ನೂರಾರು ವರ್ಷದಿಂದ ನೆಲೆ ಕಂಡಿದ್ದ ಒಂದಿಡೀ ಗ್ರಾಮವನ್ನೇ ಮಾರಾಟಕ್ಕೆ ಇಟ್ಟಿರೋ ಜನ, ಯಾಕೆ?
ಕಲಬುರಗಿಯ ಅಫಜಲಪುರದ ಹೀರು ನಾಯಕ ತಾಂಡಾ ನಿವಾಸಿಗಳ ಸ್ಥಿತಿ ಹೇಳತೀರದ್ದು, ಕಲ್ಲೇ ಇರಲಿ.. ಮುಳ್ಳೇ ಸಿಗಲಿ.. ರಸ್ತೆಯಲ್ಲಿ ನೀರು ನಿಂತು, ದಾರಿಯೇ ಮಾಯವಾಗಲಿ.. ಅದ್ವಾನ ಆಗಿರುವ ಹಾದಿಯಲ್ಲೇ ಹೆಜ್ಜೆ ಹಾಕಬೇಕಾದ ಸ್ಥಿತಿ ಇವ್ರದ್ದು.
ಕಲಬುರಗಿ: ಅದು ಕರ್ನಾಟಕದ ಗಡಿಯಲ್ಲಿರುವ ತಾಂಡಾ. ನೂರಾರು ವರ್ಷದಿಂದ ಅವರು ಆ ತಾಂಡದಲ್ಲಿದ್ದಾರೆ.. ಆದ್ರೀಗ, ಎಲ್ರೂ ಆ ತಾಂಡವನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ರಸ್ತೆಯಿಲ್ಲದ್ದಕ್ಕೆ ಮನೆಯನ್ನೇ ಮಾರಿ, ಬೇರೆಡೆ ಹೋಗುವ ಮಾತನಾಡ್ತಿದ್ದಾರೆ.
ಕಲಬುರಗಿಯ ಅಫಜಲಪುರದ ಹೀರು ನಾಯಕ ತಾಂಡಾ ನಿವಾಸಿಗಳ ಸ್ಥಿತಿ ಹೇಳತೀರದ್ದು, ಕಲ್ಲೇ ಇರಲಿ.. ಮುಳ್ಳೇ ಸಿಗಲಿ.. ರಸ್ತೆಯಲ್ಲಿ ನೀರು ನಿಂತು, ದಾರಿಯೇ ಮಾಯವಾಗಲಿ.. ಅದ್ವಾನ ಆಗಿರುವ ಹಾದಿಯಲ್ಲೇ ಹೆಜ್ಜೆ ಹಾಕಬೇಕಾದ ಸ್ಥಿತಿ ಇವ್ರದ್ದು. ಮನವಿ ಮಾಡಿದ್ದಾಯ್ತು.. ಪರಿ ಪರಿಯಾಗಿ ಬೇಡಿದ್ದಾಯ್ತು.. ಮನೆಗಳನ್ನೇ ಮಾರಾಟಕ್ಕಿಟ್ಟು, ಇಲ್ಲಿಂದ ಬಿಡುಗಡೆ ನೀಡಿ ಅಂತ ಕೋರುತ್ತಿದ್ದಾರೆ. ಹೀರು ನಾಯಕ ತಾಂಡಾ ನಿವಾಸಿಗಳು ನೂರೈವತ್ತು ವರ್ಷಗಳಿಂದಲೂ ಇಲ್ಲೇ ವಾಸವಿರುವ ಇವ್ರಿಗೆ ಕಾಡು ಪ್ರಾಣಿಗಳ ಭಯವಿಲ್ಲ. ಕಳ್ಳಕಾಕರ ಸಮಸ್ಯೆಯೂ ಇಲ್ಲ. ಆದ್ರೆ, ತಾಂಡಕ್ಕೆ ಸೂಕ್ತ ರಸ್ತೆಯಿಲ್ಲದೆ ಇವರು ಪರದಾಡ್ತಿದ್ದಾರೆ.
