ್ ಗೆ ಜಮೆಯಾಗಿದ್ದು ಹತ್ತು ಲಕ್ಷ. ಆದ್ರೆ ಅನೇಕರಿಗೆ ಬಿಡಿಗಾಸು ಸಿಕ್ಕಿಲ್ಲಾ. ಸಾಮಾನ್ಯ ಜನರ ಹೆಸರಲ್ಲಿ ಲೋನ್ ಮಂಜೂರಾಗಿದೆ. ಆದ್ರೆ ಲೋನ್ ಹಣ ಹೋಗಿದ್ದು ಮಾತ್ರ ಬೇರೆಯವರ ಅಕೌಂಟ್ ಗೆ. ಹೀಗಾಗಿ ಬಡಜನರು ಕಂಗಾಲಾಗಿದ್ದಾರೆ.
ಕೈಯಲ್ಲಿ ಬ್ಯಾಂಕ್ ಪಾಸ್ ಬುಕ್ ಹಿಡಿದು ಮುಂದೇನು ಮಾಡೋದು, ಸಾಲ ಮರಳಿಸಿ ಅಂದ್ರೆ ನಾವು ಹೇಗೆ ಕಟ್ಟೋದು ಅನ್ನೋ ಚಿಂತೆಯಲ್ಲಿರುವ ಇವರೆಲ್ಲಾ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ನಿವಾಸಿಗಳು. ಇವರಿಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತದಾಗಿದೆ. ಅದಕ್ಕೆ ಕಾರಣ, ಇವರ ಅಕೌಂಟ್ ಗೆ ಜಮೆಯಾಗಿರುವ ಹತ್ತು ಲಕ್ಷ ಹಣ. ಹಾಗಂತ ಹತ್ತು ಲಕ್ಷ ಇವರಿಗೆ ಸಿಕ್ಕಿದೆಯಾ ಅಂದ್ರೆ? ಅದೂ ಇಲ್ಲಾ! ಕೆಲವರಿಗೆ ಸಿಕ್ಕಿದ್ದು ಕೇವಲ 25 ಸಾವಿರ ರೂಪಾಯಿ. ಇನ್ನು ಕೆಲವರಿಗೆ ಬಿಡಿಗಾಸು ಕೂಡಾ ಸಿಕ್ಕಿಲ್ಲ. ಆದರೂ ಕೂಡಾ ನಿಮ್ಮ ಅಕೌಂಟ್ ಗೆ 10 ಲಕ್ಷ ಜಮೆಯಾಗಿದೆ ಅಂತಾ ಪಾಸ್ ಬುಕ್ ನಲ್ಲಿ ದಾಖಲಾಗಿರುವುದು ಇವರ ನಿದ್ದೆಗೆಡಿಸಿದೆ.
ಕೊರೊನಾ ಲೋನ್ ಹೆಸರಲ್ಲಿ ಫ್ರಾಡ್, ಜನರಿಗೆ 11.80 ಕೋಟಿ ವಂಚಿಸಿದ್ದಾರೆ ದುರುಳರು
ಹೌದು ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ 24 ಜನರು ಸೇರಿದಂತೆ ಕಲಬುರಗಿ ಜಿಲ್ಲೆಯ 118 ಜನರಿಗೆ ಕೊರೊನಾ ಲೋನ್ ಹೆಸರಲ್ಲಿ ವಂಚನೆ ಮಾಡಲಾಗಿದೆ. ಕಾಳಗಿ ಪಟ್ಟಣದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ತಿಮ್ಮಯ್ಯ ಅನ್ನೋನು, ತನ್ನವರೂ ಸೇರಿದಂತೆ ಜಿಲ್ಲೆಯ ಅನೇಕರಿಗೆ ಯಾದಗಿರಿ ಯೆಸ್ ಬ್ಯಾಂಕ್ ಮಾನೇಜರ್ ಶಶಾಂಕ್ ಅನ್ನೋನ ಜೊತೆ ಸೇರಿ ವಂಚನೆ ಮಾಡಿದ್ದಾನೆ.
ಕಳೆದ 2022 ರಲ್ಲಿ ತಿಮ್ಮಯ್ಯ, ಕೊರೊನಾ ಲಾಕ್ ಡೌನ್ ನಿಂದಾಗಿ ಜನರು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಬೋವಿ ಅಭಿವೃದ್ದಿ ನಿಗಮದಿಂದ ನಿಮಗೆಲ್ಲಾ 50 ಸಾವಿರ ಲೋನ್ ಮಾಡಿಕೊಡ್ತಿದ್ದಾರೆ ಅಂತಾ ಹೇಳಿದ್ದಾನೆ. ಅವರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆದಿದ್ದ. ನಂತರ ಲೋನ್ ಮಾಡಲು ಹೊಸ ಸಿಮ್ ಕಾರ್ಡ್ ಬೇಕು ಅಂತ ಹೇಳಿ ಜನರಿಂದಲೇ ಸಿಮ್ ಕಾರ್ಡ್ ಸಹ ಖರೀದಿಸಿ ಪಡೆದಿದ್ದ.
