ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರ ಹತ್ಯೆ, ಅನೈತಿಕ ಸಂಬಂಧದ ವಾಸನೆ, ಫೋನ್ ಬಂತು ಅಂತಾ ಮನೆಯಿಂದ ಹೊರಹೋಗಿದ್ದ!

Illicit relation: ಹತ್ಯೆಗೀಡಾದ ಯುವಕ ಸಂತೋಷನಿಗೆ ಮದುವೆ ನಿಶ್ಚಿತಾರ್ಥ ಆಗಿತ್ತಂತೆ. ಆದ್ರೆ ಮದುವೆ ಮಾಡಿಕೊಂಡು ವೈವಾಹಿಕ ಜೀವನ ನಡೆಸಬೇಕಿದ್ದ ಸಂತೋಷ್ ಕೊಲೆಯಾಗಿದ್ದಾನೆ. ಇನ್ನು ಸಂತೋಷ್ ಕೊಲೆಯ ಹಿಂದೆ, ಮಹಿಳೆಯ ಹೆಸರು ಹರಿದಾಡುತ್ತಿದೆ. 

ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರ ಹತ್ಯೆ, ಅನೈತಿಕ ಸಂಬಂಧದ ವಾಸನೆ, ಫೋನ್ ಬಂತು ಅಂತಾ ಮನೆಯಿಂದ ಹೊರಹೋಗಿದ್ದ!
ಮದುವೆ ನಿಶ್ಚಯವಾಗಿದ್ದ ಯುವಕ ಬರ್ಬರ ಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 10, 2023 | 10:18 AM

ಆತ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದ್ರೆ ಮೊನ್ನೆ ಶನಿವಾರ ಯಾರದ್ದೋ ಪೋನ್ ಬಂತು ಅಂತ ಮನೆಯಿಂದ ಹೊರಹೋಗಿದ್ದ. ಆದ್ರೆ ನಿನ್ನೆ ಭಾನುವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾನೆ. ಮದುವೆ ನಿಶ್ಚಯವಾಗಿದ್ದ (Wedding) ಯುವಕ ಬರ್ಬರ ಕೊಲೆಯಾಗಿದ್ದಾನೆ (Murder). ಯುವಕನ ಕೊಲೆಯ ಹಿಂದೆ ಅನೈತಿಕ ಸಂಬಂಧದ ವಾಸನೆ ಹರಿದಾಡುತ್ತಿದೆ. ಮತ್ತೊಂದಡೆ ಮನೆಗೆ ಆಧಾರವಾಗಿದ್ದ ಯುವಕನನ್ನು (Youth) ಕಳೆದುಕೊಂಡು ಗೋಳಾಡುತ್ತಿರುವ ಮಹಿಳೆಯರು. ದಿಕ್ಕೇ ತೋಚದಂತೆ ನಿಂತಿರುವ ಕುಟುಂಬದವರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ಸೊನ್ನ ಗ್ರಾಮದಲ್ಲಿ. ಅಷ್ಟಕ್ಕೂ ಇವರ ನೋವಿಗೆ ಕಾರಣ ಯುವಕನೋರ್ವನ ಕೊಲೆ (Kalaburgi News).

ಹೌದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಜನರು ಬೆಚ್ಚಿಬಿದ್ದಿದ್ದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಸಮೀಪ ಹೋಗಿ ನೋಡಿದಾಗ ಗೊತ್ತಾಗಿದ್ದು ಅದು ಇದೇ ಸೊನ್ನ ಗ್ರಾಮದ ಸಂತೋಷ್ ಹೆಗಡೆ ಅನ್ನೋ ಯುವಕನದ್ದು ಅನ್ನೋದು. ಹೌದು 25 ವರ್ಷದ ಸಂತೋಷ್ ಶನಿವಾರ ಮುಂಜಾನೆ ಮನೆಯಿಂದ ಹೊರಹೋಗಿದ್ದ. ಯಾರೋ ಪೋನ್ ಮಾಡಿದ್ದರು. ಹೋಗಿ ಬರ್ತೇನೆ ಅಂತ ಹೇಳಿ ಸಂತೋಷ್ ಹೋಗಿದ್ದ. ನಂತರ ಮಧ್ಯಾಹ್ನ ಕರೆ ಮಾಡಿದಾಗ, ಫೋನ್ ರಿಸೀವ್ ಮಾಡಿದ್ದ ಸಂತೋಷ್. ಮನೆಗೆ ಬರ್ತೇನೆ ಅಂತಾನೂ ಹೇಳಿದ್ದನಂತೆ.