ತಾಂಡದಲ್ಲಿ ಐನೂರಕ್ಕೂ ಹೆಚ್ಚು ಜನರಿದ್ದಾರೆ. ಆದ್ರೆ, ಅಫಜಲಪುರ, ಕಲಬುರಗಿ ಸೇರಿದಂತೆ ಬೇರೆ ಕಡೆಗೆ ಹೋಗಲು ಇವ್ರಿಗೆ ಸೂಕ್ತ ರಸ್ತೆಯಿಲ್ಲ. ಕಾಲು ದಾರಿಯೂ ಕಲ್ಲು, ಮುಳ್ಳುಗಳಿಂದ ಕೂಡಿದೆ. ಇನ್ನು, ತಾಂಡಾದಲ್ಲಿ ಐದನೇ ತರಗತಿತನಕ ಮಾತ್ರ ಶಾಲೆಯಿದೆ. ಆರನೇ ತರಗತಿಗೆ ಹೋಗ್ಬೇಕು ಅಂದ್ರೆ, ಬಳೂರು ಗ್ರಾಮಕ್ಕೆ ಹೋಗ್ಬೇಕು. ಆದ್ರೆ, ಸೂಕ್ತ ರಸ್ತೆಯಿಲ್ಲದೆ ಎರಡು ಕಿಲೋ ಮೀಟರ್ ನಡ್ಕೊಂಡೇ ಮಕ್ಕಳು ಹೋಗುವಂತಾಗಿದೆ. ಇನ್ನು, ಗ್ರಾಮಕ್ಕೆ ಆ್ಯಂಬುಲೆನ್ಸ್ಗಳು ಕೂಡ ಬರೋಲ್ಲ. ಯಾರಿಗಾದ್ರೂ ಅನಾರೋಗ್ಯ ಸಮಸ್ಯೆ ಉಂಟಾದ್ರೆ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡ್ರಂತೂ ಇವರ ಪಾಡು ಅಷ್ಟಿಷ್ಟಲ್ಲ.
ರಸ್ತೆ ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹತ್ತಾರು ಸಲ ಮನವಿ ಮಾಡಿದ್ರೂ ಏನೂ ಪ್ರಯೋಜನವಾಗಿಲ್ಲ. ಸದ್ಯ, ನಂದರಗಿ ಗ್ರಾಮದಿಂದ ಹೀರು ನಾಯಕ ತಾಂಡಾದ ಮೇಲೆ ಹಾದು ಬಳೂರಗಿಗೆ ಹೋಗಲು ರಸ್ತೆ ಮಂಜೂರು ಆಗಿದೆಯಂತೆ. ಆದ್ರೆ ಅದಕ್ಕೂ ಕೆಲವರು ಅಡ್ಡಿಪಡಿಸ್ತಿದ್ದಾರಂತೆ. ಹೀಗಾಗಿ, ಗ್ರಾಮಸ್ಥರೆಲ್ಲ ಪ್ರತಿಭಟನೆ ನಡೆಸ್ತಿದ್ದಾರೆ. ಮನೆಗಳ ಮೇಲೆ ಮಾರಾಟಕ್ಕಿದೆ ಅಂತ ಬರೆದು, ಈ ಸಮಸ್ಯೆಯಿಂದ ದೂರಾದ್ರೆ ಸಾಕು ಅನ್ನುತ್ತಿದ್ದಾರೆ. ಇನ್ನು, ನಿತ್ಯ ಕಲ್ಲು ಮಳ್ಳುಗಳ ದಾರಿ ಸೆವೆಸುತ್ತಿರುವ ವಿದ್ಯಾರ್ಥಿಗಳು, ಸೂಕ್ತ ರಸ್ತೆಗಾಗಿ ಆಗ್ರಹಿಸಿದ್ದಾರೆ.
ಒಟ್ನಲ್ಲಿ, ಹೀರು ನಾಯಕ ತಾಂಡಾ, ಕರ್ನಾಟಕದ ಗಡಿಯಲ್ಲಿರುವ ತಾಂಡಾ. ಒಂದಡೆ ಸರ್ಕಾರ ಗಡಿಬಾಗದ ಕನ್ನಡಿಗರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದ್ದೇವೆ ಅಂತ ಹೇಳುತ್ತದೆ. ಆದ್ರೆ, ಇವರ ಸಂಕಷ್ಟವನ್ನ ಮಾತ್ರ ಯಾರೂ ಕೇಳುತ್ತಿಲ್ಲ. ಕನಿಷ್ಠ ಸೂಕ್ತ ರಸ್ತೆ ನಿರ್ಮಾಣವನ್ನೂ ಮಾಡ್ಕೊಡ್ತಿಲ್ಲ.
ವರದಿ: ಸಂಜಯ್.ಟಿವಿ9 ಕಲಬುರಗಿ
ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ದರ ವಿವರ ಪರಿಶೀಲಿಸಿ
Published On - 7:31 am, Fri, 24 December 21