ಹೀಗೆ ಪಡೆದವರ ಹೆಸರಲ್ಲಿ ಯಾದಗಿರಿ ನಗರದ ಯೆಸ್ ಬ್ಯಾಂಕ್ ಮೇ 23, 2022 ರಲ್ಲಿ ಅಕೌಂಟ್ ಮಾಡಿಸಲಾಗಿತ್ತು. ಆದ್ರೆ 2022 ರ ಮೇ 26 ರಂದು ಇವರ ಅಕೌಂಟ್ ಗೆ ಕಲಬುರಗಿ ಬೋವಿ ಅಭಿವೃದ್ದಿ ನಿಗಮ, 10 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದೆ. ಆದ್ರೆ 2022 ರ ಮೇ 27 ರಂದೇ ಇವರ ಅಕೌಂಟ್ ನಲ್ಲಿದ್ದ 10 ಲಕ್ಷ ಹಣವನ್ನು ಆರ್ ಟಿ ಜಿ ಎಸ್ ಮೂಲಕ ಯಾದಗಿರಿಯ ಸೋಮನಾಥೇಶ್ವರ ಎಂಟರಪ್ರೈಸಸ್ ಅನ್ನೋ ಕಂಪನಿಗೆ ವರ್ಗಾವಣೆ ಮಾಡಲಾಗಿದೆ.
ಆದ್ರೆ ನಿಜವಾದ ಫಲಾನುಭವಿಗಳಿಗೆ ಮಾತ್ರ ತಮ್ಮ ಅಕೌಂಟ್ ಗೆ 10 ಲಕ್ಷ ಜಮೆಯಾಗಿದ್ದು, ಹತ್ತು ಲಕ್ಷ ಬೇರೆಯವರ ಅಕೌಂಟ್ ಗೆ ಆರ್ ಟಿ ಜಿ ಎಸ್ ಮೂಲಕ ವರ್ಗಾವಣೆಯಾಗಿದ್ದರ ಬಗ್ಗೆ ಮಾಹಿತಿಯೇ ಇಲ್ಲ. ಲೋನ್ ಮಂಜೂರಾದ ನಂತರ, ಕೆಲವರು ನಿಮ್ಮ ಹೆಸರಲ್ಲಿ ಹತ್ತು ಲಕ್ಷ ಲೋನ್ ಮಂಜೂರಾಗಿದೆ ಅಂತ ಹೇಳಿದಾಗಲೇ ಫಲಾನುಭವಿಗಳಿಗೆ ಗೊತ್ತಾಗಿರುವುದು. ಹೀಗಾಗಿ ಅಕೌಂಟ್ ಪರಿಶೀಲನೆ ಮಾಡಿದಾಗ, ಗೊತ್ತಾಗಿದೆ ತಮ್ಮ ಅಕೌಂಟ್ ಗೆ 10 ಲಕ್ಷ ಜಮೆಯಾಗಿದೆ. ಹತ್ತು ಲಕ್ಷ ಹಣ ಬೇರೆಯವರಿಗೆ ವರ್ಗಾವಣೆಯಾಗಿದೆ ಅನ್ನೋದು. ಇನ್ನು ಕೆಲ ಫಲಾನುಭವಿಗಳಿಗೆ ತಿಮ್ಮಯ್ಯ ನಿಮಗೆ 30 ಸಾವಿರ ಲೋನ್ ಮಂಜೂರಾಗಿದೆ. ಐದು ಸಾವಿರ ಅಧಿಕಾರಿಗಳು ತಗೊಂಡಿದ್ದಾರೆ. 25 ಸಾವಿರ ಬಂದಿದೆ ಅಂತ ಕೆಲವರಿಗೆ 25 ಸಾವಿರ ಹಣ ನೀಡಿದ್ದಾನೆ. ಕೆಲವರಿಗೆ ಬಿಡಿಗಾಸು ಕೂಡಾ ನೀಡಿಲ್ಲ ಎಂದು ಅನ್ಯಾಯಕ್ಕೊಳಗಾದ ಅನೀಲ್ ಅಲವತ್ತುಕೊಂಡಿದ್ದಾರೆ.
ಹೌದು ತಿಮ್ಮಯ್ಯ, ಬೋವಿ ಅಭಿವೃದ್ದಿ ನಿಗಮದಲ್ಲಿ, ಉದ್ಯಮಶೀಲತೆ ಯೋಜನೆಯಡಿ 118 ಫಲಾನುಭವಿಗಳ ಹೆಸರಲ್ಲಿ ತಾನೇ ಅರ್ಜಿ ಹಾಕಿದ್ದು, ತಾನೇ ಬ್ಯಾಂಕ್ ಮ್ಯಾನೇಜರ್ ಜೊತೆ ಶಾಮೀಲಾಗಿ, ಅವರ ಹೆಸರಲ್ಲಿ ಅಕೌಂಟ್ ಮಾಡಿಸಿದ್ದಾನೆ. ಮೊದಲೇ ಫಲಾನುಭವಿಗಳ ಹೆಸರಲ್ಲಿ ಸಿಮ್ ಖರೀದಿಸಿದ್ದರಿಂದ, ಅದೇ ನಂಬರ್ ಗೆ ಬ್ಯಾಂಕ್ ಓಟಿಪಿ ಬರುವಂತೆ ಮಾಡಿ, ಅದರ ಮೂಲಕ ಅಕೌಂಟ್ ಮಾಡಿಸಿದ್ದಾರೆ. ಬೋವಿ ಅಭಿವದ್ದಿ ನಿಗಮದಿಂದ ಮಂಜೂರಾದ ಸಾಲವನ್ನು ಅದೇ ಅಕೌಂಟ್ ಗೆ ಜಮೆ ಮಾಡಿಸಿದ್ದಾರೆ.
