ಸೂಲಿಬೆಲೆಗೆ ಕಲಬುರಗಿ ಜಿಲ್ಲಾ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಕೋರ್ಟ್
ಕಲಬುರಗಿ ಜಿಲ್ಲಾ ಪ್ರವೇಶಕ್ಕೆ ಚಕ್ರವರ್ತಿ ಸೂಲೆಬೆಲೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿದೆ. ಈ ಮೂಲಕ ಚಕ್ರವರ್ತಿ ಸೂಲೆಬೆಲೆ ಕಾನೂನು ಸಮರದಲ್ಲಿ ಗೆದ್ದಿದ್ದಾರೆ.
ಕಲಬುರಗಿ (ಫೆಬ್ರವರಿ 29): ಕಲಬುರಗಿ ಜಿಲ್ಲೆಗೆ(Kalaburagi District) ಚಕ್ರವರ್ತಿ ಸೂಲಿಬೆಲೆ(chakravarthy sulibele) ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಕಲಬುರಗಿ ಹೈಕೋರ್ಟ್ (Kalaburagi high Court) ತೆರವುಗೊಳಿಸಿದೆ. ಚಿತ್ತಾಪುರದಲ್ಲಿಂದು ನಮೋ ಬ್ರಿಗೆಡ್ ಆಯೋಜಿಸಿರುವ ಕಾರ್ಯಕ್ರಮಕ್ಕೆ ತಾಲೂಕ ಆಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆಗೆ ಎಂಟ್ರಿಯಾಗದಂತೆ ನಿರ್ಬಂಧ ವಿಧಿಸಲಾಗಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ, ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್, ಸೂಲಿಬೆಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಂತೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ಬೀದರ್ ಜಿಲ್ಲೆಯ ಬಾಲ್ಕಿಯಿಂದ ಕಲಬುರಗಿ ಜಿಲ್ಲೆಯೊಳಗೆ ಆಗಮಿಸಲು ಚಕ್ರವರ್ತಿ ಸೂಲಿಬಲೆ ಅವರಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಸೂಲಿಬೆಲೆ ಅವರ ಪ್ರಚೋದನಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಜೌರ್ ಅವರು ಆದೇಶ ಹೊರಡಿಸಿದ್ದು. ಮಧ್ಯರಾತ್ರಿ 12 ಗಂಟೆಗೆ ಸುಮಾರಿಗೆ ಸೂಲಿಬೆಲೆ ಅವರನ್ನು ತಡೆದ ಕಮಲಾಪೂರ ಪೊಲೀಸರು, ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡದೇ ಮರಳಿ ಬೀದರ್ ಕಡೆಗೆ ಕಳುಹಿಸಿದ್ದರು. ಈ ವೇಳೆ ಸೂಲಿಬೆಲೆ ಮತ್ತು ಪೋಲಿಸರ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಕಮಲಾಪೂರ ಬಳಿ ಮಧ್ಯರಾತ್ರಿ ನಾಟಕೀಯ ಪ್ರಹಸನ ನಡೆದಿತ್ತು.
ಇಂದು(ಫೆಬ್ರವರಿ 29) ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರ ಚಿತ್ತಾಪುರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ, ನಿನ್ನೆ(ಫೆ.28) ಅನುಮತಿಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಸೂಲಿಬೆಲೆ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕೆಂಡಾಮಂಡಲರಾಗಿದ್ದರು. ಖರ್ಗೆ ಫೈಟರ್. ಆದರೆ ಅವರು ನಿಜವಾದ ಹಿಟ್ ಆ್ಯಂಡ್ ರನ್ ಮಾಸ್ಟರ್ ಎಂದು ನಾನು ಭಾವಿಸಿದ್ದೇನೆ. ಕೂಟದ ಮುಂದೆ ಮಾತನಾಡುವುದು ಸುಲಭ.ಆದ್ರೆ, ಸಮೂಹವನ್ನು ಎದುರಿಸುವುದು ಕಷ್ಟ ಎಂದು ಟ್ವಿಟ್ಟರ್ ಎಕ್ಸ್ನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:36 pm, Thu, 29 February 24