ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಉಸ್ತುವಾರಿ ಅವಧಿಯಲ್ಲಿ ಕೊಲೆ ಸುಲಿಗೆಗಳದ್ದೇ ದರ್ಬಾರು: ಬಿಜೆಪಿ ಕಿಡಿ
ಕಲಬುರಗಿ ಸಂಸದ ಉಮೇಶ್ ಜಾಧವ್ ಆಪ್ತ ಗಿರೀಶ್ ಚಕ್ರ ಕೊಲೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಟ್ರೋಲ್ ಮಿನಿಸ್ಟರ್ ಎಂದು ಪ್ರಿಯಾಂಕ ಖರ್ಗೆ ಅವರನ್ನು ಲೇವಡಿ ಮಾಡಿರುವ ಬಿಜೆಪಿ, ಇವರ ಉಸ್ತುವಾರಿಯಲ್ಲಿ ಜಿಲ್ಲೆಯಲ್ಲಿ ಕೊಲೆ ಮತ್ತು ಸುಲಿಗೆಗಳ ದರ್ಬಾರ್ ನಡೆಯುತ್ತಿದೆ ಎಂದು ಟೀಕಿಸಿದೆ.
ಬೆಂಗಳೂರು, ಮಾರ್ಚ್ 1: ಕಲಬುರಗಿ ಸಂಸದ ಉಮೇಶ್ ಜಾಧವ್ ಬೆಂಬಲಿಗ, ಬಿಜೆಪಿ ಮುಖಂಡ ಗಿರೀಶ್ ಚಕ್ರ (Girish Chakra) ಕೊಲೆಯಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕರ್ನಾಟಕ ಬಿಜೆಪಿ (BJP) ವಾಗ್ದಾಳಿ ನಡೆಸಿದೆ. ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಉಸ್ತುವಾರಿ ಅವಧಿಯಲ್ಲಿ ಜಿಲ್ಲೆಯಲ್ಲಿ ಕೊಲೆ ಸುಲಿಗೆಗಳದ್ದೇ ದರ್ಬಾರು ನಡೆಯುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
‘ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿ ಅವಧಿಯಲ್ಲಿ ಕಲಬುರಗಿಯಲ್ಲಿ ಕೇವಲ ಕೊಲೆ-ಸುಲಿಗೆಗಳದ್ದೇ ದರ್ಬಾರು. ಪ್ರಿಯಾಂಕ್ ಉಸ್ತುವಾರಿ ಸಚಿವರಾದ ಈ 10 ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದಾರೆ. ಇದಕ್ಕೆ ಕಲಬುರಗಿಯನ್ನು ತಮ್ಮ ಪುಂಡ ಪೋಕರಿ ಪಟಾಲಂಗೆ ಒಪ್ಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರೇ ನೇರ ಹೊಣೆ. ಮಹಾಂತಪ್ಪ ಆಲೂರೆಯವರ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಮುಖಂಡ ಗಿರೀಶ್ ಚಕ್ರರವರನ್ನು ಸಹ ಹತ್ಯೆಗೈಯಲಾಗಿದೆ’ ಎಂದು ಬಿಜೆಪಿ ಉಲ್ಲೇಖಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ಹಳ್ಳ ಹಿಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಮೊದಲು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ.
ಗಿರೀಶ್ ಚಕ್ರ ಅವರನ್ನು ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಸಲಹಾ ಸಮಿತಿ ನಿರ್ದೇಶಕರನ್ನಾಗಿ ಗಿರೀಶ್ ಅವರನ್ನು ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ನಂಬಿಸಿ ಗಿರೀಶ್ ಚಕ್ರ ಅವರನ್ನು ಸ್ನೇಹಿತರೇ ಜಮೀನಿಗೆ ಕರೆಸಿದ್ದರು. ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಗಿರೀಶ್ ಚಕ್ರ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಂಸದ ಉಮೇಶ್ ಜಾಧವ್ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜತೆಗೆ, ಗಿರೀಶ್ ಚಕ್ರ ಅಗಲುವಿಕೆಗೆ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.
ಕಲಬುರಗಿಯಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಉಮೇಶ್ ಜಾಧವ್
ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ ಅನ್ನೊದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸರ್ಕಾರ ವಿರುದ್ದ ಉಮೇಶ್ ಜಾಧವ್ ಕಿಡಿಕಾರಿದ್ದಾರೆ. ಗಿರೀಶ್ನನ್ನು ಪಾರ್ಟಿಗೆಂದು ಕರೆದು ಹತ್ಯೆ ಮಾಡಿದ್ದಾರೆ. ಸಾಗನೂರು ಗ್ರಾಮದ ಜಮೀನಿನಲ್ಲಿ ಹತ್ಯೆ ಮಾಡಿದ್ದಾರೆ. ವನ ರಾಜಕೀಯ ಏಳಿಗೆ ಸಹಿಸದೇ ಹೀಗೆ ಮಾಡಿದ್ದಾರೆ. ಕೂಡಲೇ ಕೊಲೆಗಾರರನ್ನ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ
ಗಿರೀಶ್ ಚಕ್ರ ನನ್ನ ಮಗನಿದ್ದಂತೆ. ಆತನ ಹತ್ಯೆ ನನಗೆ ದಿಗ್ಭ್ರಮೆ ಮೂಡಿಸಿದೆ. ಕಳೆದ ಹತ್ತು ವರ್ಷಗಳಿಂದ ಗಿರೀಶ್ ನನ್ನ ಜೊತೆಗಿದ್ದು ಕೆಲಸ ಮಾಡಿದವನು. ಹಗಲಿರುಳು ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದವನು ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