ಲೋನ್ ಹೆಸರಲ್ಲಿ ಫಲಾನುಭವಿಗಳ ಕೆಲ ದಾಖಲಾತಿಗಳ ಮೇಲೆ ಸಹಿ ಪಡೆದಿದ್ದಾರೆ. ನಂತರ ಯಾದಗಿರಿಯ ಸೋಮನಾಥೇಶ್ವರ ಎಂಟರಪ್ರೈಸಸ್ ಗೆ ವರ್ಗಾವಣೆ ಮಾಡಿಸಿದ್ದಾರೆ. ಇನ್ನು ಉದ್ಯಮಶೀಲತಾ ಯೋಜನೆಯಡಿ 10 ಲಕ್ಷ ರೂಪಾಯಿ ಹಣವನ್ನು, ವಿವಿಧ ಉದ್ಯೋಗ ಕೈಗೊಳ್ಳಲು ಬೋವಿ ಅಭಿವೃದ್ದಿ ನಿಗಮದಿಂದ ನೀಡಲಾಗಿದೆ. ಅದರ ಪೈಕಿ ಐದು ಲಕ್ಷ ಸಬ್ಸಿಡಿ ಹಣವಿದ್ರೆ, ಐದು ಲಕ್ಷ ಹಣವನ್ನು ಫಲಾನುಭವಿಗಳು ಮರಳಿ ನೀಡಬೇಕು.
ಆದ್ರೆ ತಮ್ಮ ಅಕೌಂಟ್ ಗೆ 10 ಲಕ್ಷ ಜಮೆಯಾಗಿದ್ದರು ಕೂಡಾ, ಅನೇಕರಿಗೆ ಬಿಡಿಗಾಸು ಕೂಡಾ ಸಿಕ್ಕಿಲ್ಲ. ಮುಂದೆ ತಮಗೆ ಸಾಲ ಮರಳಿಸಬೇಕು ಅಂದ್ರೆ ತಾವು ಹೇಗೆ ಕಟ್ಟೋದು ಅನ್ನೋ ಚಿಂತೆ ಈ ಜನರನ್ನು ಕಾಡುತ್ತಿದೆ. ಬೋವಿ ಸಮಾಜದ ನೂರಾರು ಜನರು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಆದ್ರೆ ಅವರ ಮುಗ್ದತೆಯನ್ನು ದುರುಪಯೋಗ ಮಾಡಿಕೊಂಡು ತಿಮ್ಮಯ್ಯ ಮತ್ತು ಬ್ಯಾಂಕ್ ಮ್ಯಾನೇಜರ್ ಶಶಾಂಕ್ ಚೆಲ್ಲಾಟವಾಡಿದ್ದಾರೆ. ಈ ಬಗ್ಗೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಕಳೆದ ಡಿಸೆಂಬರ್ 9 ರಂದೇ ಪ್ರಕರಣ ಕೂಡಾ ದಾಖಲಾಗಿದೆ.
ಇನ್ನು ಒಂದು ಕೋಟಿಗೂ ಹೆಚ್ಚಿನ ಅವ್ಯವಹಾರದ ಪ್ರಕರಣವಾಗಿದ್ದರಿಂದ ಪ್ರಕರಣವನ್ನು ಕಾಳಗಿ ಪೊಲೀಸರು ಸಿಐಡಿ ಗಮನಕ್ಕೆ ತಂದಿದ್ದಾರೆ. ಆದ್ರೆ ಸಿಐಡಿಯಿಂದ ಯಾವುದೇ ಉತ್ತರ ಬಂದಿಲ್ಲ. ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಇತ್ತ ಅಕ್ರಮದಲ್ಲಿ ಬೋವಿ ಅಭಿವೃದ್ದಿ ನಿಗಮದ ಅಧಿಕಾರಿಗಳು ಕೂಡಾ ಶಾಮೀಲಾಗಿರುವ ಆರೋಪವಿದ್ದು, ಅಧಿಕಾರಿಗಳು, ಮಧ್ಯವರ್ತಿಗಳು, ಬ್ಯಾಂಕ್ ಸಿಬ್ಬಂದಿ ಸೇರಿಕೊಂಡೇ ಇಂತಹದೊಂದು ಅಕ್ರಮ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ಇನ್ನೊಂದಡೆ ಕೆಲವರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೂಡಾ ದೂರು ನೀಡಿದ್ದಾರೆ.
ವರದಿ: ಸಂಜಯ್, ಟಿವಿ9, ಕಲಬುರಗಿ