
ಕಲಬುರಗಿ, ಮಾರ್ಚ್ 19: ರಾಜ್ಯದಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಅಂತಾ ಸರ್ಕಾರ ಅನ್ನಭಾಗ್ಯ ಯೋಜನೆ (Anna Bhagya Rice) ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಬಡವರ ಹೊಟ್ಟೆ ಸೇರಬೇಕಾದ ಅಕ್ಕಿಯನ್ನ ರೇಷನ್ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಅಕ್ಕಿ ಸಪ್ಲೈ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾಲೀಕರ ಕಳ್ಳಾಟ ಬಯಲಾಗಿದೆ.
ಕಲಬುರಗಿ ನಗರದ ಜೆ.ಆರ್ ನಗರದಲ್ಲಿರುವ ರೇಷನ್ ಅಂಗಡಿಯಿಂದ ಮಾರ್ಚ್ 3ರಂದು ಅಕ್ಕಿಯನ್ನ ರಾತ್ರೋರಾತ್ರಿ ಬೇರೆಡೆ ಸಪ್ಲೈ ಮಾಡಿದ್ದಾರೆ. ಸರ್ಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ. ಆದರೆ ರೇಷನ್ ಅಂಗಡಿಗಳು ಬಡವರಿಗೆ ನೀಡಬೇಕಾದ ಅಕ್ಕಿಯನ್ನ ಜನರಿಗೆ ನೀಡುವ ಬದಲು ಕಾಳಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟಕ್ಕೆ ಮುಂದಾಗಿದ್ದಾರೆ.
ಕೆಲವು ಪಡಿತರ ಚೀಟಿದಾರರಿಗೆ ಪುಡಿಗಾಸಿನ ಆಸೆ ತೋರಿಸಿ ದುಡ್ಡು ಕೊಡುತ್ತಿದ್ದಾರೆ. ಇನ್ನು ಕೆಲವರ ಥಂಬ್ ತೆಗೆದುಕೊಂಡು ಅಕ್ಕಿ ಇಲ್ಲ, ಮುಂದಿನ ತಿಂಗಳು ಕೊಡುತ್ತೇವೆ ಅಂತಾ ಹೇಳಿ ವಾಪಸ್ ಕಳುಹಿಸುತ್ತಿದ್ದಾರಂತೆ. ಆ ಮೂಲಕ ಇವರೆಲ್ಲರ ಪಾಲಿನ ಅಕ್ಕಿಯನ್ನ ಮಹಾರಾಷ್ಟ್ರ, ತೆಲಂಗಾಣಕ್ಕೆ ಸಪ್ಲೈ ಮಾಡೋದಕ್ಕೆ ಮುಂದಾಗಿದ್ದಾರೆ. ಬಡವರ ಪಾಲಿನ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ದಂಧೆಗೆ ಬ್ರೇಕ್ ಹಾಕದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಹೋರಾಟಗಾರ ಎಂಎಸ್ ಪಾಟೀಲ್ ನರಿಬೋಳ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಹಿನ್ನಲೆ ಅಕ್ಕಿ ರಫ್ತುಗೂ ಬಿತ್ತು ಬ್ರೇಕ್: ಉದ್ಯಮಿಗಳು ಕಂಗಾಲು
ಜೆ.ಆರ್ ನಗರದಲ್ಲಿರುವ ರೇಷನ್ ಅಂಗಡಿಯ ಪಡಿತರದಾರರಿಗೆ ತಿಂಗಳಿಗೆ ಸರಿಯಾಗಿ ರೇಷನ್ ವಿತರಿಸುವುದಿಲ್ಲವಂತೆ. ಯಾರಾದರು ಜೋರು ಮಾಡಿ ಕೇಳಿದರೆ ರೇಷನ್ ಕಾರ್ಡ್ ಕಟ್ ಮಾಡಿಸುವ ಬೆದರಿಕೆ ಮಾಲೀಕರು ಹಾಕ್ತಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿಬಂದಿವೆ. ಜನರ ಪಾಲಿನ ಅಕ್ಕಿಯನ್ನ ಬೇರೆಡೆ ಮಾರಾಟ ಮಾಡಿ ರೇಷನ್ ಅಂಗಡಿಯವರು ದುಪ್ಪಟ್ಟು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಇನ್ನು ರೇಷನ್ ಅಂಗಡಿಯಿಂದ ಅಕ್ಕಿ ಸಪ್ಲೈ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರೇಷನ್ ಅಂಗಡಿಯ ಮಾಲೀಕನಿಗೆ ಕೇಳಿದರೆ ಅವರು ಹೇಳುವ ಕಥೆಯೇ ಬೇರೆ. ನಾಲ್ಕೈದು ಕುಟುಂಬದ ಪಡಿತರದಾರರ ಅಕ್ಕಿಯನ್ನ ತೆಗೆದುಕೊಂಡು ಹೋಗಲು ಬಂದು ಗಾಡಿಯಲ್ಲಿ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ. ಅವರು ಅಕ್ಕಿ ತೆಗೆದುಕೊಂಡು ಹೋಗುವ ವಿಡಿಯೋವನ್ನ ಯಾರೋ ಬೇಕು ಅಂತಾ ವೈರಲ್ ಮಾಡಿದ್ದಾರೆ. ಅದರ ಹೊರತಾಗಿ ಯಾವುದೇ ರೀತಿಯಲ್ಲಿ ಅಕ್ರಮವಾಗಿ ಅಕ್ಕಿ ಸಪ್ಲೈ ಮಾಡಿಲ್ಲ ಎಂದು ರೇಷನ್ ಅಂಗಡಿ ಮಾಲೀಕ ಭಾಗ್ಯವಂತ ಪಾಟೀಲ್ ಹೇಳಿದ್ದಾರೆ.
ಆದರೆ ಹಗಲು ಹೊತ್ತಲ್ಲಿ ಸರಿಯಾಗಿ ಪಡಿತರ ವಿತರಿಸದ ರೇಷನ್ ಅಂಗಡಿಯವರು ಯಾರೋ ನಾಲ್ಕೈದು ಜನರ ರೇಷನ್ಗಾಗಿ ರಾತ್ರಿ ಅಂಗಡಿ ಓಪನ್ ಮಾಡಿ ರೇಷನ್ ನೀಡುತ್ತಾರಾ ಅನ್ನೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!
ಕಲಬುರಗಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಂದಾಸ್ ಆಗಿ ಅಕ್ರಮವಾಗಿ ಅಕ್ಕಿ ಸಾಗಾಟ, ಮಾರಾಟ ದಂಧೆ ಜೊತೆಗೆ ರೇಷನ್ ಅಂಗಡಿಯಿಂದ ಅಕ್ಕಿ ಸಪ್ಲೈ ಅಲ್ಲದೆ ರೆಷನ್ ಅಂಗಡಿ ಮಾಲೀಕರು ಅಕ್ಕಿಯ ಬದಲು ಪಡಿತರ ಚೀಟಿದಾರರಿಗೆ ಹಣ ನೀಡುವಂತಹ ದಂಧೆ ನಿರಂತರವಾಗಿ ನಡೆಯುತ್ತಿದ್ದರು ಕೂಡ ಅಧಿಕಾರಿಗಳು ಕಣ್ಣ ಮುಚ್ಚಿ ಕುಳಿತುಕೊಂಡಿರುವುದು ನಿಜಕ್ಕೂ ದುರಂತವೆ ಸರಿ. ಇನ್ನು ಮುಂದಾದ್ರು ಬಡವರ ಪಾಲಿನ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲಕ್ಕೆ ಬ್ರೇಕ್ ಹಾಕುವಂತಹ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.