PSI ಪರೀಕ್ಷೆ ಹಗರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ
ಈಗಾಗಲೇ ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆ ಹಗರಣ ಬಯಲಿಗೆ ಬಂದಿದೆ. ಇಷ್ಟಾದರೂ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪರೀಕ್ಷಾ ಅಭ್ಯರ್ಥಿ ತ್ರೀಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ.
ಕಲಬುರಗಿ, ಅ.28: ಪಿಎಸ್‌ಐ ಪರೀಕ್ಷೆ ಹಗರಣ ಮಾಸುವ ಮುನ್ನವೇ ಕಲಬುರಗಿ(Kalaburagi)ಯಲ್ಲಿ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಹೌದು, ಕೆಇಎ(KEA) ವತಿಯಿಂದ ಇಂದು ಮತ್ತು ನಾಳೆ ವಿವಿಧ ಇಲಾಖೆಗಳ ಎಸ್ಡಿಎ(SDA) ಮತ್ತುಎಫ್ಡಿಎ(FDA) ಪರೀಕ್ಷೆಯನ್ನು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಅದರಂತೆ ಇಂದು(ಅ.28) ಆಹಾರ ಮತ್ತು ಕಾರ್ಮಿಕ ಇಲಾಖೆಯ ಎಫ್‌ಡಿಎ ಪರೀಕ್ಷೆ ಇಂದು ನಡೆಯುತ್ತಿವೆ. ಈ ವೇಳೆ ಓರ್ವ ಅಭ್ಯರ್ಥಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಹಿನ್ನಲೆ ಆತನನ್ನು ಬಂಧಿಸಲಾಗಿದೆ.
ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಅರೆಸ್ಟ್
ಹೌದು, ಈಗಾಗಲೇ ರಾಜ್ಯ ಬಹುದೊಡ್ಡ ಪರೀಕ್ಷಾ ಹಗರಣ ಬಯಲಿಗೆ ಬಂದಿದೆ. ಇಷ್ಟಾದರೂ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪರೀಕ್ಷಾ ಅಭ್ಯರ್ಥಿ ತ್ರೀಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ. ಕೂಡಲೇ ತ್ರಿಮೂರ್ತಿಯನ್ನು ಬಂಧಿಸಿದ ಪೊಲೀಸರು, ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಅರ್‌ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಹಗರಣ ಬಯಲಿಗೆ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪೇಪರ್ ಲೀಕ್ ಮಾಡಿದ ತಂದೆ-ಮಗ
ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣವನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ
ಇನ್ನು ಪಿಎಸ್‌ಐ 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2021ರ ಜನವರಿ 21 ರಂದು ಅಧಿಸೂಚನೆ ಹೊರಡಿಸಲಾಗಿ, ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ನೀಡಿತ್ತು. ಬಳಿಕ ಆರೋಪಿತ 52 ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಪರೀಕ್ಷೆ ಬರೆದಿರುವು ದೃಢಪಟ್ಟಿದ್ದ ಹಿನ್ನೆಲೆ 1977ರ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳ ಪ್ರಕಾರ ಪೊಲೀಸ್ ಇಲಾಖೆ ನಡೆಸುವ ಎಲ್ಲಾ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಭಾಗವಹಿಸಲು ಶಾಶ್ವತವಾಗಿ ನಿಷೇಧಿಸಲಾಗಿತ್ತು. ಈ ಪ್ರಕರಣವನ್ನು ಜುಲೈ 4ರಂದು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇಂತಹ ಮತ್ತೊಂದು ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sat, 28 October 23