ಆದ್ರೆ ಸಂಜೆ ಕಾಲ್ ಮಾಡಿದಾಗ, ಸಂತೋಷ್ ಪೋನ್ ರಿಂಗ್ ಆಗುತ್ತಿದ್ದರೂ ಕೂಡಾ ಫೋನ್ ರಿಸೀವ್ ಮಾಡಿರಲಿಲ್ಲಾ. ಹೀಗಾಗಿ ಕುಟುಂಬದವರು ಎಲ್ಲಾದರೂ ಹೋಗಿರಬಹುದು, ಬರ್ತಾನೆ ಅಂತ ಸುಮ್ಮನಾಗಿದ್ದರು. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದಾನೆ. ಸಂತೋಷ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೆಲವೆಡೆ ಮಾರಕಾಸ್ತ್ರದಿಂದ ಇರಿದಿದ್ದಾರೆ. ಕಲ್ಲಿನಿಂದ ಜಜ್ಜಿದ್ದಾರೆ. ಬರ್ಬರ ಕೊಲೆ ಮಾಡಿದ್ದ ದುಷ್ಕರ್ಮಿಗಳು, ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶವ ಬಿಟ್ಟು ಪರಾರಿಯಾಗಿದ್ದಾರೆ.

ಇನ್ನು ಸಂತೋಷ್, ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲ ತಿಂಗಳ ಹಿಂದೆ ಮದುವೆ ನಿಶ್ಚಿತಾರ್ಥ ಕೂಡಾ ಆಗಿತ್ತಂತೆ. ಕೆಲವೇ ತಿಂಗಳಲ್ಲಿ ಮದುವೆ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದರಂತೆ. ಆದ್ರೆ ಮದುವೆ ಮಾಡಿಕೊಂಡು ವೈವಾಹಿಕ ಜೀವನ ನಡೆಸಬೇಕಿದ್ದ ಸಂತೋಷ್ ಕೊಲೆಯಾಗಿದ್ದಾನೆ. ಇನ್ನು ಸಂತೋಷ್ ಕೊಲೆಯ ಹಿಂದೆ, ಮಹಿಳೆಯ ಹೆಸರು ಹರಿದಾಡುತ್ತಿದೆ.

ಮತ್ತಷ್ಟು ಓದಿ: Delhi: ಕರ್ಕಶ ಸಂಗೀತ ನಿಲ್ಲಿಸಲು ಕೇಳಿದ್ದಕ್ಕೆ ಗರ್ಭಿಣಿಯ ಮೇಲೆ ನಡೆಯಿತು ಗುಂಡಿನ ದಾಳಿ, ಸ್ಥಳದಲ್ಲೇ ಗರ್ಭಪಾತ

ಹೌದು ಇದೇ ಸೊನ್ನ ಗ್ರಾಮದಲ್ಲಿರುವ ವಿವಾಹಿತ ಮಹಿಳೆ, ಸಂತೋಷ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಸಂತೋಷ್ ನಿಗೆ ಬೆದರಿಸಿ, ತನ್ನ ಜೊತೆ ಸಂಬಂಧ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ, ನಿಮ್ಮ ಮನೆಯವರಿಗೆ ನಮ್ಮ ಸಂಬಂಧದ ಬಗ್ಗೆ ಹೇಳ್ತೇನೆ ಅಂತ ಬೆದರಿಕೆ ಕೂಡಾ ಹಾಕಿದ್ದಳಂತೆ. ನಿನ್ನೆ ಅದೇ ಮಹಿಳೆಯೇ ಕಾಲ್ ಮಾಡಿ ಕರೆಸಿಕೊಂಡು ಕೊಲೆ ಮಾಡಿರಬಹುದು ಅನ್ನೋ ಅನುಮಾನ ಕುಟುಂಬದವರನ್ನು ಕಾಡುತ್ತಿದೆ.

ಸದ್ಯ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊನೆಯ ಕರೆ ಮಾಡಿದವರು ಯಾರು, ನಂತರ ಯಾರೆಲ್ಲಾ ಸೇರಿ ಕೊಲೆ ಮಾಡಿದ್ದಾರೆ ಅನ್ನೋದನ್ನು ಪತ್ತೆ ಮಾಡುತ್ತಿದ್ದಾರೆ. ಆದ್ರೆ ಬಾಳಿ ಬದುಕಬೇಕಿದ್ದ ಯುವಕ, ಬರ್ಬರ ಕೊಲೆಯಾಗಿರುವದು ಮಾತ್ರ ದುರಂತವೇ ಸರಿ.

ವರದಿ: ಸಂಜಯ್, ಟಿವಿ9, ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 am, Mon, 10 April 23