ತೃತಿಯ ರಂಗ ಸ್ಥಾಪನೆ ಮಾಡುವುದು ಸದ್ಯಕ್ಕೆ ಕಷ್ಟ ಕಷ್ಟ, ಬಿಜೆಪಿ ಮೋದಿಯ ಒನ್ ಮ್ಯಾನ್ ಪಾರ್ಟಿಯಾಗಿದೆ -ಹೆಚ್ ಡಿ ದೇವೇಗೌಡ
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮೇಕೆದಾಟು ಹೋರಾಟ ವಿಚಾರ ಪ್ರಸ್ತಾಪಿಸಿದ ದೇವೇಗೌಡರು ನೀರಾವರಿ ವಿಷಯದಲ್ಲಿ ನಾನು ಲಘುವಾಗಿ ಮಾತನಾಡಲ್ಲ. ಅರ್ಜಿ ವಿಚಾರಣೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ದಿನಾಂಕ ನಿಗದಿಯಾಗಿದೆ ಎಂದರು.
ಕಲಬುರಗಿ: ಮುಂದಿನ ವರ್ಷವೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪರ್ವ. ರಾಜ್ಯದಲ್ಲಿಯೂ ವಿಧಾನಸಭೆಗೆ ಮಹಾ ಚುನಾವಣೆ ನಡೆಯಲಿದೆ. ಹಾಗಾಗಿ ರಾಜಕೀಯ ಪಕ್ಷಗಳು ತನ್ನ ಶಕ್ತ್ಯಾನುಸಾರ ಅದಾಗಲೇ ಚುನಾವಣಾ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ರಾಜಕೀಯ ಪಕ್ಷದ ಮುಖಂಡರೂ ಟೆಸ್ಟಿಂಗ್ ದಿ ವಾಟರ್ಸ್ (Testing the Waters) ಎಂಬಂತೆ ಅಲ್ಲೊಂದು ಇಲ್ಲೊಂದು ಕಲ್ಲೆಸೆದು ಒಳಸುಳಿಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ. ಈ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ ಅಧಿನಾಯಕ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕಲಬುರಗಿಯಲ್ಲಿ ಮಾತನಾಡಿದ್ದು, ಸದ್ಯದಲ್ಲೇ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದ್ದಾರೆ.
ಇನ್ನು ರಾಷ್ಟ್ರ ರಾಜಕಾರಣದ ಚಿತ್ರಣವನ್ನು ತೆರೆದಿಟ್ಟಿರುವ ಮಾಜಿ ಪ್ರಧಾನಿ ದೇವೇಗೌಡ ದೇಶದಲ್ಲಿ ತೃತಿಯ ರಂಗ ಸ್ಥಾಪನೆ ಮಾಡುವುದು ಸದ್ಯಕ್ಕೆ ಕಷ್ಟವಿದೆ. ಪಂಚ ರಾಜ್ಯ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವ್ಯಾಖ್ಯಾನಿಸಿದ್ದಾರೆ. ತಮ್ಮ JDS ಪಕ್ಷವನ್ನು ಸರ್ವನಾಶ ಮಾಡಲು ಬಿಜೆಪಿ, ಕಾಂಗ್ರೆಸ್ ಹೊರಟಿವೆ! ಆದರೆ ಸದ್ಯದ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ. ಬಿಜೆಪಿಯನ್ನು ಈಗ ಬಿಜೆಪಿ ಅಂತ ಕರೆಯಬೇಕೋ, ಇಲ್ಲವೇ ಮೋದಿ ಪಾರ್ಟಿ ಅಂತ ಕರೆಯಬೇಕೋ ಗೊತ್ತಿಲ್ಲ. ಬಿಜೆಪಿ ಈಗ ಒನ್ ಮ್ಯಾನ್ ಪಾರ್ಟಿಯಾಗಿದೆ. ಅದರ ಮುಂದಿನ ಪರಿಣಾಮ ಏನಾಗುತ್ತೋ ಅದೂ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ನಾನು ಆಕಸ್ಮಿಕವಾಗಿ ದೆಹಲಿಗೆ ಹೋದೆ. ನಾನು ಪ್ರಧಾನಿಯಾದ ಮೇಲೆ ಜೆ.ಎಚ್. ಪಟೇಲ್, ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸಿದರು. ಅಂದಿನಿಂದ ರಾಜ್ಯದಲ್ಲಿ ಜನತಾದಳ ನಿಧಾನವಾಗಿ ವರ್ಚಸ್ಸು ಕಳೆದುಕೊಂಡಿತು. ಈ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ದೇವೇಗೌಡ ಹೇಳಿದರು. ರಾಮನಗರದಲ್ಲಿ ಸಾರ್ವಜನಿಕ ವೇದಿಕೆಯ ಮೇಲೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಣ ಗಲಾಟೆ ವಿಚಾರವಾಗಿ ಮಾತನಾಡಿದ ದೇವೇಗೌಡರು ಈ ರೀತಿಯ ಘಟನೆ ಆಗಬಾರದು. ಎರಡು ರಾಷ್ಟ್ರೀಯ ಪಕ್ಷದ ನಾಯಕರು ಈ ರೀತಿ ವರ್ತಿಸಬಾರದು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮೇಕೆದಾಟು ಹೋರಾಟ ವಿಚಾರ ಪ್ರಸ್ತಾಪಿಸಿದ ದೇವೇಗೌಡರು ನೀರಾವರಿ ವಿಷಯದಲ್ಲಿ ನಾನು ಲಘುವಾಗಿ ಮಾತನಾಡಲ್ಲ. ಅರ್ಜಿ ವಿಚಾರಣೆ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ದಿನಾಂಕ ನಿಗದಿಯಾಗಿದೆ. ಮೇಕೆದಾಟು ವಿಚಾರದಲ್ಲಿ ವರ್ಚಸ್ಸು ಹೆಚ್ಚಳಕ್ಕೆ ಈಗ ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ? ಫಲ ಸಿಗುತ್ತೆ ಅಂತ ಮಾಡ್ತಿದ್ದಾರೆ, ಆದ್ರೆ ಅದು ಸುಲಭವಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
Published On - 11:56 am, Wed, 5 January 22