ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; ಗಾಯಗೊಂಡ 10 ಜನರ ಪೈಕಿ ಓರ್ವ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 21, 2024 | 9:50 PM

ಕಲಬುರಗಿ ನಗರದ ಸಪ್ತಗಿರಿ ಆರೆಂಜ್ ಹೋಟೆಲ್‌ನಲ್ಲಿ ಕಾರ್ಮಿಕರೆಲ್ಲರೂ ಎಂದಿನಂತೆ ಬೆಳಗಿನ ಜಾವದ ಉಪಹಾರ ಸಿದ್ದತೆಯಲ್ಲಿ ತೊಡಗಿದ್ದರು. ಉಪಹಾರ ಮಾಡಲು ಸಿಲಿಂಡರ್ ಆನ್ ಮಾಡಿದ್ದಾರೆ. ಈ ವೇಳೆ ಸಿಲಿಂಡರ್ ಲೀಕೇಜ್ ವಾಸನೆ ಬಂದ ತಕ್ಷಣ ಹೊರಗಡೆ ಓಡೋಡಿ ಬಂದಿದ್ದಾರೆ. ಕೆಲಕ್ಷಣದ ನಂತರ ಮತ್ತೆ ಕಿಚನ್‌ಗೆ ಹೋಗಿದ್ದಾರೆ. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡು ಹೋಟೆಲ್ ಛಿದ್ರಗೊಂಡಿದ್ದು, ಹತ್ತು ಜನ ಗಂಭೀರ ಗಾಯಗೊಂಡಿದ್ದರೆ, ನಾಲ್ವರ ಸ್ಥಿತಿ ಚಿಂತಾಜನಕವಾಗಿತ್ತು. ಇದೀಗ ಅವರಲ್ಲಿ ಓರ್ವ ವ್ಯಕ್ತಿ ಚಿಕಿತ್ಸೆ ಫಲಿಸಿದೆ ಸಾವನ್ನಪ್ಪಿದ್ದಾನೆ.

ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; ಗಾಯಗೊಂಡ 10 ಜನರ ಪೈಕಿ ಓರ್ವ ಸಾವು
ಕಲಬುರಗಿಯ ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು
Follow us on

ಕಲಬುರಗಿ, ಜೂ.21: ಕಲಬುರಗಿ(Kalaburagi) ನಗರದ ಸಪ್ತಗಿರಿ ಆರೆಂಜ್ ಹೋಟೆಲ್‌ನಲ್ಲಿ ಇಂದು(ಶುಕ್ರವಾರ) ಬೆಳಿಗ್ಗೆ ಸಿಲಿಂಡರ್ ಸ್ಪೋಟ(Cylinder Blast)ಗೊಂಡಿದ್ದ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ 10 ಜನರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ರೋಜಾ(ಬಿ) ಬಡಾವಣೆಯ ನಿವಾಸಿ ಮಲ್ಲಿಕಾರ್ಜುನ (40) ಮೃತ ವ್ಯಕ್ತಿ. ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸಿದೆ ಕೊನೆಯುಸಿರೆಳೆದಿದ್ದಾರೆ.

ಘಟನೆ ವಿವರ

ಕಲಬುರಗಿ ನಗರದ ಜನಬೀಡ ಪ್ರದೇಶವಾದ ಅಪ್ಪಾ ಕೆರೆ ಬಳಿಯ ಸಪ್ತಗಿರಿ ಆರೆಂಜ್ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಎಂದಿನಂತೆ ಅಡುಗೆ ಸಿಬ್ಬಂದಿಗಳು ಬೆಳಗಿನ ಉಪಹಾರ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಒಂದು ಸಿಲಿಂಡರ್​ನಲ್ಲಿ ಲೀಕೇಜ್ ಕಂಡು ಬಂದತಕ್ಷಣ ಎಲ್ಲಾ ಸಿಬ್ಬಂದಿಗಳು ಹೊರಗೆ ಓಡಿಬಂದಿದ್ದಾರೆ. ಹತ್ತು ನಿಮಿಷದ ಬಳಿಕ ಸಿಬ್ಬಂದಿಗಳೆಲ್ಲ ಮತ್ತೆ ಕಿಚನ್ ರೂಂಗೆ ದೌಡಾಯಿಸಿದ್ದಾರೆ. ಈ ವೇಳೆ ಲಿಕ್ ಆಗ್ತಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದ್ದು, ಕಿಚನ್ ರೂಂನಲ್ಲಿದ ಸತ್ಯವಾನ್ ಶರ್ಮ, ರಾಕೇಶ್, ಮಹೇಶ್, ವಿಠಲ್, ಗುರುಮೂರ್ತಿ, ಅಪ್ಪರಾಯ್, ಮಲ್ಲಿನಾಥ್ ಸೇರಿದಂತೆ ಹತ್ತು ಜನ ಗಾಯಗೊಂಡಿದ್ದು, ನಾಲ್ವರು ಅಡುಗೆ ಸಿಬ್ಬಂದಿಗಳ ಸ್ಥಿತಿ ಚಿಂತಾಜನಕವಾಗಿತ್ತು.

ಇದನ್ನೂ ಓದಿ:ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಇನ್ನು ಲಿಕೇಜ್ ಆಗಿದ್ದ ಸಿಲಿಂಡರ್ ಸ್ಫೋಟದ ತೀವ್ರತೆಗೆ ಇಡೀ ಹೋಟೆಲ್ ಕಟ್ಟಡ ಧ್ವಂಸಗೊಂಡಿತ್ತು. ಕಿಡಕಿ, ಬಾಗಿಲು, ಪೀಠೋಪಕರಣ, ಎಸಿ ಸೇರಿದಂತೆ ಪ್ರತಿಯೊಂದು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸಿಲೆಂಡರ್ ಸ್ಪೋಟಕ್ಕೆ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಹತ್ತು ಜನ ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದರು. ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆ ಗಾಯಾಳುಗಳು ಹೊರಗೆ ಓಡಿಬಂದು ರಸ್ತೆ ಮೇಲೆ ನರಳಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬೆಳಗ್ಗೆ ಆರು ಗಂಟೆಗೆ ಬೆಳಗಿನ ಉಪಹಾರ ಸಿದ್ದತೆ ಮಾಡಿ 8 ಗಂಟೆಗೆ ಹೋಟೆಲ್ ಓಪನ್ ಮಾಡುತ್ತಾರೆ. ಹೀಗಾಗಿ ಹೋಟೆಲ್‌‌ನಲ್ಲಿ  ಗ್ರಾಹಕರು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.  ಗಾಯಾಳುಗಳನ್ನ ನಗರದ ಜಿಮ್ಸ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಗರ ಪೊಲೀಸ್ ಆಯುಕ್ತ ಚೇತನ್, ‘ಗ್ಯಾಸ್ ಸೋರಿಕೆಯಿಂದ ಬ್ಲಾಸ್ಟ್ ಆಗಿದೆ. ಘಟನೆ ಬಗ್ಗೆ ಅಗ್ನಿಶಾಮಕದಳ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದು, ವರದಿ ಬಂದ ನಂತರವಷ್ಟೇ ಅನಾಹುತ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆಯೆಂದು ಸ್ಪಷ್ಟಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